ಪ್ರಧಾನಿ ಬರ್ತಾರೆ, ಕಾಲೇಜು ವಿದ್ಯಾರ್ಥಿಗಳನ್ನೂ ಕರೆ ತನ್ನಿ; 'ತಪ್ಪಿದರೆ ಪ್ರಾಂಶುಪಾಲರೇ ಹೊಣೆ' ಎಂದೂ ಎಚ್ಚರಿಕೆ!
ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕಾರ್ಯಕ್ರಮಕ್ಕೆ ಕಾಲೇಜು ವಿದ್ಯಾರ್ಥಿಗಳನ್ನು ಕರೆಸುವಂತೆ ಆದೇಶ ಮಾಡಿರುವ ರಾಜ್ಯ ಸರ್ಕಾರ ಇದೀಗ ವಿವಾದಕ್ಕೆ ಒಳಗಾಗುವ ಲಕ್ಷಣಗಳು ಕಾಣಿಸಿಕೊಳ್ಳಲಾರಂಭಿಸಿವೆ. ಮೋದಿ ಕಾರ್ಯಕ್ರಮಕ್ಕೆ ಕಾಲೇಜು ವಿದ್ಯಾರ್ಥಿಗಳನ್ನು ಕರೆದುಕೊಂಡು ಬನ್ನಿ ಎಂದು ಮಾಡಿರುವ ಆದೇಶಕ್ಕೆ ಹಲವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನ.11ರಂದು ಪ್ರಧಾನ ಮಂತ್ರಿಯವರು ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಆಗಮಿಸುವ ಪ್ರಯುಕ್ತ ವಿದ್ಯಾರ್ಥಿಗಳನ್ನು ಕರೆತರುವಂತೆ ಸರ್ಕಾರ ಸುತ್ತೋಲೆಯನ್ನು ಹೊರಡಿಸಿದೆ. ನ. 2ರಂದು ನಡೆದ ಪ್ರಾಂಶುಪಾಲರ ಪೂರ್ವಭಾವಿ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಿದಂತೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲಾ ಸರ್ಕಾರಿ/ಅನುದಾನಿತ/ಅನುದಾನರಹಿತ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರುಗಳು ತಮ್ಮ ಕಾಲೇಜಿನಿಂದ ನಿಗದಿಪಡಿಸಿದಷ್ಟು ವಿದ್ಯಾರ್ಥಿಗಳನ್ನು ಕರೆತರಬೇಕು ಎಂದು ಹೇಳಲಾಗಿದೆ. ಇಂಥ ಕಾಲೇಜಿನಿಂದ ಇಷ್ಟೇ ವಿದ್ಯಾರ್ಥಿಗಳನ್ನೂ ಕರೆ ತರಬೇಕು ಎಂದು ಪಟ್ಟಿಯನ್ನೂ ನೀಡಲಾಗಿದೆ.
ಆಯಾ ಕಾಲೇಜುಗಳಿಗೆ ನೇಮಕ ಮಾಡಿರುವ ಬಸ್ನ ನೋಡಲ್ ಅಧಿಕಾರಿಗಳು ಹಾಗೂ ಪ್ರಾಂಶುಪಾಲರು ನಿಗದಿತ ಸಮಯಕ್ಕೆ ಸರಿಯಾಗಿ ಕಾಲೇಜಿನಿಂದ ಹೊರಡುವ ಬಸ್ನಲ್ಲಿ ಕಾರ್ಯಕ್ರಮಕ್ಕೆ ಕ್ಷೇಮವಾಗಿ ಕರೆತರಲು ಹಾಗೂ ಕಾರ್ಯಕ್ರಮ ಮುಗಿದ ನಂತರ ವಾಪಸ್ ಕರೆದುಕೊಂಡು ಹೋಗಲು ಸೂಚಿಸಿದೆ. ತಪ್ಪಿದ್ದಲ್ಲಿ ಮುಂದಿನ ಆಗು-ಹೋಗುಗಳಿಗೆ ಸಂಬಂಧಪಟ್ಟ ಕಾಲೇಜಿನ ಪ್ರಾಂಶುಪಾಲರೇ ಜವಾಬ್ದಾರರಾಗಿರುತ್ತಾರೆ ಎಂದೂ ಎಚ್ಚರಿಕೆ ನೀಡಿ ಪದವಿಪೂರ್ವ ಶಿಕ್ಷಣ ಇಲಾಖೆಯ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಪ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.