ಪಿಎಂಗೆ ಭದ್ರತಾ ಲೋಪ: ನಿವೃತ್ತ ನ್ಯಾಯಮೂರ್ತಿ ನೇತೃತ್ವದ ತನಿಖೆಗೆ ಸುಪ್ರೀಂ ಅಸ್ತು

ನವದೆಹಲಿ: ಪಂಜಾಬ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತಾ ವ್ಯವಸ್ಥೆಯಲ್ಲಿ ಉಂಟಾದ ಗಂಭೀರ ಲೋಪದ ಸಂಬಂಧ ತನಿಖೆ ನಡೆಸಲು ಪ್ರತ್ಯೇಕ ಸಮಿತಿ ರಚಿಸಲು ಸುಪ್ರೀಂ ಕೋರ್ಟ್ ಸಮ್ಮತಿಸಿದೆ. ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಫಿರೋಜ್ಪುರದಲ್ಲಿ ಆಗಿರುವ ಭದ್ರತಾ ಲೋಪದ ತನಿಖೆ ನಡೆಯಲಿದೆ.
ಚಂಡೀಗಡದ ಡಿಜಿಪಿ, ರಾಷ್ಟ್ರೀಯ ತನಿಖಾ ದಳದ ಐಜಿ, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನ ರಿಜಿಸ್ಟ್ರಾರ್ ಜನರಲ್ ಹಾಗೂ ಪಂಜಾಬ್ ಪೊಲೀಸ್ನ ಎಡಿಜಿಪಿ (ಭದ್ರತೆ) ಅವರನ್ನು ತನಿಖಾ ಸಮಿತಿಯಲ್ಲಿ ಒಳಗೊಳ್ಳುವಂತೆ ಸುಪ್ರೀಂ ಕೋರ್ಟ್ ಸಲಹೆ ನೀಡಿದೆ.
ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಮತ್ತು ಪಂಜಾಬ್ ಸರ್ಕಾರವು ತಮ್ಮ ವಿಚಾರಣೆಗಳನ್ನು ಮುಂದುವರಿಸದಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಭದ್ರತಾ ಲೋಪದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿದೆ. ಭವಿಷ್ಯದಲ್ಲಿ ಇಂತಹ ಭದ್ರತಾ ಲೋಪ ಸಂಭವಿಸದಂತೆ ಖಾತರಿಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.
Supreme Court asks both Centre and Punjab govt not to go ahead with their inquires in the matter.
— ANI (@ANI) January 10, 2022
ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಕೇಂದ್ರದ ಪರವಾಗಿ ಸುಪ್ರೀಂ ಕೋರ್ಟ್ನಲ್ಲಿ ವಾದ ಮಂಡಿಸಿದರು. ಕೇಂದ್ರ ಸರ್ಕಾರದ ನೇತೃತ್ವದ ಸಮಿತಿಯ ತನಿಖೆಯ ಮೇಲೆ ಪಂಜಾಬ್ ಸರ್ಕಾರವು ಅವಿಶ್ವಾಸ ವ್ಯಕ್ತಪಡಿಸಿದೆ. ಇದರ ಬೆನ್ನಲ್ಲೇ ಸುಪ್ರೀಂ ಕೋರ್ಟ್ ಸ್ವತಂತ್ರ ಸಮಿತಿಯನ್ನು ರಚಿಸುವ ಮೂಲಕ ತನಿಖೆಗೆ ಆಗ್ರಹಿಸಿದೆ.
ಪ್ರಧಾನಮಂತ್ರಿ ಮತ್ತು ಬೆಂಗಾವಲು ಪಡೆಯಿದ್ದ ವಾಹನಗಳು ಇದೇ 5ರಂದು ಫಿರೋಜ್ಪುರ್ನ ಮೇಲ್ಸೇತುವೆಯಲ್ಲಿ 15 ನಿಮಿಷ ಸ್ಥಗಿತವಾಗಿದ್ದವು. ಆಗ ರಸ್ತೆಯಲ್ಲಿ ಪ್ರತಿಭಟನೆ ನಡೆಯುತ್ತಿತ್ತು. ಇದು ಭದ್ರತಾ ವೈಫಲ್ಯದ ಚರ್ಚೆಗೆ ಆಸ್ಪದವಾಗಿತ್ತು. ಪ್ರಧಾನಿಯವರು ರ್ಯಾಲಿಯೊಂದರಲ್ಲಿ ಭಾಗವಹಿಸಬೇಕಿತ್ತು. ಆದರೆ, ಭದ್ರತಾ ಲೋಪದ ಬಳಿಕ ಅವರು ಕಾರ್ಯಕ್ರಮದಲ್ಲಿ ಭಾಗವಹಿಸದೆಯೇ ಹಿಂದಿರುಗಿದ್ದರು.