ಪತಿ ಜೊತೆಗಿರುವ ಗೆಳತಿಯನ್ನು ನನ್ನ ವಶಕ್ಕೆ ನೀಡಿ; ಪ್ರಿಯಕರನಿಂದ ನ್ಯಾಯಾಲಯಕ್ಕೆ ಅರ್ಜಿ

ಪತಿ ಜೊತೆಗಿರುವ ಗೆಳತಿಯನ್ನು ನನ್ನ ವಶಕ್ಕೆ ನೀಡಿ; ಪ್ರಿಯಕರನಿಂದ ನ್ಯಾಯಾಲಯಕ್ಕೆ ಅರ್ಜಿ

ವಿಲಕ್ಷಣ ಪ್ರಕರಣ ಒಂದರಲ್ಲಿ ತನ್ನ ಪತಿ ಜೊತೆ ವಾಸವಾಗಿದ್ದ ಮಹಿಳೆಯನ್ನು ಆಕೆಯ ಪ್ರಿಯಕರ ಎಂದು ಹೇಳಲಾದ ವ್ಯಕ್ತಿ ತನ್ನ ವಶಕ್ಕೆ ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾನೆ. ಇಂತಹದೊಂದು ಘಟನೆ ಗುಜರಾತಿನ ಬನಸ್ಕಾಂತದಲ್ಲಿ ನಡೆದಿದ್ದು, ಇದೀಗ ನ್ಯಾಯಾಲಯ ಆತನಿಗೆ 5,000 ರೂಪಾಯಿ ದಂಡ ವಿಧಿಸಿದೆ.

ಈ ವ್ಯಕ್ತಿ ನ್ಯಾಯಾಲಯಕ್ಕೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದು, ತನ್ನ ಗೆಳತಿಯನ್ನು ಬಲವಂತವಾಗಿ ಮದುವೆ ಮಾಡಿಕೊಡಲಾಗಿದೆ. ಆ ಬಳಿಕ ಆಕೆ ಆತನನ್ನು ತ್ಯಜಿಸಿ ನನ್ನೊಂದಿಗೆ ಲೀವ್ ಇನ್ ರಿಲೇಶನ್ಶಿಪ್ ನಲ್ಲಿದ್ದಳು. ಪತಿ ಜೊತೆಗಿನ ಮದುವೆ ಆಕೆಗೆ ಇಷ್ಟವಿಲ್ಲದ ಕಾರಣ ನನ್ನ ವಶಕ್ಕೆ ನೀಡಿ ಎಂದು ಆತ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದ.

ಆದರೆ ಈ ಪ್ರಕರಣದಲ್ಲಿ ವಾದ ನಡೆಸಿದ್ದ ಸರ್ಕಾರಿ ಪರ ವಕೀಲರು, ಪತಿ ಜೊತೆಗೆ ಮಹಿಳೆ ವಾಸವಾಗಿರುವುದನ್ನು ಕಾನೂನಿಗೆ ವಿರುದ್ಧ ಎಂದು ಪರಿಗಣಿಸುವಂತಿಲ್ಲ. ಮದುವೆಯಾಗಿರುವ ಕಾರಣ ಸಹಜವಾಗಿಯೇ ಪತಿ ಜೊತೆ ಇದ್ದಾರೆ ಎಂದು ಹೇಳಿದ್ದರು. ವಾದ - ವಿವಾದ ಆಲಿಸಿದ ನ್ಯಾಯಾಧೀಶರು ಲಿವ್ ಇನ್ ರಿಲೇಷನ್ಶಿಪ್ ನಲ್ಲಿರುವುದನ್ನು ಮಾನ್ಯ ಮಾಡಲಾಗುವುದಿಲ್ಲ ಎಂದು ಹೇಳಿ ಅರ್ಜಿ ಸಲ್ಲಿಸಿದ್ದ ವ್ಯಕ್ತಿಗೆ ದಂಡ ವಿಧಿಸಿದೆ.