ಪಠ್ಯ ಪರಿಷ್ಕರಣೆ ಸಮಿತಿ ವಜಾ ಮಾಡಿ, ಬಿ.ಸಿ ನಾಗೇಶ್ ರಾಜೀನಾಮೆ ನೀಡಲಿ : ಜಿ. ಸಿ. ಚಂದ್ರಶೇಖರ್ ಆಗ್ರಹ

ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪಠ್ಯ ಪರಿಷ್ಕರಣ ಸಮಿತಿ ವಜಾ ಮಾಡಬೇಕು ಹಾಗೂ ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ರಾಜೀನಾಮೆ ನೀಡಬೇಕು ಎಂದು ರಾಜ್ಯಸಭಾ ಸದಸ್ಯ ಜಿ. ಸಿ. ಚಂದ್ರಶೇಖರ್ ಆಗ್ರಹಿಸಿದ್ದಾರೆ.

ಪಠ್ಯ ಪರಿಷ್ಕರಣೆ ಸಮಿತಿ ವಜಾ ಮಾಡಿ, ಬಿ.ಸಿ ನಾಗೇಶ್ ರಾಜೀನಾಮೆ ನೀಡಲಿ : ಜಿ. ಸಿ. ಚಂದ್ರಶೇಖರ್ ಆಗ್ರಹ
ಬೆಂಗಳೂರು: ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪಠ್ಯ ಪರಿಷ್ಕರಣ ಸಮಿತಿ ವಜಾ ಮಾಡಬೇಕು ಹಾಗೂ ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ರಾಜೀನಾಮೆ ನೀಡಬೇಕು ಎಂದು ರಾಜ್ಯಸಭಾ ಸದಸ್ಯ ಜಿ. ಸಿ. ಚಂದ್ರಶೇಖರ್ ಆಗ್ರಹಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಇಂದು ಪಠ್ಯ ಪುಸ್ತಕ ಪರಿಷ್ಕರಣ ಸಮಿತಿ ಮಾಡಿರುವ ಅನಾಹುತ ವಿಕೋಪಕ್ಕೆ ಹೋಗಿದ್ದರೂ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಕಿಡಿಕಾರಿದರು. ಈ ಸಮಿತಿಯ ಕಾರ್ಯವೈಖರಿ ಕುರಿತು ಸಾಹಿತಿಗಳು, ಮಠಾಧೀಶರು ಹಾಗೂ ಕನ್ನಡಪರ ಸಂಘಟನೆಗಳು ಹೋರಾಟ ಮಾಡಿದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಪಠ್ಯಪುಸ್ತಕ ಪರಿಷ್ಕರಣೆ ಮಾಡುವ ಸಮಿತಿಗೆ ಅದಕ್ಕೇ ಆದ ಗೌರವವಿದೆ. ಅದರದೇ ಆದ ತೂಕವಿದೆ. ಅದಕ್ಕೆ ಅರ್ಹವುಳ್ಳ ವ್ಯಕ್ತಿಗಳು ಅಧ್ಯಕ್ಷರಾಗಿ ನೇಮಕವಾಗುತ್ತಿದ್ದರು. ಈ ಸಮಿತಿಗೆ ಅದರದೇ ಆದ ಪ್ರಕ್ರಿಯೆಗಳು ಇರುತ್ತಿದ್ದವು. ಇದುವರೆಗೂ ಈ ಪಠ್ಯ ಪುಸ್ತಕ ಸಮಿತಿ ನೇಮಕ ವಿಚಾರದಲ್ಲಿ ಯಾವುದೇ ಗೊಂದಲ ಆಗಿರಲಿಲ್ಲ. ಈ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಎಂತಹವರು ಆಯ್ಕೆಯಾಗಿರುವವರ ಹಿನ್ನೆಲೆ ನೋಡಿದರೆ ಕನ್ನಡದ ಬಗ್ಗೆ ಇರುವ ಅಭಿಮಾನ, ಬಾವುಟದ ಬಗ್ಗೆ ಅವರು ಕೊಟ್ಟಿರುವ ಹೇಳಿಕೆಗಳು, ಸಾಹಿತಿಗಳ ಬಗ್ಗೆ ಹಾಗೂ ರಾಷ್ಟ್ರಕವಿ ಬಗ್ಗೆ ಮಾಡಿರುವ ಉದ್ಧಟನ ಹಾಗೂ ಕೆಟ್ಟ ಅಭಿಪ್ರಾಯ ತೋರಿರುವ ಉದಾಹರಣೆ ಸಾಕಷ್ಟಿದೆ ಎಂದು ಆರೋಪಿಸಿದರು. ಇಂತಹ ಕೊಳಕು ಮನಸ್ಥಿತಿಯ ವ್ಯಕ್ತಿಯನ್ನು ಸಮಿತಿ ಅಧ್ಯಕ್ಷರನ್ನಾಗಿ ಮಾಡಿ ಪುಸ್ತಕ ಪರಿಷ್ಕರಣೆ ಮಾಡಿದರೆ ಆ ಸ್ಥಾನಕ್ಕೆ ಯಾವ ಬೆಲೆ ಸಿಗುತ್ತದೆ ಎಂಬ ವಿಚಾರವನ್ನು ಸರ್ಕಾರ ಯಾಕೆ ಅರ್ಥ ಮಾಡಿಕೊಂಡಿಲ್ಲ ಎಂದು ಪ್ರಶ್ನಿಸಿದರು. ಅಧ್ಯಕ್ಷರಾಗಿರುವ ವ್ಯಕ್ತಿಯು, ಮೆಟ್ರೋದಲ್ಲಿ ಕನ್ನಡ ಬಳಕೆ ವಿಚಾರ, ಹಿಂದಿ ಹೇರಿಕೆ ವಿಚಾರ ಸಂದರ್ಭದಲ್ಲಿ‘ನನ್ನ ಮೇಲೆ ಹೇರಿಕೆಯಾದ ಮೊದಲ ಭಾಷೆ ಕನ್ನಡ’ ಎಂದಿದ್ದಾರೆ. ಅಂತಹ ವ್ಯಕ್ತಿಯನ್ನು ಸಮಿತಿ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಇದರ ಜತೆಗೆ, ಕನ್ನಡದ ಬಾವುಟದ ಬಗ್ಗೆ ಜನ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಇಂತಹ ಕನ್ನಡ ಬಾವುಟ ಬೇಕು ಎಂಬ ವಿಚಾರ ಚರ್ಚೆ ಸಂದರ್ಭದಲ್ಲಿ ಈತ ಹಗ್ಗದ ಮೇಲೆ ಇರುವ ಒಳಉಡುಪುಗಳನ್ನು ತೋರಿಸಿ ಇಲ್ಲಿಯೂ ಸಾಕಷ್ಟು ಬಾವುಟ ಹಾರಾಡುತ್ತಿವೆ ಎಂದು ಹೇಳಿ ನಾಡ ಬಾವುಟಕ್ಕೆ ಅಪಮಾನ ಮಾಡಿದ ದುರ್ದೈವಿ ಹಾಗೂ ಕೊಳಕು ಮನುಷ್ಯ ಈತ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಈತ ಕುವೆಂಪು ಅವರ ಬಗ್ಗೆಯು ಮಾತನಾಡಿದ್ದು, ಕುವೆಂಪು ಅವರು ಕರ್ನಾಟಕ ಏಕೀಕರಣಕ್ಕೂ ಮುನ್ನವೇ ದೇಶಕ್ಕೆ ಸ್ವಾತಂತ್ರ್ಯ ಬರುವ ಮುನ್ನ ಅಂದರೆ 1924ರಲ್ಲಿ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ ಎಂದು ಬರೆದು, ಆಗಲೇ ಭಾರತ ರಾಷ್ಟ್ರಕ್ಕೆ ಹಾಗೂ ಕರ್ನಾಟಕ ರಾಜ್ಯಕ್ಕೆ ಇದ್ದ ಬಾಂದವ್ಯವನ್ನು ವರ್ಣಿಸಿದ್ದರು. ಅದರ ಬಗ್ಗೆಯೂ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಈ ಅವಹೇಳನಕಾರಿ ಹೇಳಿಕೆ ನನ್ನದಲ್ಲ, ನನಗೆ ವಾಟ್ಸಪ್ ನಲ್ಲಿ ಫಾರ್ವರ್ಡ್ ಬಂದಿತ್ತು ಎಂದು ಸಮರ್ಥನೆ ನೀಡಿದ್ದಾರೆ. ವಾಟ್ಸಪ್ ನಲ್ಲಿ ಬಂದಿದ್ದನ್ನು ಪೋಸ್ಟ್ ಮಾಡಿದರೂ ಆ ವ್ಯಕ್ತಿಯ ವ್ಯಕ್ತಿತ್ವ ಎಂತಹದು ಎಂಬುದು ಸಾಬೀತಾಗುತ್ತದೆ. ಬಸವಣ್ಣನ ಬಗ್ಗೆ ಮಾತನಾಡಿದ ಹಿನ್ನೆಲೆಯಲ್ಲಿ ಆ ಸಮಾಜದ ಸ್ವಾಮೀಜಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕುವೆಂಪು ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನಿರ್ಮಲಾನಂದ ಶ್ರೀಗಳು ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದ್ದಾರೆ. ಸಮಿತಿಯ ಅಧ್ಯಕ್ಷನ ಪರಿಸ್ಥಿತಿ ಹೀಗಾದರೆ ಸಮಿತಿ ಕತೆ ಏನು? ಎಂದು ಪ್ರಶ್ನಿಸಿದರು. ಈ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯಲ್ಲಿ 9 ಸದಸ್ಯರಿದ್ದು, ಅದರಲ್ಲಿ 7 ಮಂದಿ ಒಂದೇ ಸಮುದಾಯಕ್ಕೆ ಸೇರಿದವರು. ರಾಜಾರಾಮ್ ಹೆಗಡೆ ಅಧ್ಯಕ್ಷರು, ಸತ್ಯಪ್ರಕಾಶ್- ವಿದ್ಯಾವರ್ಧಕ ಸಂಘ, ರಂಗನಾಥ್- ರಾಷ್ಟ್ರೋತ್ಥಾನ, ಬಿ.ಕೆ ವಾಸುಕಿ- ವಿದ್ಯಾಭವನ, ಅನಂತ ಕೃಷ್ಣ ಭಟ್- ವಿಶ್ವ ಹಿಂದೂ ಪರಿಷತ್ ಮುಖಂಡರು, ವಿಠಲ ಪೊತೆದಾರ್- ಎಮಿತಿಕ್ ಸೊಸೈಟಿ ಸದಸ್ಯರು. ಇವರೆಲ್ಲರೂ ಒಂದೇ ಕೋಮಿಗೆ ಸೇರಿದವರಾಗಿದ್ದಾರೆ. ಈ ಸಮಿತಿಯಲ್ಲಿ ಮಹಿಳೆಯರಿಗೆ, ಬೇರೆ ವರ್ಗದವರಿಗೆ ಯಾವುದೇ ಸ್ಥಾನ ನೀಡಿಲ್ಲ. ಇನ್ನು ಈ ಸಮಿತಿ ಹೊಸದಾಗಿ ಸೇರಿಸಿರುವ 10 ಬರಹದಲ್ಲಿ 8 ಬರಹ ಒಂದೇ ಸಮುದಾಯಕ್ಕೆ ಸೇರಿದೆ. ಕೆ.ಬಿ ಹೆಡೆಗೆವಾರ್, ಗಜಾನನ ಶರ್ಮಾ, ಪರಮೇಶ್ವರ್ ಭಟ್, ಗಣೇಶ್ ಶತಾವದಾನಿ, ಬನ್ನಂಜೆ ಗೋವಿಂದಾಚಾರ್ ಹಾಗೂ ಚಿದಾನಂದ ಅವರ ಬರಹ ಸೇರಿಸಲಾಗಿದೆ. ಇನ್ನು ಹಿಂದುಳಿದ ವರ್ಗಕ್ಕೆ ಸೇರಿದ ಪಿ. ಲಂಕೇಶ್, ಅರವಿಂದ ಮಾಲಗತ್ತಿ, ಸಾರಾ ಅಬುಬಕರ್, ಎಲ್. ಬಸವರಾಜು, ಎನ್ ನೀಲಾ, ಬಿ.ಟಿ ಲಲಿತಾ ನಾಯಕ್ ಅವರ ಬರಹ ಕೈಬಿಟ್ಟಿದ್ದಾರೆ. ಇಷ್ಟೆಲ್ಲಾ ಆದರೂ ಸಚಿವರಾಗಲಿ, ಮುಖ್ಯಮಂತ್ರಿಗಳು ಈ ಬಗ್ಗೆ ಗಮನಹರಿಸಿಲ್ಲ. ನಾಗೇಶ್ ಅವರು ನಾವು ಪರಿಷ್ಕರಣೆ ನಿಲ್ಲಿಸಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ. ಜತೆಗೆ 27 ಮೇ, ಈ ಪುಸ್ತಕ ಎಲ್ಲೆಡೆ ವಿತರಿಸಬೇಕು ಎಂದು ಸಮಿತಿಯ ವ್ಯವಸ್ಥಾಪಕ ನಿರ್ದೇಶಕರು ಆದೇಶ ನೀಡಿದ್ದಾರೆ. ಬಸವಣ್ಣ ವಿಚಾರ ಕಡಿಮೆ ಮಾಡಿದ್ದು, ಧರ್ಮದ ವಿಚಾರದಲ್ಲಿ ಏರುಪೇರು ಬಂಡ ಕಾರಣ 2 ಸ್ವಾಮೀಜಿಗಳು ಮುಖ್ಯಮಂತ್ರಿಗಳಿಗೆ ಆಕ್ಷೇಪವ್ಯಕ್ತಪಡಿಸಿದ್ದಾರೆ. ಹಂಪಾ ನಾಗರಾಜ್, ಪ್ರೋ. ಸಿದ್ದರಾಮಯ್ಯನರಿಂದ ಹಲವು ಸಾಹಿತಿಗಳು ತಮ್ಮ ಲೇಖನ ಹಿಂಪಡೆಯುತ್ತಿದ್ದಾರೆ. 10ನೆ ತರಗತಿ ಲೇಖಕಿ ತಮ್ಮ ಬರಹ ಹಿಂಪಡೆದಿದೆ. ಕಾರಣ 10ನೇ ತರಗತಿ ಪ್ರಥಮ ಭಾಷೆ ಕನ್ನಡ ಪುಸ್ತಕದಲ್ಲಿ ಒಂದು ಲೇಖನವಿದೆ. ಅದರಲ್ಲಿ ಮಹಿಳೆಯರಿಗೆ ಕಳಂಕ ತರುವ ಪದ್ಯ ಸೇರಿಸಲಾಗಿದೆ. ಹೀಗಾಗಿ ಲೇಖಕಿಯೊಬ್ಬರು ತಮ್ಮ ಲೇಖನ ಹಿಂಪಡೆದಿದ್ದಾರೆ. ಇನ್ನು ಅಂಬೇಡ್ಕರ್ ಅವರ ‘ಅಂಬೇಡ್ಕರ್ ಅವರು ಜಗತ್ತಿನ ಜಲತಂತ್ರಜ್ಞ, ವಾಯುತಜ್ಞರು, ವೈದ್ಯರು, ಕಂಪ್ಯೂಟರ್ ತಜ್ಞರು, ಪ್ರಾಧ್ಯಾಪಕರು, ವಕೀಲರು, ರಾಕೆಟ್ ತಂತ್ರಜ್ಞರು, ಪ್ರಪಂಚದಲ್ಲಿ ಚಕ್ರ ಮತ್ತು ಬೆಂಕಿ ಉಪಯೋಗ ಕಂಡುಹಿಡಿದವರು’ ಬಗ್ಗೆ ಪಠ್ಯದಲ್ಲಿ ಲೇವಡಿ ಮಾಡಿದ್ದಾರೆ. ಇಂತಹ ವಿಕೃತಿ ಮನಸ್ಥಿತಿಯ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ಹೇಗೆ ಮಾಡಿದರು? ಸಮಾಜದ ಪ್ರತಿ ವರ್ಗ ಈ ಸಮಿತಿ ವಿರುದ್ಧ ಧ್ವನಿ ಎತ್ತುತ್ತಿದ್ದರೂ ಸರ್ಕಾರ ಮಾತ್ರ ಮೌನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರಕ್ಕೂ ಇದೇ ರೀತಿ ಗಲಾಟೆ ವಾತಾವರಣ ಬೇಕಾಗಿದೆ. ಕಾರಣ, ಸರ್ಕಾರದ ಆಡಳಿತ ಹದಗೆಟ್ಟು ನಿಂತಿದೆ ಇಂತಹ ಸಂದರ್ಭದಲ್ಲಿ ಇಂತಹ ಗಲಭೆ ಸೃಷ್ಟಿಸಿ ತನ್ನ ವೈಫಲ್ಯ ಮುಚ್ಚಿಕೊಳ್ಳುವ ಹುನ್ನಾರವಾಗಿದೆ. ಇನ್ನು ಮಂಡ್ಯದಲ್ಲಿ ರೈತರ ಚಳುವಳಿ ಪರ ಮಾತನಾಡಿದರು ಎಂಬ ಕಾರಣಕ್ಕೆ ಹಂಪನಾ ವಿರುದ್ಧ ಪೊಲೀಸ್ ಠಾಣೆಯಲ್ಲಿ ಕರೆಸಿ ಮುಚ್ಚಳಿಕೆ ಪತ್ರ ಬರೆಸಿಕೊಳ್ಳುವಾಗ ಅವರಿಗೆ ಯಾರೂ ಅವರ ಬೆಂಬಲಕ್ಕೆ ನೀಡುವುದಿಲ್ಲ. ಆದರೆ ಈ ವಿಕೃತ ವ್ಯಕ್ತಿಗೆ ಸರ್ಕಾರ ಇ,ಟು ಬೆಂಬಲ ನೀಡುತ್ತಿದೆ. ಆ ಸಮಿತಿ ಕಿತ್ತೊಗೆದು ಜನರಿಗೆ, ನಮ್ಮ ಮಕ್ಕಳ ಹಿತಕ್ಕೆ ಬೇಕಾಗಿರುವುದನ್ನು ನೀಡಲು ಸರ್ಕಾರ ಹಿಂದೇಟು ಹಾಕುತ್ತಿದೆ. ಸರ್ಕಾರಕ್ಕೆ ನಾಚಿಕೆಯಾಗುವುದಿಲ್ಲವೇ? ಎಂದು ಕಿಡಿಕಾರಿದರು. ಕುವೆಂಪು ವಿರುದ್ಧ ಮಾತನಾಡಿದ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳಿ ಎಂದು ನಿರ್ಮಲಾನಂದ ಶ್ರೀಗಳು ಹೇಳಿದರೆ, ಸಚಿವ ಅಸ್ವತ್ಥ್ ನಾರಾಯಣ ಹಾಗೂ ಸದಾನಂದ ಗೌಡರು ಈ ವ್ಯಕ್ತಿಗೆ ಬೆಂಬಲವಾಗಿ ಮಾತನಾಡಿದ್ದಾರೆ. ಇದು ಸ್ವಾಮೀಜಿಗಳು ಹಾಗು ಕುವೆಂಪು ಅವರಿಗೆ ನೀಡುವ ಗೌರವವೇ? ಭಕ್ತಿ ಬಂಡಾರಿ ಬಸವಣ್ಣನವರ ಬಗ್ಗೆ ಪ್ರಧಾನಿಗಳು, ಹಣಕಾಸು ಸಚಿವರು ತಮ್ಮ ಬಜೆಟ್ ನಲ್ಲಿ ವಚನ ಉಲ್ಲೇಕಿಸಿದ್ದಾರೆ. ಅಂತಹ ಬಸವಣ್ಣನವರ ವಿಚಾರ ತಿರುಚುತ್ತಿರುವ ಅವಿವೇಕಿಯನ್ನು ಸರ್ಕಾರ ಇನ್ನು ಬೆಂಬಲಿಸಿ ಮುಂದುವರಿಸುತ್ತಿದೆ ಎಂದರೆ ಇದಕ್ಕಿಂತ ಕೆಟ್ಟ ಪ್ರವೃತ್ತಿ ಮತ್ತೊಂದಿಲ್ಲ. ಪಠ್ಯಪುಸ್ತಕ ರಾಜಕೀಯದಿಂದ ದೂರ ಇರಬೇಕಿತ್ತು. ಇದು ಜಾತಿ, ಧರ್ಮ ಹಾಗೂ ಲಿಂಗ ವೈರುಧ್ಯ ಇರದೇ ಎಲ್ಲರನ್ನು ಒಟ್ಟಾಗಿ ಪರಿಗಣಿಸಿ ಬಹು ಸಂಸ್ಕೃತಿ ಒಳಗೊಂಡು ರಚನೆಯಾಗಬೇಕು. ವಿದ್ಯಾರ್ಥಿಗಳೇ ದೇಶದ ಭವಿಷ್ಯ. ಆರೆ ಮಕ್ಕಳ ತಲೆಗೆ ಬುದ್ಧ, ಬಸವ, ಅಂಬೇಡ್ಕರ್ ಅವರ ಬಗ್ಗೆ ಋಣಾತ್ಮಕ ಅಂಶ ತುಂಬುವ ಪ್ರಯತ್ನ ಮಾಡುತ್ತಿದ್ದಾರೆ. ಭಗತಿ ಸಿಂಗ್ ಪಠ್ಯ ಪುಸ್ತಕ ಬಿಡಲಾಗಿದೆ. ಈ ಎಲ್ಲದರ ಜವಾಬ್ದಾರಿಯನ್ನು ಸಮಿತಿ, ಶಿಕ್ಷಣ ಹಾಗೂ ಸಚಿವರೇ ಹೊಣೆ ಹೊರಬೇಕು. ಸಚಿವರು ರಾಜೀನಾಮೆ ನೀಡಬೇಕು. ಈ ಸಮಿತಿಯು ನಾನು ಶಿಕ್ಷಣ ಸಚಿವನಾಗುವ ಮುನ್ನವೇ ನೇಮಕ ಮಾಡಲಾಗಿತ್ತು ಎಂದು ನಾಗೇಶ್ ಹೇಳಿದ್ದಾರೆ. ಆದರೆ ಸುರೇಶ್ ಕುಮಾರ್ ಅವರು ನಾನು ಈ ಸಮಿತಿ ನೇಮಿಸಿಲ್ಲ, ಅವರು ಹಲವು ದೂರುಗಳನ್ನು ತಂದಾಗ ಅವುಗಳ ಪಟ್ಟಿ ಮಾಡಿಕೊಂಡು ಬನ್ನಿ ಎಂದಿದ್ದೆ ಅಷ್ಟೇ ಎಂದು ಸ್ಪಷ್ಟನೆ ನೀಡಿದ್ದಾರೆ. ಒಂದು ಪಕ್ಷದ ಪರ, ಒಂದು ಜನಾಂಗ ಒಲೈಸುವ ವ್ಯಕ್ತಿಯ ನೇತೃತ್ವದ ಸಮಿತಿ ಬೇಕೇ ಎಂದು ಆಲೋಚಿಸಬೇಕು. ಇಡೀ ಸಮಿತಿ ವಜಾ ಮಾಡಿ, ನಾಗೇಶ್ ರಾಜೀನಾಮೆ ಪಡೆಯಬೇಕು ಎಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.