ನ್ಯಾಯಾಂಗ ನಿಂದನೆಗೈದ ವಿಶೇಷ ತಹಸೀಲ್ದಾರ್​ಗೆ 3 ತಿಂಗಳು ಜೈಲು ಶಿಕ್ಷೆ

ನ್ಯಾಯಾಂಗ ನಿಂದನೆಗೈದ ವಿಶೇಷ ತಹಸೀಲ್ದಾರ್​ಗೆ 3 ತಿಂಗಳು ಜೈಲು ಶಿಕ್ಷೆ

ಬಾಗಲಕೋಟೆ: ನ್ಯಾಯಾಂಗ ನಿಂದನೆ ಮಾಡಿದ ವಿಶೇಷ ತಹಸೀಲ್ದಾರ್​ಗೆ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ರಬಕವಿ-ಬನಹಟ್ಟಿ ತಾಲೂಕಿನ ವಿಶೇಷ ತಹಸೀಲ್ದಾರ್​ ಎಸ್​.ಬಿ. ಕಾಂಬಳೆ ಶಿಕ್ಷೆಗೊಳಗಾದ ಅಧಿಕಾರಿ.

ನಾವಲಗಿ ಗ್ರಾಮದ ಅಣ್ಣಪ್ಪ ಮಾಂಗ ಹಾಗೂ ಇತರರು ತಹಸೀಲ್ದಾರರ ವಿರುದ್ಧ ಜಮಖಂಡಿಯಲ್ಲಿ ನ್ಯಾಯಾಲಯ ನಿಂದನೆ ಪ್ರಕರಣ ದಾಖಲಿಸಿದ್ದರು. ಈ ಮೇರೆಗೆ ವಿಚಾರಣೆ ನಡೆಸಿದ್ದ ಬನಹಟ್ಟಿಯ ಹಿರಿಯ ದಿವಾಣಿ ನ್ಯಾಯಾಧೀಶರಾದ ಕಿರಣಕುಮಾರ ವಡಗೇರಿ ಈ ಆದೇಶ ಹೊರಡಿಸಿದ್ದಾರೆ.

ಕಾಂಬಳೆ ಅವರು ಕಂದಾಯ ನಿರೀಕ್ಷಕರಾಗಿದ್ದಾಗ ಮಾಡಿದ್ದ ಉತಾರ ಬದಲಾವಣೆಯಲ್ಲಿ ನ್ಯಾಯಾಲಯದ ಆದೇಶ ಉಲ್ಲಂಘನೆ ಆಗಿದೆ ಎಂದು ಆರೋಪಿಸಲಾಗಿತ್ತು. ಬನಹಟ್ಟಿ ನ್ಯಾಯಾಲಯ ಹಾಗೂ ರಜಾಕಾಲದ ಜಿಲ್ಲಾ ನ್ಯಾಯಾಲಯಗಳು ಎರಡು ಸಲ ಸ್ಟೇ ಆದೇಶ ಕೊಟ್ಟಿದ್ದವು. ಈ ಬಗ್ಗೆ ಜಿಲ್ಲಾಧಿಕಾರಿ, ತಹಸೀಲ್ದಾರ್​ಗೆ ತಿಳುವಳಿಕೆ ಪತ್ರ ಕೊಡಲಾಗಿತ್ತು. ಅದಾಗ್ಯೂ ಕಾಂಬಳೆ ಅವರು ಉತಾರದಲ್ಲಿ ಹೆಸರು ಬದಲಾವಣೆ ಮಾಡಿದ್ದರು. ಈ ಮೂಲಕ ನ್ಯಾಯಾಲಯದ ಆದೇಶ ಪಾಲಿಸದೆ ಉದ್ದೇಶಪೂರ್ವಕ ಬೇಕಾಬಿಟ್ಟಿ ಕೆಲಸ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಪ್ರಕರಣದಲ್ಲಿ ಫಿರ್ಯಾದಿ ಪರ ನ್ಯಾಯವಾದಿ ಈಶ್ವರಚಂದ್ರ ಭೂತಿ ಹಾಗೂ ಬಸವರಾಜ ಭೂತಿ ವಾದ ಮಂಡಿಸಿದ್ದರು.