ನಾ ನಾಯಕಿ ಸಮಾವೇಶ: ಲಕ್ಷಾಂತರ ಮಂದಿ ನಿರೀಕ್ಷೆ

ಬೆಂಗಳೂರು: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ನೇತೃತ್ವದಲ್ಲಿ ನಡೆಯಲಿರುವ “ನಾ ನಾಯಕಿ’ ಸಮಾವೇಶಕ್ಕಾಗಿ ಈಗಾಗಲೇ ಕಾಂಗ್ರೆಸ್ ವತಿಯಿಂದ ಪಂಚಾಯತ್, ಸಹಕಾರ ಸಂಘಗಳಲ್ಲಿ ಸ್ಪರ್ಧಿಸಿದ ಮಹಿಳಾ ನಾಯಕಿಯರಿಗೆ ಆಹ್ವಾನ ನೀಡಲಾಗಿದೆ.
ರಾಜ್ಯದ ಪ್ರತಿ ಬೂತ್, ಪಂಚಾಯತ್‌ಗಳಿಂದ ಕನಿಷ್ಠ 3-10 ಮಹಿಳೆಯರು ಈ ಸಮಾವೇಶದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಗ್ರಾಮ ಪಂಚಾಯತ್, ಜಿಲ್ಲಾ ಪಂಚಾಯತ್, ಪುರಸಭೆ ಮತ್ತು ನಗರ ಸಭೆ ಸಹಿತ ಸ್ಥಳೀಯ ಸಂಸ್ಥೆಗಳ ಹಾಲಿ ಮತ್ತು ಮಾಜಿ ಮಹಿಳಾ ಸದಸ್ಯೆಯರಿಗೂ ಕಾಂಗ್ರೆಸ್ ಮಹಿಳಾ ಘಟಕ ಆಹ್ವಾನ ನೀಡಿದೆ.
ಜತೆಗೆ ವಿವಿಧ ದಲಿತ, ಕೃಷಿ ಸಂಘಟನೆಯರ ನಾಯಕಿಯರು, ಆಶಾ ಕಾರ್ಯಕರ್ತೆಯರು ಕೂಡ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಮಾವೇಶದಲ್ಲಿ ಪ್ರಿಯಾಂಕ ಗಾಂಧಿ ಮಹಿಳಾ ಸಬಲೀಕರಣದ ಬಗ್ಗೆ ಮತ್ತು ಮಹಿಳೆಯರ ಶ್ರೇಯೋಭಿವೃದ್ದಿಗಾಗಿ ಕಾಂಗ್ರೆಸ್ ನೀಡಿರುವ ಯೋಜನಗೆಳ ಬಗ್ಗೆ ಬೆಳಕು ಚೆಲ್ಲುವ ನಿರೀಕ್ಷೆಯಿದೆ. ಹಾಗೆಯೇ ಮಹಿಳೆಯರ ಸಬಲೀಕರಣಕ್ಕಾಗಿ ಹಲವು ಭರವಸೆಗಳನ್ನು ನೀಡುವ ಸಾಧ್ಯತೆ ಇದೆ.
ಮಹಿಳೆಯರಿಗೆ ಹೆಚ್ಚಿನ ಟಿಕೆಟ್ ನೀಡಿ
ಸಮಾವೇಶದಲ್ಲಿ ರಾಜ್ಯ ಕಾಂಗ್ರೆಸ್‌ನ ಮಹಿಳಾ ಘಟಕ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಟಿಕೆಟ್ ನೀಡುವಂತೆ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಗೆ ಒಕ್ಕೊರಲಿನಿಂದ ಮನವಿ ಮಾಡುವ ಸಾಧ್ಯತೆ ಇದೆ. ರಾಜ್ಯದ 74 ವಿಧಾನ ಸಭಾಕ್ಷೇತ್ರಗಳಲ್ಲಿ ಮಹಿಳಾ ಆಕಾಂಕ್ಷಿಗಳು ಕಾಂಗ್ರೆಸ್ ಟಿಕೆಟ್ ಬಯಸಿದ್ದಾರೆ. ಇದರಲ್ಲಿ 30 ಮಹಿಳೆಯರು ಕೈ ಟಿಕೆಟ್‌ಗಾಗಿ ಬೇಡಿಕೆ ಇಟ್ಟಿದ್ದಾರೆ.ರಾಜ್ಯದ ವಿವಿಧಡೆಗಳಲ್ಲಿ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು 109 ಮಹಿಳಾ ಅರ್ಜಿ ಸಲ್ಲಿಸಿದ್ದಾರೆ.
ಶಾಸಕರಿಗೆ, ಡಿಸಿಸಿ ಅಧ್ಯಕ್ಷರಿಗೆ ಹೊಣೆ
ನಾ ನಾಯಕಿ ಕಾರ್ಯಕ್ರಮದ ಮೂಲಕ ಕಾಂಗ್ರೆಸ್ ಯುವ ಮಹಿಳಾ ಮತದಾರರತ್ತ ದೃಷ್ಟಿ ನೆಟ್ಟಿದೆ. ಹೀಗಾಗಿ ಈ ಸಮಾವೇಶಕ್ಕೆ ಮಹಿಳೆಯರ ಜತೆಗೆ ಯುವತಿಯರನ್ನು ಅಧಿಕ ಸಂಖ್ಯೆಯಲ್ಲಿ ಸೇರಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. ಬೆಂಗಳೂರು ಸುತ್ತಮುತ್ತಲ ಪ್ರದೇಶಗಳಿಂದ ಅಧಿಕ ಸಂಖ್ಯೆಯಲ್ಲಿ ಮಹಿಳೆಯರನ್ನು ಸಮಾವೇಶಕ್ಕೆ ಸೇರಿಸುವ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಆಯಾ ಜಿಲ್ಲೆಗಳಿಂದ ಅಧಿಕ ಸಂಖ್ಯೆಯಲ್ಲಿ ಮಹಿಳೆಯರನ್ನು ಸಮಾವೇಶಕ್ಕೆ ಕರೆತರುವ ಜವಾಬ್ದಾರಿಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ಮತ್ತು ಶಾಸಕರಿಗೆ ಕೆಪಿಸಿಸಿ ವಹಿಸಿದೆ.
ಆ ಹಿನ್ನೆಲೆಯಲ್ಲಿಯೇ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಮೈಸೂರು, ಚಿಕ್ಕಬಳ್ಳಾಪುರ. ಕೋಲಾರ, ತಮಕೂರು, ಹಾಸನ, ಚಿತ್ರದುರ್ಗ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರನ್ನು ಸಮಾವೇಶಕ್ಕೆ ಕರೆತರುವ ನಿಟ್ಟಿನಲ್ಲಿ ಡಿಸಿಸಿ ಅಧ್ಯಕ್ಷ ಮತ್ತು ಹಾಲಿ ಶಾಸಕರು ಮುಂದಾಗಿದ್ದಾರೆ.