ನಾಳೆ ಕರ್ನಾಟಕ ಬಂದ್ ಆಗೇ ಆಗುತ್ತೆ: ವಾಟಾಳ್ ನಾಗರಾಜ್

ಬೆಂಗಳೂರು: ಕನ್ನಡ ಧ್ವಜಕ್ಕೆ ಬೆಂಕಿ ಇಟ್ಟು, ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನ ಭಗ್ನಗೊಳಿಸಿ ಪುಂಡಾಟ ಮೆರೆದ ಎಂಇಎಸ್ ಮತ್ತು ಶಿವಸೇನೆ ವಿರುದ್ಧ ಸಿಡಿದೆದ್ದಿರುವ ಕನ್ನಡಪರ ಸಂಘಟನೆಗಳು ಕರ್ನಾಟಕದಲ್ಲಿ ಎಂಇಎಸ್ ನಿಷೇಧಕ್ಕೆ ಆಗ್ರಹಿಸಿ ಬೀದಿಗಿಳಿದು ಹೋರಾಟ ನಡೆಸುತ್ತಿವೆ.
ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಗುರುವಾರ ಮಾತನಾಡಿದ ವಾಟಾಳ್ ನಾಗಾರಾಜ್, ನೂರಾರು ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿದ್ದು ನಾಳೆ ಕರ್ನಾಟಕ ಬಂದ್ ಆಗೇ ಆಗುತ್ತೆ ಎಂದರು. ಇದೇ ವೇಳೆ ಮೈಸೂರು ಬ್ಯಾಂಕ್ ವೃತ್ತದಲ್ಲಿ ಹೈಡ್ರಾಮ ನಡೆದಿದ್ದು, ಮಹಿಳಾ ಕಾರ್ಯಕರ್ತೆಯೊಬ್ಬರು ಪೊಲೀಸರ ಜತೆ ಕಿರಿಕ್ ಮಾಡಿದ್ದಾರೆ.
ಕರ್ನಾಟಕದಲ್ಲಿ ಎಂಇಎಸ್ ಸಂಘಟನೆಯನ್ನು ಬ್ಯಾನ್ ಮಾಡಬೇಕು. ಎಂಇಎಸ್ ಕಾರ್ಯಕರ್ತರು ಕನ್ನಡ ಬಾವುಟಕ್ಕೆ ಬೆಂಕಿ ಇಟ್ಟಿದ್ದಾರೆ. ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ ಮಾಡಿ ವಿಕೃತಿ ಮೆರೆದಿದ್ದಾರೆ. ಇಂತಹ ಕಿಡಿಗೇಡಿ ಸಂಘಟನೆಯನ್ನು ಯಾವುದೇ ಕಾರಣಕ್ಕೂ ರಕ್ಷಿಸಬಾರದು ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ವಾಟಾಳ್ ನಾಗರಾಜ್, ನಾಳಿನ ಬಂದ್‌ಗೆ ನೂರಾರು ಸಂಘಟನೆಗಳು ಬೆಂಬಲ ನೀಡಿವೆ. ಇದು ಕನ್ನಡಿಗರ ಸ್ವಾಭಿಮಾನದ ಬಂದ್. ಎಲ್ಲರೂ ಬಂದ್‌ಗೆ ಬೆಂಬಲ ಸೂಚಿಸಬೇಕು ಎಂದು ಮನವಿ ಮಾಡಿದರು.
ಕರವೇ ನಾರಾಯಣ ಗೌಡರ ಬಣ ರಾಜಭವನ ಮುತ್ತಿಗೆ ಹಾಕಿರುವುದು ಒಳ್ಳೆಯ ಸಂಗತಿ. ಇದರಿಂದಾಗಿ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟುವ ಕೆಲಸ ಮಾಡ್ತಿದ್ದಾರೆ ಎಂದು ವಾಟಾಳ್ ನಾಗರಾಜ್ ಹೇಳಿದರು.
ಪ್ರತಿಭಟನೆ ನಡೆಸುತ್ತಿದ್ದ ಕರವೇ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆಯಲು ಮುಂದಾಗುತ್ತಿದ್ದಂತೆ ಮಹಿಳಾ ಕಾರ್ಯಕರ್ತೆಯೊಬ್ಬರು ಹೈಡ್ರಾಮ ಮಾಡಿದ್ದಾರೆ.