ನಾನು ಮಾಡಿದ ಒಂದೇ ಒಂದು ಅಪರಾಧ ಯಾವುದೆಂದರೆ. ಬೈಡೆನ್ ವಿರುದ್ಧ ಟ್ರಂಪ್ ವಾಗ್ದಾಳಿ
ನ್ಯೂಯಾರ್ಕ್: ಬಾಯಿ ಮುಚ್ಚಿಕೊಂಡು ಸುಮ್ಮನಿರಲು ನೀಲಿ ತಾರೆಗೆ ಹಣ ನೀಡಿದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ಬೆನ್ನಲ್ಲೇ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹಾಲಿ ಅಧ್ಯಕ್ಷ ಜೋ ಬೈಡೆನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
76 ವರ್ಷದ ಟ್ರಂಪ್ ಫ್ಲೊರಿಡಾದಲ್ಲಿರುವ ತಮ್ಮ ಮನೆಯಿಂದ ಬೆಂಬಲಿಗರು ಮತ್ತು ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದರು. ದೇಶವು ನರಕಕ್ಕೆ ಹೋಗುತ್ತಿದೆ. ಅಮೆರಿಕದಲ್ಲಿ ಈ ರೀತಿ ನಡೆಯುತ್ತದೆ ಎಂದು ನಾನು ಎಂದಿಗೂ ಅಂದುಕೊಂಡಿರಲಿಲ್ಲ. ನಾಶ ಮಾಡಲು ನೋಡುವವರಿಂದ ನಮ್ಮ ದೇಶವನ್ನು ನಿರ್ಭೀತಿಯಿಂದ ರಕ್ಷಿಸಿದ್ದೇ ನಾನು ಮಾಡಿದ ಒಂದೇ ಒಂದು ಅಪರಾಧ ಎಂದರು.
ನಾವು ಅಮೆರಿಕ ಇತಿಹಾಸದ ಕರಾಳ ಸಮಯದಲ್ಲಿ ಜೀವಿಸುತ್ತಿರುವಾಗ, ಕನಿಷ್ಠ ಈ ಕ್ಷಣಕ್ಕಾದರೂ ನಾನು ಮಹಾನ್ ಉತ್ಸಾಹದಲ್ಲಿದ್ದೇನೆ ಎಂದು ನಾನು ಹೇಳಬಲ್ಲೆ. ನಮ್ಮ ದೇಶವು ನರಕಕ್ಕೆ ಹೋಗುತ್ತಿದೆ. ಗಡಿಗಳನ್ನು ಮುಕ್ತವಾಗಿಸಿದ್ದಕ್ಕೆ ಮತ್ತು ಅಫ್ಘಾನಿಸ್ತಾನದಿಂದ ಸೈನ್ಯವನ್ನು ಹಿಂತೆಗೆದುಕೊಂಡ ನಿರ್ಧಾರಗಳಿಂದಾಗಿ ಜಗತ್ತು ಈಗಾಗಲೇ ನಮ್ಮನ್ನು ನೋಡಿ ನಗುತ್ತಿದೆ ಎಂದು ಟ್ರಂಪ್ ಕಿಡಿಕಾರಿದ್ದಾರೆ.
ಕ್ರಿಮಿನಲ್ ಪ್ರಕರಣದ ವಿಚಾರಣೆಗಾಗಿ ನ್ಯೂಯಾರ್ಕ್ನ ಕೋರ್ಟ್ಗೆ ಮಂಗಳವಾರ ಮಧ್ಯಾಹ್ನ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಜರಾಗುತ್ತಿದ್ದಂತೆಯೇ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಅವರ ಬೆರಳಚ್ಚು ಪಡೆಯುವ, ಭಾವಚಿತ್ರ ತೆಗೆಯುವ ಮತ್ತು ಅಧಿಕೃತವಾಗಿ ಆರೋಪ ಹೊರಿಸುವ ಕಾರ್ಯ ನಡೆಯಬೇಕಿದೆ.
ಈ ಬೆಳವಣಿಗೆಯಿಂದ ಮುಂದಿನ ವರ್ಷ ನಡೆಯಲಿರುವ ದೇಶದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಮುಂಚೂಣಿ ಅಭ್ಯರ್ಥಿ ಆಕಾಂಕ್ಷಿಯಾಗಿರುವ ಟ್ರಂಪ್ಗೆ ಹಿನ್ನಡೆಯಾಗಿದೆ. ಈ ಮಧ್ಯೆ ಕೋರ್ಟ್ ಹೊರಗೆ ಟ್ರಂಪ್ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದಾರೆ. 76 ವರ್ಷದ ರಿಪಬ್ಲಿಕನ್ ನಾಯಕ ಟ್ರಂಪ್, ಕ್ರಿಮಿನಲ್ ಆರೋಪದ ಮೇಲೆ ಬಂಧಿತರಾದ ಪ್ರಥಮ ಮಾಜಿ ಅಧ್ಯಕ್ಷರಾಗಿದ್ದಾರೆ. ಅಕ್ರಮ ಸಂಬಂಧದ ವಿಚಾರವನ್ನು ಮುಚ್ಚಿಹಾಕಲು ನೀಲಿ ಚಿತ್ರ ತಾರೆ ಸ್ಟಾರ್ವಿು ಡೇನಿಯಲ್ಸ್ಗೆ 2016ರಲ್ಲಿ ಹಣ ನೀಡಿದ್ದ ಪ್ರಕರಣದಲ್ಲಿ ಮ್ಯಾನ್ಹಟನ್ ನ್ಯಾಯಾಲಯ ಕಳೆದ ವಾರ ಟ್ರಂಪ್ಗೆ ಛೀಮಾರಿ ಹಾಕಿತ್ತು. ಆದರೆ, ಈ ಕೇಸ್ನಲ್ಲಿ ಅವರ ವಿರುದ್ಧ ನಿರ್ದಿಷ್ಟ ಆರೋಪವನ್ನು ಇನ್ನೂ ಸಲ್ಲಿಸಲಾಗಿಲ್ಲ. ತಾನು ನಿದೋಷಿ ಎಂದು ಟ್ರಂಪ್ ವಾದಿಸಿದ್ದಾರೆ. ಟ್ರಂಪ್ ಬೆಂಬಲಾರ್ಥ ದೇಶದಾದ್ಯಂತ ರ್ಯಾಲಿಗಳು ನಡೆಯುತ್ತಿವೆ. (ಏಜೆನ್ಸೀಸ್)