ನದಿ ನೀರಿನ ಹಂಚಿಕೆಯಲ್ಲಿ ಕೇಂದ್ರ ತೆಲಂಗಾಣ ವಿರೋಧಿ, ಆಂಧ್ರ 'ದಾದಾಗಿರಿ' ತೋರಿಸುತ್ತಿದೆ: ಕೆಸಿಆರ್
ಹೈದರಾಬಾದ್: ಜುಲೈ 15 ರಂದು ಜಲ ಶಕ್ತಿ ಸಚಿವಾಲಯವು 107 ನೀರಾವರಿ ಯೋಜನೆಗಳನ್ನು ನದಿ ನಿರ್ವಹಣಾ ಮಂಡಳಿ ವ್ಯಾಪ್ತಿಗೆ ತರುವ ಗೆಜೆಟ್ ಅಧಿಸೂಚನೆ ಹೊರಡಿಸಿದ ನಂತರ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು, ಕೇಂದ್ರ ಸರ್ಕಾರವು ತೆಲಂಗಾಣ ವಿರೋಧಿ ನಿಲುವು ಅಳವಡಿಸಿಕೊಂಡಿದೆ ಎಂದು ಸೋಮವಾರ ಆರೋಪಿಸಿದ್ದಾರೆ.
"ನದಿ ನೀರಿನ ಹಂಚಿಕೆ ಕುರಿತು ಇಂದು ನಾಗಾರ್ಜುನ ಸಾಗರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಕೆಸಿಆರ್, "ಕೇಂದ್ರವು ತೆಲಂಗಾಣ ವಿರೋಧಿ ನಿಲುವನ್ನು ಅಳವಡಿಸಿಕೊಂಡಿದೆ ಎಂದು ನಿಮಗೆ ತಿಳಿದಿದೆ. ಆಂಧ್ರ ಪ್ರದೇಶ ಕೃಷ್ಣಾ ನದಿಯಲ್ಲಿ ನೀರಾವರಿ ಯೋಜನೆಗಳನ್ನು ಅಕ್ರಮವಾಗಿ ನಿರ್ಮಿಸುತ್ತಿದೆ."ಆಂಧ್ರ ಪ್ರದೇಶ ವರ್ತನೆ "ದಾದಾಗಿರಿ" ತೋರಿಸುವಂತಿದೆ ಎಂದು ವಾಗ್ದಾಳಿ ನಡೆಸಿದರು.
ಕೃಷ್ಣಾ ನದಿ ಜಲಾನಯನ ಪ್ರದೇಶದಲ್ಲಿರುವ ನಾಗಾರ್ಜುನ ಸಾಗರ ಆಯಕಟ್ಟಿನ ನೀರಾವರಿ ಅಗತ್ಯಗಳನ್ನು ಪೂರೈಸಲು ಗೋದಾವರಿ ನೀರನ್ನು ಪಾಲೈರ್ ನಿಂದ ನಾಗಾರ್ಜುನ ಸಾಗರದ ಪೆದ್ದ ದೇವುಲ ಪಲ್ಲಿಗೆ ತಿರುಗಿಸುವುದಾಗಿ ಅವರು ಹೇಳಿದರು.
ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಟಿಆರ್ ಎಸ್ ಅಭ್ಯರ್ಥಿ ನೋಮುಲ ಭಗತ್ ಅವರನ್ನು ಆಯ್ಕೆ ಮಾಡಿದ ಜನರಿಗೆ ಧನ್ಯವಾದ ಸಲ್ಲಿಸಲು ಕೆಸಿಆರ್ ನಾಗಾರ್ಜುನ ಸಾಗರಕ್ಕೆ ಭೇಟಿ ನೀಡಿದರು ಮತ್ತು ಈ ವಿಭಾಗದಲ್ಲಿ 15 ಏತ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಲಾಗುವುದು ಎಂದು ಹೇಳಿದರು.