ನಟ ಚೇತನ್ ವಿರುದ್ಧ ಪಂಜುರ್ಲಿ ದೈವಕ್ಕೆ ಮೊರೆ

ನಟ ಚೇತನ್ ವಿರುದ್ಧ ಪಂಜುರ್ಲಿ ದೈವಕ್ಕೆ ಮೊರೆ

ಉಡುಪಿ, ಅ.೨೧- ಕಾಂತಾರ ಸಿನಿಮಾದಲ್ಲಿ ಚಿತ್ರಿತವಾದ ಭೂತಾರಾಧನೆಯನ್ನು ಹಿಂದೂ ಸಂಸ್ಕೃತಿಯಲ್ಲವೆಂದು ಹೇಳಿ ವಿವಾದ ಮೂಡಿಸಿರುವ ನಟ ಚೇತನ್ ವಿರುದ್ಧ ಆಕ್ರೋಶಗಳು ಬುಗಿಲೆದ್ದಿದೆ. ಈ ಹಿನ್ನೆಲೆಯಲ್ಲಿ ನಟ ಚೇತನ್ ವಿರುದ್ಧ ಪಂಜುರ್ಲಿ ದೈವಕ್ಕೆ ದೂರು ನೀಡಲಾಗಿದೆ.
ಈ ಸಂಬಂಧ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿರುವ ಹಿರಿಯ ದೈವರಾಧಕ ಕುಮಾರ ಪಂಬದ, ಸಂಸ್ಕೃತಿಯ ಅವಹೇಳನ ಆದಾಗೆಲ್ಲ ನಾವು ದೈವದ ಮುಂದೆ ಪ್ರಾರ್ಥನೆ ಮಾಡುತ್ತೇವೆ. ನಾವು ಸೇವೆ ಕೊಡುವ ದೈವಗಳ ಮುಂದೆಯೇ ನಾವು ಪ್ರಾರ್ಥನೆ ಮಾಡುತ್ತೇವೆ. ನಮ್ಮ ಮೂಲ ಆರಾಧನೆಯ ಪಂಜುರ್ಲಿ ದೈವದ ಮುಂದೆ ಈ ಬಗ್ಗೆ ಪ್ರಾರ್ಥನೆ ಸಲ್ಲಿಸುತ್ತೇವೆ. ನಟರಿಗೆ ನಟನೆ ಮಾಡಲು ಗೊತ್ತಿರಬಹುದು. ನಾವು ದೈವಾರಾಧಕರು ನಮಗೆ ನಟಿಸಲು ಗೊತ್ತಿಲ್ಲ. ನಾವು ತಲೆತಲಾಂತರಗಳಿಂದ ಸತ್ಯವನ್ನು ಪಾಲನೆ ಮಾಡಿಕೊಂಡು ಬಂದವರು. ಭೂತಾರಾಧನೆಗೆ ಇಂತಿಷ್ಟು ವರ್ಷದ ಹಿನ್ನೆಲೆ ಎಂಬ ದಾಖಲೆ ನಮ್ಮಲ್ಲಿ ಇಲ್ಲ. ಯಾವುದೋ ಒಂದು ಪುಸ್ತಕ ಹಿಡಿದುಕೊಂಡು ಮಾತನಾಡುವುದು ತಪ್ಪು. ಕರಾವಳಿಯಾದ್ಯಂತ ಪರವ, ಪಂಬದ ನಲಿಕೆಯವರು ಜೀವಿಸುತ್ತಿದ್ದೇವೆ. ನಾವು ಅಲೆಮಾರಿಗಳು ಎಂಬ ಮಾತನ್ನು ಒಪ್ಪಲು ಸಾಧ್ಯವಿಲ್ಲ. ನಮ್ಮ ಹಿರಿಯರ ಕಾಲದಿಂದ ನಾವು ಹಿಂದೂ ಸಂಪ್ರದಾಯವನ್ನು ಆರಾಧನೆ ಮಾಡಿಕೊಂಡು ಬರುತ್ತಿದ್ದೇವೆ. ನಮ್ಮ ದೈವಗಳಿಗೆ ಮೂಲ ಶಬ್ದವೇ ತುಳು. ನಾವು ನಂಬಿಕೊಂಡ ಸತ್ಯದ ಮೂಲಕ ಚೇತನ್ ಗೆ ಪ್ರತಿಕ್ರಿಯೆ ಕೊಡುತ್ತೇವೆ ಎಂದು ಹೇಳಿದರು.