ಬಾಲಕಾರ್ಮಿಕ ಮುಕ್ತ ಉಡುಪಿ ಜಿಲ್ಲೆಗೆ ಕ್ರಮ: ಸಿಇಓ ಡಾ.ನವೀನ್ ಭಟ್
ಉಡುಪಿ, ಜೂ.12: ಬಾಲಕಾರ್ಮಿಕತ್ವಕ್ಕೆ ಮೂಲಕಾರಣವಾಗಿರುವ ಶಾಲೆ ಯಿಂದ ಹೊರಗುಳಿದ ಮಕ್ಕಳನ್ನು ಮತ್ತೆ ಶಾಲೆಗೆ ಬರುವಂತೆ ಮಾಡುವ ಬಗ್ಗೆ ಎಲ್ಲರೂ ಪ್ರಯತ್ನಿಸಬೇಕು. ಈ ಬಗ್ಗೆ ಈಗಾಗಲೇ ಸರ್ವೆ ಮಾಡಲು ಗ್ರಾಮ ಶಿಕ್ಷಣ ಸಮಿತಿಗೆ ಸೂಚಿಸಿದ್ದು, ಅದರ ವರದಿಯ ಅನುಸಾರ ಕ್ರಿಯಾ ಯೋಜನೆ ರೂಪಿಸಿ ಬಾಲಕಾರ್ಮಿಕ ಮುಕ್ತ ಗ್ರಾಮಗಳಾಗುವಂತೆ ಮಾಡಲಾಗುವುದು ಎಂದು ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ತಿಳಿಸಿದ್ದಾರೆ.
ಉಡುಪಿ ಚೈಲ್ಡ್ಲೈನ್ ವತಿಯಿಂದ ಇಂದು ಜಿಪಂ ಕಚೇರಿಯಲ್ಲಿ ನಡೆದ ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಬಾಲಕ ಕಾರ್ಮಿಕ ಸಮಸ್ಯೆ ಕುರಿತ ಜನಜಾಗೃತಿ ಪೊಸ್ಟರನ್ನು ಬಿಡುಗಡೆಗೊಳಿಸಿ ಅವರು ಮಾತನಾಡುತಿದ್ದರು.
ಬಾಲಕಾರ್ಮಿಕ ಕೊನೆಗಾಣಿಸುವ ಬಗ್ಗೆ ಪ್ರತಿಜ್ಞಾವಿಧಿ ಬೋಧಿಸಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶೆ ಕಾವೇರಿ ಮಾತನಾಡಿ, ಸಾರ್ವಜನಿಕರು ಯಾವುದೇ ಮಗು ಎಲ್ಲೆ ಬಾಲಕಾರ್ಮಿಕನಾಗಿ ದುಡಿಯುತ್ತಿರುವದನ್ನು ಕಂಡಲ್ಲಿ ಕೂಡಲೆ 1098 ಚೈಲ್ಡ್ ಲೈನ್ ಗೆ ಕರೆ ಮಾಡಿ ತಿಳಿಸಿದರೆ ಆ ಮಗುವನ್ನು ಅದರಿಂದ ಮುಕ್ತಿಗೊಳಿಸಲು ಸಹಾಯವಾಗುತ್ತದೆ ಎಂದು ಹೇಳಿದರು.
ಬೆಂಗಳೂರಿಗೆ ವರ್ಗಾವಣೆಗೊಂಡಿರುವ ಕಾವೇರಿ ಅವರನ್ನು ಇದೇ ಸಂದರ್ಭ ದಲ್ಲಿ ಅಭಿನಂದಿಸಲಾಯಿತು. ಮಕ್ಕಳ ಕಲ್ಯಾಣ ಸಮಿತಿ ಮಾಜಿ ಅಧ್ಯಕ್ಷ ನಾರಾಯಣ ಬಿ.ಕೆ., ಜಿಪಂ ಉಪ ಕಾರ್ಯದರ್ಶಿ ವರ್ಣೇಕರ್, ಕಾರ್ಮಿಕ ನಿರೀಕ್ಷಕ ಪ್ರವೀಣ್, ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್, ಚೈಲ್ಡ್ ಲೈನ್ ಸಹನಿರ್ದೇಶಕ ಗುರುರಾಜ ಭಟ್, ಸಂಯೋಜಕಿ ಕಸ್ತೂರಿ ಮೊದಲಾದವರು ಉಪಸ್ಥಿತರಿದ್ದರು. ಚೈಲ್ಡ್ ಲೈನ್ ನಿರ್ದೇಶಕ ರಾಮಚಂದ್ರ ಉಪಾಧ್ಯಾಯರು ಸ್ವಾಗತಿಸಿದರು.