ದುಷ್ಕರ್ಮಿಗಳಿಂದ ದ್ರಾಕ್ಷಿ ತೋಟ ನಾಶ

ದುಷ್ಕರ್ಮಿಗಳಿಂದ ದ್ರಾಕ್ಷಿ ತೋಟ ನಾಶ

ಶಿಡ್ಲಘಟ್ಟ: ತಾಲ್ಲೂಕಿನ ಮುತ್ತೂರು ಗ್ರಾಮದ ನಾರಾಯಣರೆಡ್ಡಿ ಅವರು ಬೆಳೆದಿದ್ದ 150 ದ್ರಾಕ್ಷಿ ಗಿಡಗಳನ್ನು ಶುಕ್ರವಾರ ರಾತ್ರಿ ದುಷ್ಕರ್ಮಿಗಳು ಕತ್ತರಿಸಿ ಹಾಕಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

ನನ್ನ ಅಣ್ಣ ನಾಗರಾಜ್, ಆತನ ಹೆಂಡತಿ ಅನಸೂಯಮ್ಮ ಮತ್ತು ಮಗ ಮನೋಜ್ ಕುಮಾರ್ ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ನಾರಾಯಣರೆಡ್ಡಿ ತಿಳಿಸಿದ್ದಾರೆ.

ಗ್ರಾಮದ ಸರ್ವೆ ನಂ. 309/3ರಲ್ಲಿ ಹದಿಮೂರು ಕಾಲು ಗುಂಟೆ ಜಮೀನನ್ನು ಖರೀದಿ ಮಾಡಿದ್ದೆ. ಖರೀದಿ ವೇಳೆ ನನ್ನ ಅಣ್ಣ ನಾಗರಾಜ್ ಹೆಸರಿನಲ್ಲಿ ನೋಂದಣಿ ಮಾಡಿಸಿದ್ದೆ. 2021ರಲ್ಲಿ ನಾನು ಮತ್ತು ನನ್ನ ಅಣ್ಣ ಬೇರೆ ಬೇರೆಯಾಗಿದ್ದೇವೆ. ಆ ಸಮಯದಲ್ಲಿ ನಮ್ಮ ಕುಟುಂಬದ ಸದಸ್ಯರು ಹಾಗೂ ಗ್ರಾಮದ ಹಿರಿಯರು ನ್ಯಾಯ ಪಂಚಾಯಿತಿ ಮಾಡಿ ಈ ಜಮೀನನ್ನು ನನ್ನ ಭಾಗಕ್ಕೆ ಕೊಟ್ಟಿರುತ್ತಾರೆ ಎಂದು ದೂರಿನಲ್ಲಿ
ವಿವರಿಸಿದ್ದಾರೆ.

ಈ ಹಿಂದೆಯೂ ಹಲವಾರು ಬಾರಿ ಅವರು ಈ ಜಮೀನು ನಮಗೆ ಸೇರಿದೆ. ಇದರಲ್ಲಿ ಬೇಸಾಯ ಮಾಡಬಾರದು ಎಂದು ಗಲಾಟೆ ಮಾಡಿದ್ದರು. ಈಗ ದ್ರಾಕ್ಷಿ ಗಿಡಗಳನ್ನು ಕತ್ತರಿಸಿ ಹಾಕಿದ್ದು, ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಕೋರಿದ್ದಾರೆ.