ದರ್ಶನ್ ಎದೆ ಮೇಲೆ ಅಭಿಮಾನಿಗಳ ಟ್ಯಾಟು; ಇದೇ ರೀತಿ ಟ್ಯಾಟು ಹಾಕಿಸಿಕೊಳ್ಳಬೇಕು ಎಂದಿದ್ರು ಪವರ್ ಸ್ಟಾರ್!

ಸಿನಿಮಾ ನಟನಿಗಾಗಿ ಆತನ ಅಭಿಮಾನಿಗಳು ತಮ್ಮ ಕೈ ಮೇಲೆ, ಎದೆ ಮೇಲೆ ಟ್ಯಾಟು ಹಾಕಿಸಿಕೊಂಡು ತಮ್ಮ ಅಭಿಮಾನವನ್ನು ತೋರಿಸಿಕೊಳ್ಳುವುದು ಕಾಮನ್. ಆದರೆ ತನ್ನ ಅಭಿಮಾನಿಗಳಿಗಾಗಿ ನಟನೋರ್ವ ಟ್ಯಾಟು ಹಾಕಿಸಿಕೊಳ್ಳುವುದು ಅತಿ ಅಪರೂಪ. ಅದರಲ್ಲೂ ಸ್ಟಾರ್ ನಟರು ತಮ್ಮ ಅಭಿಮಾನಿಗಳ ಹೆಸರನ್ನು ಎದೆ ಮೇಲೆ ಟ್ಯಾಟು ಹಾಕಿಸಿಕೊಳ್ಳಬಹುದಾ ಎಂದು ಊಹಿಸಿಕೊಳ್ಳುವುದು ಸಹ ಕಷ್ಟವಾಗಿತ್ತು.
ಆದರೆ ಕನ್ನಡದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಎದೆ ಮೇಲೆ 'ನನ್ನ ಸೆಲೆಬ್ರಿಟೀಸ್' ಎಂದು ಟ್ಯಾಟು ಹಾಕಿಸಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಟ್ರಿಬ್ಯೂಟ್ ಸಲ್ಲಿಸಿದ್ದಾರೆ. ಹೌದು, ನಿನ್ನೆ ( ಫೆಬ್ರವರಿ 10 ) ದರ್ಶನ್ ತಮ್ಮ ಎದೆ ಮೇಲೆ ಈ ರೀತಿಯ ಟ್ಯಾಟು ಹಾಕಿಸಿಕೊಂಡು ಫೋಟೊಗೆ ಪೋಸ್ ಕೊಟ್ಟಿದ್ದರು. ಈ ಫೋಟೊ ನೋಡಿ ಬಹುತೇಕರು ಇದು ಎಡಿಟ್ ಫೋಟೊ ಇರಬಹುದು ಅಥವಾ ಶೂಟಿಂಗ್ಗಾಗಿ ಹಾಕಿಸಿಕೊಂಡಿರುವ ತಾತ್ಕಾಲಿಕ ಟ್ಯಾಟು ಇರಬಹುದು ಎಂದುಕೊಂಡಿದ್ದರು.
ಆದರೆ ಇದು ನಿಜವಾದ ಶಾಶ್ವತ ಟ್ಯಾಟು ಎಂಬುದನ್ನು ಸ್ವತಃ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೇ ಪೋಸ್ಟ್ ಹಂಚಿಕೊಳ್ಳುವ ಮೂಲಕ ತಿಳಿಸಿದರು. ಹೌದು, ತಾವು ಟ್ಯಾಟು ಹಾಕಿಸಿಕೊಳ್ಳುತ್ತಿರುವ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ದರ್ಶನ್ ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್ ನೀಡಿದ್ದರು. ಹೀಗೆ ದರ್ಶನ್ ಅಭಿಮಾನಿಗಳ ಹೆಸರಿನಲ್ಲಿ ಟ್ಯಾಟು ಹಾಕಿಸಿಕೊಂಡ ಬೆನ್ನಲ್ಲೇ ಕನ್ನಡದ ಮತ್ತೋರ್ವ ಸ್ಟಾರ್ ನಟ ಇದೇ ರೀತಿಯ ಟ್ಯಾಟು ಹಾಕಿಸಿಕೊಳ್ಳಬೇಕು ಎಂದು ಈ ಹಿಂದೆಯೇ ಹೇಳಿಕೊಂಡಿದ್ದರ ಕುರಿತಾದ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ರೀತಿ ಅಭಿಮಾನಿಗಳ ಹೆಸರನ್ನು ತಮ್ಮ ಎದೆ ಮೇಲೆ ಟ್ಯಾಟು ಹಾಕಿಸಿಕೊಳ್ಳಬೇಕು ಎಂದು ಹೇಳಿಕೊಂಡಿದ್ದು ಕನ್ನಡದ ರಾಜರತ್ನ ಪುನೀತ್ ರಾಜ್ಕುಮಾರ್. ಈ ವಿಷಯವನ್ನು ಜೇಮ್ಸ್ ಚಿತ್ರದ ನಿರ್ಮಾಪಕ ಕಿಶೋರ್ ಪತಿಕೊಂಡ ಅವರು ಚಿತ್ರದ ಬಿಡುಗಡೆಯ ಸಮಯದಲ್ಲಿ ನಡೆದ ಪ್ರೆಸ್ಮೀಟ್ ಒಂದರಲ್ಲಿ ತಿಳಿಸಿದ್ದರು. ಪುನೀತ್ ರಾಜ್ಕುಮಾರ್ ಅವರು ಅಭಿಮಾನಿ ದೇವರುಗಳು ಎಂದು ಜೇಮ್ಸ್ ಚಿತ್ರದ ಶೂಟಿಂಗ್ ಮುಗಿದಮೇಲೆ ಎದೆ ಮೇಲೆ ಬರೆಸಿಕೊಳ್ತೇನೆ ಅಂತ ಹೇಳ್ತಿದ್ರು ಎಂದು ಕಿಶೋರ್ ಹೇಳಿಕೆ ನೀಡಿದ್ರು. ಈ ವಿಡಿಯೊ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಪುನೀತ್ ಫ್ಯಾನ್ಸ್ ಈ ವಿಡಿಯೊವನ್ನು ಈಗ ಹಂಚಿಕೊಂಡು ತಮ್ಮ ಪ್ರೀತಿಯ ಅಪ್ಪುವನ್ನು ಮಿಸ್ ಮಾಡಿಕೊಳ್ತಿದ್ದಾರೆಇನ್ನು ನಟ ಪುನೀತ್ ರಾಜ್ಕುಮಾರ್ ಅಭಿಮಾನಿ ದೇವರುಗಳು ಎಂದು ಎದೆ ಮೇಲೆ ಟ್ಯಾಟು ಹಾಕಿಸಿಕೊಳ್ಳಬೇಕು ಎಂದುಕೊಂಡರೆ, ದರ್ಶನ್ ನನ್ನ ಸೆಲೆಬ್ರಿಟೀಸ್ ಎಂದು ಎದೆ ಮೇಲೆ ತಮ್ಮ ಅಭಿಮಾನಿಗಳಿಗೋಸ್ಕರ ಟ್ಯಾಟು ಹಾಕಿಸಿಕೊಂಡಿದ್ದಾರೆ. ಈ ಇಬ್ಬರಿಗೂ ತಮ್ಮ ಅಭಿಮಾನಿಗಳ ಮೇಲೆ ಇಷ್ಟು ಮಟ್ಟದ ಪ್ರೀತಿ ಹುಟ್ಟಲು ಕಾರಣ ಅಭಿಮಾನಿಗಳು ತಮ್ಮ ಏಳಿಗೆಗೆ ಎಲ್ಲಾ ಹಂತದಲ್ಲೂ ನಿಂತದ್ದು. ದರ್ಶನ್ ಹಲವಾರು ವಿವಾದಗಳಿಗೆ ಸಿಲುಕಿ ಸಂಕಷ್ಟಕ್ಕೆ ಒಳಗಾದಾಗ ಬೆಂಬಲಕ್ಕೆ ನಿಂತು ತಾನು ಕಮ್ಬ್ಯಾಕ್ ಮಾಡಲು ಕಾರಣರಾದದ್ದು ಇದೇ ಸೆಲೆಬ್ರಿಟಿಗಳೇ. ಪುನೀತ್ ರಾಜ್ಕುಮಾರ್ ತಾನು ಏನೇ ಸಾಧನೆ ಮಾಡಿದ್ದರೂ ಅದಕ್ಕೆ ಕಾರಣ ತನ್ನ ಅಭಿಮಾನಿಗಳೇ, ಅವರ ಆಶೀರ್ವಾದವೇ ಎಂದು ಹೇಳಿದ್ದರು. ಹೀಗೆ ತಮ್ಮ ಗೆಲುವಿಗೆ ಕಾರಣರಾದ ಅಭಿಮಾನಿಗಳ ಮೇಲೆ ಈ ಇಬ್ಬರೂ ನಟರಿಗೂ ಅಪಾರವಾದ ಪ್ರೀತಿ ಹಾಗೂ ಗೌರವ.
ದರ್ಶನ್ ಫ್ಯಾನ್ಸ್ ಫುಲ್ ಖುಷ್ನಟ ದರ್ಶನ್ ತಮಗಾಗಿ ಹಾಕಿಸಿಕೊಂಡಿರುವ ಟ್ಯಾಟು ಕಂಡ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ನಿಮ್ಮ ಅಭಿಮಾನಿಯಾಗಿದ್ದಕ್ಕೂ ಸಾರ್ಥಕವಾಯಿತು ಎಂದು ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡಿ ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ಕೇವಲ ಅಭಿಮಾನಿಗಳು ಮಾತ್ರವಲ್ಲದೇ ಕನ್ನಡ ಚಿತ್ರರಂಗದ ಹಲವು ಇತರೆ ಕಲಾವಿದರೂ ಸಹ ದರ್ಶನ್ ಟ್ಯಾಟು ಬಗ್ಗೆ ಪ್ರತಿಕ್ರಿಯಿಸಿದ್ದು, ದರ್ಶನ್ ಕೆಲಸಕ್ಕೆ ಫಿದಾ ಆಗಿದ್ದಾರೆ.