ತಾಜ್‌ಮಹಲ್‌ ಗೂ ತಟ್ಟಿದ ತೆರಿಗೆ ಬಿಸಿ: ಕೋಟಿ ತೆರಿಗೆ ಕಟ್ಟಲು 15 ದಿನ ಗಡುವು, ತಪ್ಪಿದರೆ ಜಪ್ತಿ

ತಾಜ್‌ಮಹಲ್‌ ಗೂ ತಟ್ಟಿದ ತೆರಿಗೆ ಬಿಸಿ: ಕೋಟಿ ತೆರಿಗೆ ಕಟ್ಟಲು 15 ದಿನ ಗಡುವು, ತಪ್ಪಿದರೆ ಜಪ್ತಿ

ಗ್ರಾ: ಯುಪಿಯ ಆಗ್ರಾದಲ್ಲಿರುವ ತಾಜ್ ಮಹಲ್ ಪ್ರಪಂಚದಾದ್ಯಂತದ ಪ್ರವಾಸಿಗರಿಗೆ ಆಕರ್ಷಣೆಯ ಕೇಂದ್ರವಾಗಿದೆ. ಪ್ರತಿನಿತ್ಯ ಲಕ್ಷಾಂತರ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಆದರೆ ಪ್ರೀತಿಯ ಸಂಕೇತವೆಂದೇ ಪ್ರಸಿದ್ದಿ ಪಡೆದ ತಾಜ್‌ಮಹಲ್‌ಗೆ ತೆರಿಗೆಯ ಬಿಸಿ ಎದುರಾಗಿದೆ.

ನೀರು ಮತ್ತು ಆಸ್ತಿ ತೆರಿಗೆ ಕಟ್ಟದ ಕಾರಣ ಆಗ್ರಾ ಮುನ್ಸಿಪಲ್ ಕಾರ್ಪೊರೇಷನ್ ನೋಟಿಸ್ ನೀಡಿದೆ.

ಆಗ್ರಾ ಮುನ್ಸಿಪಲ್ ಕಾರ್ಪೊರೇಷನ್ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ  ನೋಟಿಸ್ ಜಾರಿ ಮಾಡಿದ್ದು, ತಾಜ್ ಮಹಲ್ ನೀರಿನ ತೆರಿಗೆಯಾಗಿ 1.9 ಕೋಟಿ ಮತ್ತು ಆಸ್ತಿ ತೆರಿಗೆಯಾಗಿ 1.5 ಲಕ್ಷ ರೂಪಾಯಿಗಳನ್ನು ಪಾವತಿಸಬೇಕಾಗಿದೆ ಎಂದು ಹೇಳಿದೆ.

ನೋಟಿಸ್‌ನಲ್ಲಿ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ತನ್ನ ಬಾಕಿ ತೆರಿಗೆಯನ್ನು ಪಾವತಿಸಲು 15 ದಿನಗಳ ಗಡುವು ನೀಡಿದ್ದು ತೆರಿಗೆ ಕಟ್ಟಲು ತಪ್ಪಿದ್ದಲ್ಲಿ ಆಸ್ತಿಯನ್ನು (ತಾಜ್ ಮಹಲ್) ಜಪ್ತಿ ಮಾಡಲಾಗುವುದು ಎಂದು ನೋಟೀಸ್ ಜಾರಿ ಮಾಡಿದ್ದಾರೆ.

ಮತ್ತೊಂದೆಡೆ, ಈ ವಿಷಯದ ಬಗ್ಗೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಧೀಕ್ಷಕ ಮತ್ತು ಪುರಾತತ್ವಶಾಸ್ತ್ರಜ್ಞ ರಾಜ್ ಕುಮಾರ್ ಪಟೇಲ್ ಅವರು, 'ಸ್ಮಾರಕಗಳಿಗೆ ಆಸ್ತಿ ತೆರಿಗೆ ಅನ್ವಯಿಸುವುದಿಲ್ಲ. ವಾಣಿಜ್ಯ ಬಳಕೆ ಇಲ್ಲದ ಕಾರಣ ನಾವು ನೀರಿಗೆ ತೆರಿಗೆ ಪಾವತಿಸುವ ಹೊಣೆಗಾರಿಕೆಯೂ ಇರುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.