ಡಿಸ್ನಿ-ಹಾಟ್‌ಸ್ಟಾರ್ ಚಂದಾದಾರರ ಸಂಖ್ಯೆ ತೀವ್ರ ಕುಸಿತ 7000 ಉದ್ಯೋಗಿಗಳ ವಜಾಗೊಳಿಸಲು ಡಿಸ್ನಿ ನಿರ್ಧಾರ

ಜಾಗತಿಕವಾಗಿ ಉದ್ಯೋಗ ಕಡಿತ ಪ್ರಕ್ರಿಯೆ ಜೋರಾಗಿ ನಡೆಯುತ್ತಿದೆ. ಐಸಿ-ಬಿಟಿ ವಲಯ ಮಾತ್ರವಲ್ಲದೆ, ಬ್ಯಾಂಕಿಂಗ್, ಮೆಡಿಕಲ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಉದ್ಯೋಗಿಗಳು ಕೆಲಸ ಕಳೆದಕೊಳ್ಳುವ ಭೀತಿಯಲ್ಲಿದ್ದಾರೆ.
ಫೇಸ್‌ಬುಕ್, ಅಮೆಜಾನ್, ಮೈಕ್ರೋಸಾಫ್ಟ್, ಗೂಗಲ್‌ನಂತಹ ದಿಗ್ಗಜ ಸಂಸ್ಥೆಯ ಉದ್ಯೋಗಿಗಳೇ ಕೆಲಸ ಕಳೆದುಕೊಳ್ಳುತ್ತಿದ್ದಾರೆ.
ಡಿಸ್ನಿ ಹಾಟ್‌ಸ್ಟಾರ್ ಸಂಸ್ಥೆಯ ಸಿಇಒ ಬಾಬ್ ಇಗರ್ ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಐಪಿಎಲ್ ಲೈವ್ ಸ್ಟ್ರೀಮ್ ಮಾಡುವ ಸಂದರ್ಭದಲ್ಲಿ ಭಾರತದಲ್ಲಿ ನಂಬರ್ 1 ಒಟಿಟಿ ಫ್ಲಾಟ್‌ಫಾರ್ಮ್ ಆಗಿತ್ತು.
ಆದರೆ, 2023ರ ಐಪಿಎಲ್ ಆವೃತ್ತಿಗೆ ಮುನ್ನ ಅವರು ಐಪಿಎಲ್ ಡಿಜಿಟಲ್ ಹಕ್ಕುಗಳನ್ನು ಪಡೆದುಕೊಳ್ಳಲು ವಿಫಲವಾದರು.
ವೈಯಾಕಾಮ್ 18 ಐಪಿಎಲ್ ಡಿಜಿಟಲ್ ಹಕ್ಕುಗಳನ್ನು ಪಡೆದುಕೊಳ್ಳುವ ಮೂಲಕ ಡಿಸ್ನಿ ಹಾಟ್‌ಸ್ಟಾರ್ ಗೆ ಸಾಕಷ್ಟು ಹೊಡೆತ ಬಿದ್ದಿದೆ.
ಮೂಲಗಳ ಪ್ರಕಾರ ಅಕ್ಟೋಬರ್ 2022 ರಿಂದ ಡಿಸೆಂಬರ್ 2022ರ ನಡುವೆ ಡಿಸ್ನಿ ಹಾಟ್‌ಸ್ಟಾರ್ 38 ಲಕ್ಷ ಚಂದಾದಾರರನ್ನು ಕಳೆದುಕೊಂಡಿದೆ.
ಚಂದಾದಾರರಲ್ಲಿ ಭಾರಿ ಪ್ರಮಾಣದ ಇಳಿಕೆಯಾದ ಹಿನ್ನಲೆಯಲ್ಲಿ ಡಿಸ್ನಿ ಹಾಟ್‌ಸ್ಟಾರ್ ನಷ್ಟದ ಭೀತಿಯಲ್ಲಿದೆ. ನಷ್ಟದ ಪ್ರಮಾಣವನ್ನು ಕಡಿಮೆ ಮಾಡಲು ಉದ್ಯೋಗಿಗಳ ವಜಾ ಮಾಡಲು ಡಿಸ್ನಿ ಹಾಟ್‌ಸ್ಟಾರ್ ನಿರ್ಧಾರ ಮಾಡಿದೆ.
ಈ ಬಗ್ಗೆ ಮಾತನಾಡಿರುವ ಡಿಸ್ನಿ ಹಾಟ್‌ಸ್ಟಾರ್ ಸಂಸ್ಥೆಯ ಸಿಇಒ ಬಾಬ್ ಇಗರ್, "ಇದು ಕಂಪನಿಯ ರೂಪಾಂತರದ ಸಮಯ, ಬೆಳವಣಿಗೆ ಮತ್ತು ಲಾಭದಾಯಕತೆಯನ್ನು ಉಳಿಸಿಕೊಳ್ಳಲು ಇದು ಮುಖ್ಯವಾಗಿದೆ.
ಭವಿಷ್ಯದಲ್ಲಿ ಎದುರಾಗುವ ಅಡ್ಡಿಗಳು, ಹೆಚ್ಚಾದ ಸ್ಪರ್ಧೆ ಮತ್ತು ಆರ್ಥಿಕ ಸವಾಲುಗಳನ್ನು ಎದುರಿಸುವುದು. ವೆಚ್ಚಗಳನ್ನು ಕಡಿಮೆ ಮಾಡುವುದು ಮತ್ತು ಆದಾಯವನ್ನು ಹೆಚ್ಚಿಸಬೇಕಿದೆ" ಎಂದು ಹೇಳಿದರು.
ಕೋವಿಡ್ ಸಾಂಕ್ರಾಮಿಕದ ಬಳಿಕ ಚಂದಾದಾರರ ಸಂಖ್ಯೆಯಲ್ಲಿ ತೀವ್ರ ಕುಸಿತ ಕಾಣುತ್ತಿದೆ. ಕಳೆದ ಮೂರು ತಿಂಗಳಲ್ಲಿ ಅದರ ಚಂದಾದಾರರ ಶೇಕಡಾ 1ರಷ್ಟನ್ನು ಕಳೆದುಕೊಂಡಿದೆ. ಪ್ರಸ್ತುತ ಡಿಸ್ನಿ ಪ್ಲಸ್ 161.8 ಮಿಲಿಯನ್ ಚಂದಾದಾರರನ್ನು ಹೊಂದಿದೆ.
ಕಳೆದ 5 ವರ್ಷಗಳಿಂದ ಐಪಿಎಲ್ ಪಂದ್ಯಗಳ ನೇರಪ್ರಸಾರ ಮಾಡುವ ಮೂಲಕ ಹೆಚ್ಚಿನ ವೀಕ್ಷಕರನ್ನು ಗಳಿಸಿಕೊಂಡಿತ್ತು.
ಆದರೆ ಮುಂದಿನ ಆವೃತ್ತಿಯಿಂದ ಐಪಿಎಲ್ ಡಿಜಿಟಲ್ ಪ್ರಸಾರದ ಹಕ್ಕುಗಳು ರಿಲಯನ್ಸ್ ಒಡೆತನದ ವೈಯಾಕಾಂ 18 ಸಂಸ್ಥೆ ಪಡೆದುಕೊಂಡಿದೆ.
ಮತ್ತೊಂದೆಡೆ ಹೊಸ ಮಾರ್ವೆಲ್ ಶೋಗಳ ಜನಪ್ರಿಯತೆ ಕಡಿಮೆಯಾಗಿರುವುದು ಕೂಡ ಚಂದಾದಾರರನ್ನು ಕಳೆದುಕೊಳ್ಳಲು ಪ್ರಮುಖ ಕಾರಣವಾಗಿದೆ. ಮಾರ್ವೆಲ್ ಸ್ಟುಡಿಯೋಸ್ ಜನಪ್ರಿಯತೆ ಕಡಿಮೆಯಾಗಿದೆ ಎಂದು ಒಪ್ಪಿಕೊಂಡಿದೆ.
7000 ಉದ್ಯೋಗಿಗಳನ್ನು ವಜಾಮಾಡುವ ಮೂಲಕ 5.5 ಶತಕೋಟಿ ಡಾಲರ್ ವೆಚ್ಚವನ್ನು ಉಳಿಕೆ ಮಾಡುವ ಗುರಿ ಹೊಂದಿದೆ.