ಡಿಕೆಶಿ ಕೈನಲ್ಲಿದ್ದರೆ ಸಿಎಂ ಆಗಲ್ಲ ಬಿಜೆಪಿಗೆ ಬರಲಿ
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ನಲ್ಲಿದ್ದರೇ ಸಿಎಂ ಆಗೋದು ಅನುಮಾನ. ಹಾಗಾಗಿ ಅವರು ಬಿಜೆಪಿಗೆ ಬರಲಿ ಎಂದು ತೋಟಗಾರಿಕಾ ಸಚಿವ ಮುನಿರತ್ನ ಹೇಳಿದ್ದಾರೆ.
ಕಾಂಗ್ರೆಸ್ನಿಂದ ವಲಸೆ ಹೋಗಿರುವ ಶಾಸಕರಿಗೆ ಮತ್ತೆ ಕಾಂಗ್ರೆಸ್ ಸೇರುವಂತೆ ಡಿ.ಕೆ. ಶಿವಕುಮಾರ್ ನೀಡಿರುವ ಆಹ್ವಾನಕ್ಕೆ ತಿರುಗೇಟು ನೀಡಿರುವ ಅವರು, ಡಿ.ಕೆ. ಶಿವಕುಮಾರ್ ಅವರೇ ಕಾಂಗ್ರೆಸ್ನಲ್ಲಿದ್ದರೆ ನೀವು ಎಂ ಆಗಲ್ಲ. ನೀವೇ ಬಿಜೆಪಿಗೆ ಬಂದು ಬಿಡಿ ಎಂದಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮುನಿರತ್ನ ಅವರು, ಕಾಂಗ್ರೆಸ್ನಿಂದ ಬಂದಿರುವ ಎಲ್ಲರನ್ನು ಬಿಜೆಪಿಯವರು ಚೆನ್ನಾಗಿ ನಡೆಸಿಕೊಂಡಿದ್ದಾರೆ. ನಮ್ಮನ್ನು ಗೌರವದಿಂದ ನೋಡಿಕೊಳ್ಳುತ್ತಿದ್ದಾರೆ ಎಂದರು.
ನಾವೆಲ್ಲಾ ಕಾಂಗ್ರೆಸ್ ಪಕ್ಷ ಬಿಟ್ಟಾಗ ಡಿ.ಕೆ. ಶಿವಕುಮಾರ್, ಸಿದ್ಧರಾಮಯ್ಯ, ಸ್ಪೀಕರ್ ಆಗಿದ್ದ ರಮೇಶ್ಕುಮಾರ್ ನಮ್ಮ ಪಕ್ಷಕ್ಕೆ ಬಿಟ್ಟು ಹೋದವರ ಅವಶ್ಯಕತೆ ಇಲ್ಲ ಎಂದಿದ್ದರು. ಈಗ ಏಕೆ ನಮ್ಮನ್ನು ಕರೆಯುತ್ತಿದ್ದಾರೆ. ನಮ್ಮ ಅವಶ್ಯಕತೆ ಬಿದ್ದಿದಾದರೂ ಹೇಗೆ ಎಂದು ಪ್ರಶ್ನಿಸಿದ್ದಾರೆ.
ಡಿ.ಕೆ. ಶಿವಕುಮಾರ್ ಅವರಿಗೆ ಬಿಜೆಪಿ ಸೇರಿರುವ ೧೭ ಜನರ ಮೇಲೆ ಪ್ರೀತಿ ಇದೆ. ಹಾಗಾಗಿ ಆಹ್ವಾನ ನೀಡಿದ್ದಾರೆ. ನಮಗೂ ಡಿ.ಕೆ. ಶಿವಕುಮಾರ್ ಅವರ ಮೇಲೆ ಪ್ರೀತಿ ಇದೆ. ಅವರೇ ಬಿಜೆಪಿಗೆ ಬರಲಿ. ಡಿಕೆಶಿ ಬಿಜೆಪಿಗೆ ಬಂದರೆ ಅವರಿಗೆ ಒಳ್ಳೆಯದಾಗುತ್ತೆ ಎಂದರು.