ಟೆಸ್ಟ್ ಸರಣಿಯ ಮಧ್ಯೆಯೇ ದಿಢೀರ್ ಆಸ್ಟ್ರೇಲಿಯಾಗೆ ಮರಳಿದ ಆಸಿಸ್ ನಾಯಕ ಪ್ಯಾಟ್ ಕಮ್ಮಿನ್ಸ್!
ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ಮಧ್ಯೆಯೇ ದಿಢೀರ್ ಆಗಿ ಆಸ್ಟ್ರೇಲಿಯಾಗೆ ವಾಪಾಸಾಗಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ಆಸ್ಟ್ರೇಲಿಯಾದ ಮಾಧ್ಯಮಗಳು ವರದಿ ಮಾಡಿದ್ದು ಸೋಮವಾರ ಮುಂಜಾನೆ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮ್ಮಿನ್ಸ್ ತವರಿಗೆ ವಾಪಾಸಾಗಿರುವ ಬಗ್ಗೆ ಮಾಹಿತಿ ಪ್ರಕಟಿಸಿದೆ.
ಆಸ್ಟ್ರೇಲಿಯಾ ನಾಯಕ ಹೀಗೆ ಸರಣಿಯ ಮಧ್ಯೆ ತವರಿಗೆ ವಾಪಾಸಾಗಲು ಕಾರಣ ಅಧಿಕೃತವಾಗಿ ಬಹಿರಂಗವಾಗಿಲ್ಲ. ಆದರೆ ಕೌಟುಂಬಿಕ ಕಾರಣದಿಂದಾಗಿ ಕಮ್ಮಿನ್ಸ್ ತವರಿಗೆ ಮರಳಿದ್ದಾರೆ ಎನ್ನಲಾಗಿದೆ. ಆದರೆ ಮೂರನೇ ಟೆಸ್ಟ್ ಪಂದ್ಯಕ್ಕೂ ಮುನ್ನವೇ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಭಾರತಕ್ಕೆ ವಾಪಾಸಾಗಲಿದ್ದಾರೆ ಎಂದು ವರದಿಯಾಗಿದೆ. ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ಮೂರನೇ ಪಂದ್ಯ ಮಾರ್ಚ್ 1ರಿಂದ ಆರಂಭವಾಗಲಿದೆ.
ಪ್ಯಾಟ್ ಕಮ್ಮಿನ್ಸ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ ಭಾರತದಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲವಾಗಿದೆ. ಈ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿಯೂ ಆಸ್ಟ್ರೇಲಿಯಾ ತಮಡ ಮೂರನೇ ದನದಲ್ಲಿಯೇ ಸೋಲು ಅನುಭವಿಸಿದ್ದು ಭಾರೀ ಮುಖಭಂಗಕ್ಕೆ ಒಳಗಾಗಿದೆ. ನಾಗ್ಪುರದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಹಾಗೂ 132 ರನ್ಗಳ ಅಂತರದಿಂದ ಸೋಲು ಕಂಡಿದ್ದರೆ ದೆಹಲಿಯಲ್ಲಿ ನಡೆದ ಎರಡನೇ ಪಂದ್ಯದಲ್ಲಿ 6 ವಿಕೆಟ್ಗಳ ಬೃಹತ್ ಅಂತರದಿಂದ ಶರಣಾಗಿದೆ.
ಈ ಸೋಲಿನಿಂದಾಗಿ ಆಸ್ಟ್ರೇಲಿಯಾ ಇದೀಗ ಟೆಸ್ಟ್ ಸರಣಿಯಲ್ಲಿ ವೈಟ್ವಾಶ್ ಆಘಾತಕ್ಕೆ ಒಳಗಾಗುವ ಭೀತಿಯನ್ನು ಕೂಡ ಎದುರಿಸುತ್ತಿದೆ. ನಾಲ್ಕು ಪಂದ್ಯಗಳ ಈ ಸರಣಿಯಲ್ಲಿ ಆಸ್ಟ್ರೇಲಿಯಾ ವೈಟ್ವಾಶ್ಗೆ ತುತ್ತಾದರೆ ವಿಶ್ವಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಹಂತಕ್ಕೇರುವ ಅವಕಾಶವನ್ನು ಕಳೆದುಕೊಳ್ಳುವ ಸಾಧ್ಯತೆಯೂ ಇದೆ.
ಇನ್ನು ಈ ಮಧ್ಯೆ ಟೆಸ್ಟ್ ಸರಣಿಯ ಅಂತಿಮ ಎರಡು ಪಂದ್ಯಗಳಿಗಾಗಿ ಬಿಸಿಸಿಐ ಭಾರತ ತಂಡವನ್ನು ಭಾನುವಾರ ಪ್ರಕಟಿಸಿದೆ. ಮೊದಲ ಎರಡು ಟೆಸ್ಟ್ ಪಂದ್ಯಗಳಿಗೆ ಆಯ್ಕೆ ಮಾಡಿದ ತಂಡದಲ್ಲಿ ಯಾವುದೇ ಬದಲಾವಣೆ ಮಾಡದೆಯೇ ತಂಡವನ್ನು ಘೋಷಿಸಲಾಗಿದೆ. ಆದರೆ ಕೆಎಲ್ ರಾಹುಲ್ ಅವರಿಂದ ಉಪನಾಯಕತ್ವದ ಹೊಣೆಗಾರಿಗೆ ಹಿಂಪಡೆಯಲಾಗಿದೆ.