ಬಳ್ಳಾರಿಯಲ್ಲಿ ಹುಚ್ಚು ನಾಯಿಗಳ ದಾಳಿಗೆ ಮತ್ತೊಂದು ಮಗು ಬಲಿ: ಪುಟಾಣಿಯನ್ನು ಕಚ್ಚಿ ತಿನ್ನುವ ವೀಡಿಯೋ ವೈರಲ್
ಬಳ್ಳಾರಿ: ಜಿಲ್ಲೆಯಲ್ಲಿ ಮತ್ತು ಹುಚ್ಚು ನಾಯಿಗಳು ಅಟ್ಟಹಾಸವನ್ನೇ ಮೆರೆದಿವೆ. ಮಗುವಿನ ಮೇಲೆ ದಾಳಿ ನಡೆಸಿದ್ದು, ಚಿಕಿತ್ಸೆ ಫಲಿಸದೇ ಮಗು ಬಲಿಯಾಗಿದೆ. ಪುಟಾಣಿ ಮಗುವನ್ನು ಹುಚ್ಚು ನಾಯಿಗಳು ಕಚ್ಚಿ, ಎಳೆದಾಡಿ ತಿನ್ನುವಂತ ವೀಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬಳ್ಳಾರಿಯಲ್ಲಿ ಹುಚ್ಚು ನಾಯಿಗಳ ದಾಳಿ ಮುಂದುವರೆದಿದೆ. ಫೆಬ್ರವರಿ 7ರಂದು ವಟ್ಟಗೆರೆ ಪ್ರದೇಶದಲ್ಲಿ 30 ಜನರ ಮೇಲೆ ಹುಚ್ಚುನಾಯಿ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಬಳ್ಳಾರಿ ನಗರದ 31ನೇ ವಾರ್ಡ್ ನ ಕಿಶಾರ್ ಎನ್ನುವ ಮಗು ತೀವ್ರವಾಗಿ ಗಾಯಗೊಂಡಿತ್ತು. ಬಳ್ಳಾರಿಯಲ್ಲಿ ಚಿಕಿತ್ಸೆ ಕೊಡಿಸಿದ ನಂತ್ರ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆತಂದು ಚಿಕಿತ್ಸೆ ಕೊಡಿಸಲಾಗುತ್ತಿತ್ತು.
ಬಳ್ಳಾರಿಯ ವಿಮ್ಸ್ ನಲ್ಲಿ ಚಿಕಿತ್ಸೆ ಪಡೆದ ಬಳಿಕ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಬಂದು, ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಂತ ಕಿಶಾರ್ ನಿನ್ನೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ. ಈ ಮೂಲಕ ಹುಚ್ಚುನಾಯಿಗಳ ದಾಳಿಗೆ ಮತ್ತೊಂದು ಮಗು ಬಲಿಯಾದಂತೆ ಆಗಿದೆ.
ಫೆ.21ರಂದು ಬಳ್ಳಾರಿ ಜಿಲ್ಲೆಯ ಮರಿಯಮ್ಮನಹಳ್ಳಿ ಪಟ್ಟಣದ 12ನೇ ವಾರ್ಟಿನಲ್ಲಿ ನವೋದಯ ಕೋಚಿಂಗ್ ಮುಗಿಸಿ ಮನೆಗೆ ತೆರಳುವ ವಿದ್ಯಾರ್ಥಿಗಳು ಸೇರಿದಂತೆ 6 ಮಂದಿ ಮೇಲೆ ಹುಚ್ಚು ನಾಯಿ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಬೆನ್ನು, ತೊಡೆ, ಕೈ, ಕಾಲು, ಮುಖದ ಭಾಗಕ್ಕೆ ಗಾಯವಾಗಿತ್ತು. ಅವರೆಲ್ಲರೂ ಚಿಕಿತ್ಸೆಯ ಬಳಿಕ ಚೇತರಿಸಿಕೊಂಡು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.