ಟೆಕ್ ದೈತ್ಯ 'ಗೂಗಲ್' ಬೆವರಿಳಿಸಿದ ಸುಪ್ರೀಂಕೋರ್ಟ್ ; ₹1,337 ಕೋಟಿ ದಂಡದ ಶೇ.10ರಷ್ಟು ಮೊತ್ತ ಠೇವಣಿ ಇಡುವಂತೆ ಆದೇಶ
ನವದೆಹಲಿ: ಸ್ಪರ್ಧಾತ್ಮಕ ವಿರೋಧಿ ಅಭ್ಯಾಸಗಳಿಗಾಗಿ ತಂತ್ರಜ್ಞಾನ ದೈತ್ಯ ಕಂಪನಿಗೆ 1,337 ಕೋಟಿ ರೂ.ಗಳ ದಂಡಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಈ ಮೂಲಕ ನ್ಯಾಯಮಂಡಳಿ (NCLAT) ಆದೇಶದ ವಿರುದ್ಧ ಗೂಗಲ್ ಸಲ್ಲಿಸಿದ್ದ ಮನವಿಯನ್ನ ಸ್ವೀಕರಿಸಲು ಸುಪ್ರೀಂ ಕೋರ್ಟ್ ಗುರುವಾರ ನಿರಾಕರಿಸಿದೆ.
ಸ್ಪರ್ಧಾತ್ಮಕ ವಿರೋಧಿ ಅಭ್ಯಾಸಗಳಿಗಾಗಿ ಭಾರತೀಯ ಸ್ಪರ್ಧಾ ಆಯೋಗ (CCI) ವಿಧಿಸಿದ 1,337.76 ಕೋಟಿ ರೂ.ಗಳ ದಂಡದ ಶೇಕಡಾ 10 ರಷ್ಟನ್ನು ಠೇವಣಿ ಇಡುವಂತೆ ತಂತ್ರಜ್ಞಾನ ದೈತ್ಯ ಗೂಗಲ್ ಇಂಡಿಯಾಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಇನ್ನು ಎನ್ಸಿಎಲ್ಎಟಿ ಆದೇಶವನ್ನ ಅನುಸರಿಸಲು ಗೂಗಲ್ ಇಂಡಿಯಾಗೆ ಒಂದು ವಾರ ಕಾಲಾವಕಾಶ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಮತ್ತು ಜೆ.ಬಿ.ಪರ್ಡಿವಾಲಾ ಅವರನ್ನೊಳಗೊಂಡ ನ್ಯಾಯಪೀಠವು ಭಾರತೀಯ ಸ್ಪರ್ಧಾ ಆಯೋಗ (CCI) ವಿಧಿಸಿದ ದಂಡದ ಶೇಕಡಾ 10ರಷ್ಟನ್ನು ಜಮಾ ಮಾಡಲು ಯುಎಸ್ ಸಂಸ್ಥೆಗೆ ಏಳು ದಿನಗಳ ಕಾಲಾವಕಾಶ ನೀಡಿತು.