ಜನಸಂಕಲ್ಪ ಯಾತ್ರೆ ಮೂಲಕ ಬಿಜೆಪಿ ಪರ ಜನಶಕ್ತಿ ಸಾಬೀತು - ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರು: ರಾಜ್ಯದಾದ್ಯಂತ ನಡೆಯುತ್ತಿರುವ ಜನಸಂಕಲ್ಪ ಯಾತ್ರೆಯ ಮೂಲಕ ಬಿಜೆಪಿ ಪರ ಜನಶಕ್ತಿ ಸಾಬೀತಾಗಿದೆ. ಆದರೆ, ಸಿದ್ರಾಮಣ್ಣನಿಗೆ ಹಳದಿ ಕಣ್ಣು ಇದ್ದಂತಿದೆ. ಅವರು ಜನಸಂಕಲ್ಪ ಯಾತ್ರೆಗೆ ಜನರೇ ಸೇರುತ್ತಿಲ್ಲ ಎಂಬ ಅಪಪ್ರಚಾರ ಮಾಡುತ್ತಾರೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಕ್ಷೇಪಿಸಿದರು.
ಚಿಕ್ಕಮಗಳೂರು ಜಿಲ್ಲೆಯ ಕಡೂರುವಿನಲ್ಲಿ ಇಂದು ಜನಸಂಕಲ್ಪ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಆಗಬಯಸುವ ಸಿದ್ರಾಮಣ್ಣ ಮೊದಲು ತಮ್ಮದೇ ಪಕ್ಷದ ಡಿ.ಕೆ. ಶಿವಕುಮಾರ್ ಅವರ ಬೆಂಬಲವನ್ನು ಮೊದಲು ಪಡೆಯಲಿ. ಆಮೇಲೆ ಜನಬೆಂಬಲ ಕೇಳಬೇಕು ಎಂದು ಆಗ್ರಹಿಸಿದರು. 2013ರಲ್ಲಿ ಸಿಎಂ ಆಗಿದ್ದ ಸಿದ್ರಾಮಣ್ಣ ಅವರು 5 ವರ್ಷದ ಅಧಿಕಾರದ ಅವಧಿಯಲ್ಲಿ ರಾಜ್ಯದ ಅಭಿವೃದ್ಧಿಗೆ ಏನು ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು. ಅದಕ್ಕಾಗಿಯೇ 2018ರಲ್ಲಿ ಕಾಂಗ್ರೆಸ್ಗೆ ವಿರೋಧ ಪಕ್ಷದ ಸ್ಥಾನವನ್ನು ಕರ್ನಾಟಕದ ಜನರು ನೀಡಿದ್ದಾರೆ ಎಂದರು.
ಎಸ್ಸಿ- ಎಸ್ಟಿ, ಹಾಸಿಗೆ, ದಿಂಬು, ಬಿಡಿಎ ಸೇರಿ ಎಲ್ಲೆಡೆ ಭ್ರಷ್ಟಾಚಾರವನ್ನು ಜನರು ಮರೆತಿಲ್ಲ. ಸಾಮಾಜಿಕ ಸಾಮರಸ್ಯ ಹಾಳು ಮಾಡಿದ್ದರಿಂದ ಹಿಂದೂಗಳ ಕೊಲೆ ಆದುದನ್ನು ಜನರು ಮರೆತಿಲ್ಲ. ಅಹಿಂದದ ಮೂಲಕ ನೀವೇ ನಿಮ್ಮನ್ನು ಮುಂದೆ ತಂದಿದ್ದೀರಿ. ನಿಮ್ಮ ಕಾಲದಲ್ಲಿ ಎಸ್ಸಿ, ಎಸ್ಟಿ ಗೆ ಗರಿಷ್ಠ ಅನ್ಯಾಯ ಆಗಿದೆ ಎಂದು ಆಕ್ಷೇಪಿಸಿದರು.
ಕರ್ನಾಟಕದ ಜನರು ಜಾಗೃತರಾಗಿದ್ದಾರೆ. ಜನಸಂಕಲ್ಪ ಯಾತ್ರೆಯು ಮುಂದಿನ ದಿನಗಳಲ್ಲಿ ವಿಜಯ ಸಂಕಲ್ಪ ಯಾತ್ರೆಯಾಗಿ ಪರಿವರ್ತನೆ ಆಗಲಿದೆ. ಕೇವಲ ಅಧಿಕಾರಕ್ಕಾಗಿ ಇರುವ ಕಾಂಗ್ರೆಸ್ ಪಕ್ಷವನ್ನು ಜನರು ದೂರ ಇಡಲಿದ್ದಾರೆ ಎಂದು ಭರವಸೆಯಿಂದ ನುಡಿದರು.
ಅತಿವೃಷ್ಟಿ, ಮನೆ ಹಾನಿಗೆ ಪರಿಹಾರ ಹೆಚ್ಚಳ ಮಾಡಲಾಗಿದೆ. ರೈತರ ಸಂಕಷ್ಟಕ್ಕೆ ಸರಕಾರ ಸದಾ ಕಾಲ ಸ್ಪಂದಿಸಿದೆ. ಕೇಂದ್ರ ಸರಕಾರ ಕೊಡುವ ಬೆಳೆ ಪರಿಹಾರವನ್ನು ಗಮನಾರ್ಹವಾಗಿ ಹೆಚ್ಚಿಸಿದ್ದರಿಂದ 17 ಲಕ್ಷ ರೈತರಿಗೆ ಪ್ರಯೋಜನವಾಗಿದೆ. ಅತಿ ಶೀಘ್ರವಾಗಿ ಹಣ ಬಿಡುಗಡೆ ಮಾಡಿದ್ದೇವೆ ಎಂದು ವಿವರಿಸಿದರು.
ನಮ್ಮದು ಜನರಿಗೆ, ರೈತರಿಗೆ ಸ್ಪಂದಿಸುವ ಸರಕಾರ ಎಂದ ಅವರು, ಅಪ್ಪರ್ ಭದ್ರಾ ಸೇರಿದಂತೆ ಮಲೆನಾಡಿನ ನೀರಾವರಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತಿರುವುದನ್ನು ಪ್ರಸ್ತಾಪಿಸಿದರು. ಚಿಕ್ಕಮಗಳೂರಿಗೆ ಪ್ರತ್ಯೇಕ ಹಾಲು ಒಕ್ಕೂಟ ಮಂಜೂರು ಮಾಡುತ್ತೇನೆ ಎಂದು ತಿಳಿಸಿದರು.
130 ಕೋಟಿಗೂ ಹೆಚ್ಚು ಜನಸಂಖ್ಯೆಗೆ ಎಲ್ಲ ಮನೆಗೂ ಕುಡಿಯುವ ನೀರನ್ನು ಒದಗಿಸುವ ಮಹತ್ವದ ಕಾರ್ಯಕ್ಕೆ ನಮ್ಮ ಧೈರ್ಯಶಾಲಿ ಪ್ರಧಾನಿ ನರೇಂದ್ರ ಮೋದಿಜಿ ಮುಂದಾಗಿದ್ದಾರೆ. ಇದು ಪ್ರಮುಖ ಸಂಕಲ್ಪ. 10 ಕೋಟಿ ಮನೆಗಳ ಪೈಕಿ 7.5 ಕೋಟಿ ಮನೆಗೆ ನೀರು ಪೂರೈಕೆ ಈಗಾಗಲೇ ಸಾಧ್ಯವಾಗಿದೆ. ಕರ್ನಾಟಕದಲ್ಲಿ ಹೊಸದಾಗಿ 30 ಲಕ್ಷ ಮನೆಗಳಿಗೆ ನೀರು ಒದಗಿಸಿದ್ದು, ಇದು ನಮ್ಮ ಬದ್ಧತೆಯ ಪ್ರತೀಕ ಎಂದು ತಿಳಿಸಿದರು. ಹಿಂದಿನ ಪ್ರಧಾನಿಗಳು, ಕಾಂಗ್ರೆಸ್ ಸರಕಾರಗಳು ಇದನ್ನು ಯಾಕೆ ಮಾಡಿಲ್ಲ ಎಂದು ಕೇಳಿದರು.
5 ವರ್ಷ ಶಾಲಾ ಕೊಠಡಿ ನಿರ್ಮಿಸಲು ನೀವ್ಯಾಕೆ ಮುಂದಾಗಿಲ್ಲ ಎಂದು ಸಿದ್ರಾಮಣ್ಣ ಉತ್ತರಿಸಲಿ ಎಂದು ಸವಾಲು ಹಾಕಿದ ಅವರು, ನಾವು 8 ಸಾವಿರ ಶಾಲಾ ಕೊಠಡಿಗಳನ್ನು ಒಂದೇ ವರ್ಷ ನಿರ್ಮಿಸುತ್ತಿದ್ದೇವೆ; ಇದು ಜನಸ್ಪಂದನೆಯ ಸರಕಾರ ಎಂದು ತಿಳಿಸಿದರು.
ಸಂವಿಧಾನ, ಸಾಮಾಜಿಕ ನ್ಯಾಯದ ಮಾತನಾಡುವ ಕಾಂಗ್ರೆಸ್ಸಿಗರು ಬಾಬಾ ಸಾಹೇಬ ಡಾ.ಅಂಬೇಡ್ಕರ್ ಅವರನ್ನೇ ಸೋಲಿಸಿದ್ದರು. ಅವರ ಪಾರ್ಥಿವ ಶರೀರ ಸಂಸ್ಕಾರಕ್ಕೂ ಜಾಗ ಕೊಡಲಿಲ್ಲ. ಆದರೆ, ನಮ್ಮ ಸರಕಾರ ಮೀಸಲಾತಿ ಪ್ರಮಾಣ ಹೆಚ್ಚಿಸುವ ಮೂಲಕ ಸಾಮಾಜಿಕ ನ್ಯಾಯ ನೀಡಲು ಬದ್ಧತೆ ಪ್ರದರ್ಶಿಸಿದೆ. ಕೇಂದ್ರ ಸರಕಾರವು ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಲಿದೆ ಎಂದು ತಿಳಿಸಿದರು.
ಕುರಿಗಾಹಿಗಳನ್ನು ಸಿದ್ರಾಮಣ್ಣ ನೆನಪಿಸಿಕೊಳ್ಳಲಿಲ್ಲ. ನಾವು ಆ ಎಲ್ಲ ಕುರಿಗಾರರಿಗೆ 20 ಕುರಿ ಒಂದು ಮೇಕೆ ನೀಡುತ್ತಿದ್ದು, 354 ಕೋಟಿ ಮಂಜೂರು ಮಾಡಿದ್ದೇವೆ. ಈ ರೀತಿ ಇರುವವರಿಗೆ ಮತ್ತೆ ಅಧಿಕಾರಕ್ಕೆ ತರಬೇಕೇ ಎಂದು ಅವರು ಪ್ರಶ್ನೆಯನ್ನು ಮುಂದಿಟ್ಟರು. ಮನಸ್ಸಿದ್ದರೆ ಮಾರ್ಗ; ನಮಗಿದೆ ಮನಸು. ನಾವು ಜನಪರವಾಗಿಯೇ ಕೆಲಸ ಮಾಡುತ್ತೇವೆ ಎಂದರು.
ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮ ಮಾಡಿದ್ದೇವೆ. 50 ಸಾವಿರ ತಾಂಡಾಗಳ ಜನರಿಗೆ ಹಕ್ಕುಪತ್ರ ನೀಡುತ್ತಿದ್ದೇವೆ. ಇದು ಸಾಮಾಜಿಕ ನ್ಯಾಯ ಎಂದು ತಿಳಿಸಿದರು. ಎಸ್ಸಿ ಎಸ್ಟಿ ಹಾಸ್ಟೆಲ್ ಸಂಖ್ಯೆ ಹೆಚ್ಚಳ, 75 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುತ್ತಿರುವುದು ನಮ್ಮ ನೈಜ ಬದ್ಧತೆಯ ಪ್ರತೀಕ ಎಂದು ವಿವರಿಸಿದರು.
ಶಿಕ್ಷಣ- ಆರೋಗ್ಯ- ಮೂಲಭೂತ ಸೌಕರ್ಯ, ಉದ್ಯೋಗ, ನೀರಾವರಿ ಸೇರಿದಂತೆ ಎಲ್ಲ ಕಡೆ ಅಭಿವೃದ್ಧಿಯ ಸಂಕಲ್ಪವನ್ನು ನಾವು ಈಡೇರಿಸುತ್ತಿದ್ದೇವೆ. ಇದನ್ನು ಗಮನಿಸಿ ಜನರು ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲಿದ್ದಾರೆ ಎಂದು ವಿಶ್ವಾಸದಿಂದ ನುಡಿದರು.
ಕರ್ನಾಟಕದಲ್ಲಿ ಬಿಜೆಪಿಯ ಸುನಾಮಿ ಎದ್ದಿದೆ. ಕಡೂರಿನಂತೆ ಎಲ್ಲ ಕಡೆ ಜನಬೆಂಬಲ ಇದೆ. ಕರ್ನಾಟಕದಲ್ಲಿ ಮತ್ತೊಮ್ಮೆ ಬಿಜೆಪಿಯ ಜನಪರ ಸರಕಾರ ಬರಲಿದೆ. ನಿಮ್ಮೆಲ್ಲರ ಮತಭಿಕ್ಷೆ ಹಾಗೂ ಆಶೀರ್ವಾದ ನಮ್ಮ ಪರವಾಗಿ ಇರಲಿ ಎಂದು ಜನರಲ್ಲಿ ಮನವಿ ಮಾಡಿದರು.
ಬೆಳ್ಳಿ ಪ್ರಕಾಶ್ ಅವರು ಜನಪರವಾಗಿಯೇ ಕೆಲಸ ಮಾಡಿದ್ದಾರೆ. ನಿಮ್ಮನ್ನು ಕಾಯುವ- ಸೇವೆ ಮಾಡುವ ಅದಮ್ಯ ಶಕ್ತಿ ಬೆಳ್ಳಿ ಪ್ರಕಾಶ್. ಅವರಿಗೆ ನಿಮ್ಮೆಲ್ಲರ ಆಶೀರ್ವಾದ ಇರಲಿ ಎಂದು ಹಾರೈಸಿದರು.
ಕೇಂದ್ರ ಸಂಸದೀಯ ಮಂಡಳಿಯ ಸದಸ್ಯ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ,ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಮಾತನಾಡಿ, ಬಿಜೆಪಿ ಬೆಂಬಲಿಸಲು ಮನವಿ ಮಾಡಿದರು. ಕೇಂದ್ರ- ರಾಜ್ಯದ ಸಚಿವರು, ಪಕ್ಷದ ಪ್ರಮುಖರು, ಶಾಸಕರಾದ ಬೆಳ್ಳಿ ಪ್ರಕಾಶ್, ಎಂ.ಪಿ.ಕುಮಾರಸ್ವಾಮಿ, ಜಿಲ್ಲಾ ಅಧ್ಯಕ್ಷ ಕಲ್ಮರುಡಪ್ಪ, ಕಾರ್ಯಕರ್ತರು ಭಾಗವಹಿಸಿದ್ದರು. ಕಾಂಗ್ರೆಸ್ ಪಕ್ಷ ಮತ್ತು ಇತರ ಪಕ್ಷದ ಅನೇಕ ಮುಖಂಡರು ಇದೇ ಸಂದರ್ಭದಲ್ಲಿ ಬಿಜೆಪಿ ಸೇರಿದರು.