ಚೀನಾದಲ್ಲಿ ಕೋವಿಡ್ ನಿರ್ಬಂಧ ಟೀಕೆ: ಸಾವಿರಾರು ಸಾಮಾಜಿಕ ಜಾಲತಾಣ ಖಾತೆಗಳ ರದ್ದು
ಬೀಜಿಂಗ್: ಚೀನಾದಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ನೀತಿಗಳ ಬಗ್ಗೆ ಟೀಕೆ, ವಿಮರ್ಶೆಗಳನ್ನು ಒಳಗೊಂಡಿದ್ದ, ಸಾವಿರಾರು ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ಚೀನಾ ಸರ್ಕಾರ ಅಮಾನತುಪಡಿಸಿದೆ.
ಚೀನಾದಲ್ಲಿ ಕೋವಿಡ್ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ, ಲಾಕ್ಡೌನ್ ಸೇರಿದಂತೆ ಬಿಗಿ ಕ್ರಮಗಳನ್ನು ಜಾರಿ ಮಾಡಿದೆ.
ಹೆಸರಾಂತ ಜಾಲತಾಣ 'ಸಿನಾ ವೀಬೊ', ನಿಯಮ ಉಲ್ಲಂಘನೆಯ 12,854 ಪ್ರಕರಣಗಳನ್ನು ತಾನು ಗುರುತಿಸಿರುವುದಾಗಿ ತಿಳಿಸಿದೆ. ಪರಿಣತರು, ವಿದ್ವಾಂಸರು, ವೈದ್ಯಕೀಯ ಕ್ಷೇತ್ರದ ಕಾರ್ಯಕರ್ತರ ವಿರುದ್ಧದ ದಾಳಿಗಳು ಇದರಲ್ಲಿ ಸೇರಿದ್ದವು. ಈ ಪೈಕಿ 1,120 ಖಾತೆಗಳನ್ನು ತಾತ್ಕಾಲಿಕ ಅಥವಾ ಶಾಶ್ವತವಾಗಿ ಬಂದ್ ಮಾಡಲಾಗಿದೆ ಎಂದು ಹೇಳಿದೆ.
ಆಡಳಿತರೂಢ ಕಮ್ಯುನಿಸ್ಟ್ ಪಾರ್ಟಿ ಕೋವಿಡ್ ಕುರಿತ ಬಿಗಿ ನಿಬಂಧನೆಗಳನ್ನು ಸಮರ್ಥಿಸಿಕೊಳ್ಳಲು ಬಹತೇಕ ವೈದ್ಯ ಕ್ಷೇತ್ರದ ಪರಿಣತರನ್ನು ಆಧರಿಸಿದೆ. ಚೀನಾದಲ್ಲಿ ನೇರ ಟೀಕೆಗೆ ಅವಕಾಶವಿಲ್ಲ, ವಾಕ್ ಸ್ವಾತಂತ್ರ್ಯದ ಮೇಲೂ ನಿರ್ಬಂಧ ಹೇರಲಾಗಿದೆ.