ಗುಂಬಜ್ ಮಾದರಿ ಅಂಗನವಾಡಿ ಉದ್ಘಾಟನೆ
ದೊಡ್ಡಬಳ್ಳಾಪುರ: ತಾಲ್ಲೂಕಿನ ತಿಮ್ಮಸಂದ್ರ ಗ್ರಾಮದಲ್ಲಿ ಎಜಾಕ್ಸ್ ಎಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ಸಿಎಸ್ಆರ್ ಅನುದಾನದಲ್ಲಿ ನಿರ್ಮಿಸಲಾಗಿರುವ ಗೋಲ್ ಗುಂಬಜ್ ಮಾದರಿಯ ಅಂಗನವಾಡಿ ಕಟ್ಟಡ ಹಾಗೂ ಸರ್ಕಾರಿ ಪ್ರಾಥಮಿಕ ಪಾಠ ಶಾಲೆಯ ಕೊಠಡಿಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಆರ್.ಲತಾ ಶುಕ್ರವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ನೂತನ ಕಟ್ಟಡವು ವಿಶೇಷವಾಗಿದೆ. ಡೂಮ್ ಮಾದರಿಯಲ್ಲಿ ನಿರ್ಮಿಸಲಾಗಿದೆ. ಕಟ್ಟಡದ ಒಳಗೆ ಆಹ್ಲಾದಕರ ವಾತಾವರಣದಿಂದ ಕೂಡಿದ್ದು, ಮಕ್ಕಳು ಕಲಿಯಲು ಪೂರಕವಾದ ವಾತಾವರಣವನ್ನು ಕಲ್ಪಿಸಲಾಗಿದೆಎಂದರು.
ಎಜಾಕ್ಸ್ ಕಂಪನಿಯು ಸಾಮಾಜಿಕವಾಗಿ ಉತ್ತಮವಾದ ಕಾರ್ಯವನ್ನು ನಿರ್ವಹಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮಕ್ಕಳ ಕಲಿಕೆಯ ಬುನಾದಿಗೆ ಪೂರಕವಾಗಿರುವ ಅಂಗನವಾಡಿಗಳಿಗೆ ಮೂಲ ಸೌಕರ್ಯಕ್ಕೆ ಒತ್ತು ನೀಡಬೇಕು ಎಂದು ಹೇಳಿದರು.
ಶಾಸಕ ಟಿ.ವೆಂಕಟರಾಮಣಯ್ಯ ಮಾತನಾಡಿ, ಎಜಾಕ್ಸ್ ಕಂಪನಿಯ ಸಾಮಾಜಿಕ ಜವಾಬ್ದಾರಿಯ ಸಹಕಾರದಿಂದ ನೂತನ ಕಟ್ಟಡವನ್ನು ನಿರ್ಮಿಸಿರುವುದು ಶ್ಲಾಘನೀಯ. ಕೋವಿಡ್ ಸಂದರ್ಭದಲ್ಲಿ ₹3.5 ಕೋಟಿ ವೆಚ್ಚದ ಮೇಕ್ ಶಿಫ್ಟ್ ಆಸ್ಪತ್ರೆಯನ್ನು ನಿರ್ಮಿಸಿಕೊಟ್ಟಿದ್ದಾರೆ. ಅಲ್ಲದೆ ಶಾಲಾ ಕಟ್ಟಡವನ್ನು ಸಹಾ ನಿರ್ಮಿಸಿದ್ದಾರೆ. ಇದೇ ರೀತಿ ಗ್ರಾಮೀಣ ಪ್ರದೇಶಗಳಿಗೂ ಹೆಚ್ಚಿನ ಆದ್ಯತೆ ನೀಡಿ ತಮ್ಮ ಸಾಮಾಜಿಕ ಕಾರ್ಯ ಮುಂದುವರೆಸಿ ಎಂದರು.
ಎಲ್ಲಾ ಸರ್ಕಾರಗಳು ಈ ಹಿಂದಿನಿಂದಲೂ ಶಿಕ್ಷಣಕ್ಕೆ ಮಹತ್ವ ನೀಡುತ್ತಿವೆ. ಸರ್ಕಾರಿ ಶಾಲೆಗಳು ಉತ್ತಮ ಶಿಕ್ಷಣವನ್ನು ನೀಡುತ್ತಿದ್ದು, ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳತ್ತ ಮುಖ ಮಾಡದೇ ಹೆಮ್ಮೆಯಿಂದ ಸರ್ಕಾರಿ ಶಾಲೆಗೆ ದಾಖಲಿಸಿ. ಸರ್ಕಾರಿ ಶಾಲೆಯ ಶಿಕ್ಷಕರು ಮೆರಿಟ್ ಆಧಾರದ ಮೇಲೆ ನೇಮಕವಾಗಿರುತ್ತಾರೆ. ಹೀಗಾಗಿ ಮಕ್ಕಳಿಗೆ ಕಲಿಯಲು ತುಂಬಾ ಅನುಕೂಲವಾಗುತ್ತದೆ ಎಂದರು.
ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ನಟರಾಜ್, ತಹಶೀಲ್ದಾರ್ ಮೋಹನಕುಮಾರಿ, ಸಿಡಿಪಿಓ ಅನಿತಾಕುಮಾರಿ, ಎಜಾಕ್ಸ್ ಕಂಪನಿಯ ಎಚ್.ಆರ್.ಗಣಪತಿ, ಸಿ.ಎಸ್.ಆರ್.ಅಧಿಕಾರಿ ಮಂಜುನಾಥ್ ಇದ್ದರು.