ಕೋವಿಡ್‌ನಿಂದ ವಿಮಾನ ಹಾರಾಟ ರದ್ದು: ಬುಕ್ಕಿಂಗ್‌ಗೆ ಗ್ರಾಹಕರಿಂದ ಕಡಿತ ಮಾಡಿದ್ದ ₹44 ಸಾವಿರ ಪಾವತಿಸಲು ಆಯೋಗ ಆದೇಶ

ಕೋವಿಡ್‌ನಿಂದ ವಿಮಾನ ಹಾರಾಟ ರದ್ದು: ಬುಕ್ಕಿಂಗ್‌ಗೆ ಗ್ರಾಹಕರಿಂದ ಕಡಿತ ಮಾಡಿದ್ದ ₹44 ಸಾವಿರ ಪಾವತಿಸಲು ಆಯೋಗ ಆದೇಶ

ಬೆಂಗಳೂರು: ಕೋವಿಡ್‌ನಿಂದ ಲಾಕ್‌ಡೌನ್‌ ಘೋಷಣೆಯಾಗಿದ್ದರಿಂದ ಬೆಂಗಳೂರಿನಿಂದ ಲಂಡನ್‌ಗೆ ತೆರಳಬೇಕಿದ್ದ ವಿಮಾನ ರದ್ದು ಮಾಡಿದ್ದಾಗ ಬಾಕಿ ಉಳಿಸಿಕೊಂಡಿದ್ದ ₹44,029 ಹಾಗೂ ಘಟನೆಯ ವೆಚ್ಚ (ಇನ್‌ಸಿಡೆಂಟಲ್‌ ಚಾರ್ಜ್‌) 5 ಸಾವಿರ ಸೇರಿದಂತೆ ₹49,029 ಯನ್ನು ದೂರುದಾರ ಗ್ರಾಹಕರಿಗೆ ಪಾವತಿಸುವಂತೆ ಏರ್‌ ಇಂಡಿಯಾಗೆ ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗ ಆದೇಶಿಸಿದೆ.

ಬೆಂಗಳೂರಿನ ಮಿಲಿನ್‌ ಜಗದೀಶ್‌ಭಾಯ್‌ ಪರೇಖ್‌ ಸಲ್ಲಿಸಿದ್ದ ದೂರನ್ನು ಬೆಂಗಳೂರು ನಗರದ ಎರಡನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವಾಹ್ಯ ಪರಿಹಾರ ಆಯೋಗದ ಅಧ್ಯಕ್ಷೆ ಎಂ ಶೋಭಾ ಮತ್ತು ಬಿ ದೇವರಾಜು ಹಾಗೂ ವಿ ಅನುರಾಧಾ ಅವರನ್ನು ಒಳಗೊಂಡ ಪೀಠವು ಮಾನ್ಯ ಮಾಡಿದೆ.

"ವಿಮಾನ ಪ್ರಯಾಣ ರದ್ದುಪಡಿಸಿದಾಗ ಬಾಕಿ ಹಣವನ್ನು ತನ್ನ ಬಳಿ ಉಳಿಸಿಕೊಳ್ಳುವ ಹಕ್ಕು ಏರ್‌ ಇಂಡಿಯಾಗೆ ಇಲ್ಲ. ಹಲವು ಬಾರಿ ಮನವಿ ಮಾಡಿದರೂ ಏರ್‌ ಇಂಡಿಯಾ ದೂರುದಾರರಿಗೆ ಪ್ರತಿಕ್ರಿಯಿಸಿಲ್ಲ. ಏರ್‌ ಇಂಡಿಯಾದ ಈ ನಡೆಯು ಸೇವಾ ನ್ಯೂನತೆಯಾಗಿದೆ. ದೂರುದಾರರು ಸಲ್ಲಿಸಿರುವ ದಾಖಲೆಗಳು ಏರ್‌ ಇಂಡಿಯಾದ ಸೇವಾ ನ್ಯೂನತೆಯನ್ನು ಸಾಬೀತುಪಡಿಸಿವೆ" ಎಂದು ಆದೇಶದಲ್ಲಿ ಹೇಳಿದೆ.ಘಟನೆಯ ಹಿನ್ನೆಲೆ: 2020ರ ಜನವರಿ 21ರಂದು ಬೆಂಗಳೂರಿನಿಂದ ಲಂಡನ್‌ಗೆ ತೆರಳಲು ಮಿಲಿನ್‌ ಪರೇಖ್‌ ಅವರು ಮೇಕ್ ಮೈ ಟ್ರಿಪ್‌ ಮೂಲಕ ₹1,35,043 ಪಾವತಿಸಿ 2020ರ ಏಪ್ರಿಲ್‌ನಲ್ಲಿ ಏರ್‌ ಇಂಡಿಯಾ ವಿಮಾನದ ಟಿಕೆಟ್‌ ಕಾಯ್ದಿರಿಸಿದ್ದರು. ಕೋವಿಡ್‌ ಹಿನ್ನೆಲೆಯಲ್ಲಿ 2020ರ ಏಪ್ರಿಲ್‌ನಲ್ಲಿ ಏರ್‌ ಇಂಡಿಯಾವು ಎಲ್ಲಾ ಅಂತಾರಾಷ್ಟ್ರೀಯ ವಿಮಾನ ಹಾರಾಟಗಳನ್ನು ರದ್ದುಪಡಿಸಿ, ಭಾಗಶಃ ₹91,114 ಹಣವನ್ನು ದೂರುದಾರರರಿಗೆ ಪಾವತಿಸಿತ್ತು. ಈ ಹಿನ್ನೆಲೆಯಲ್ಲಿ ಬಾಕಿ ₹44,029 ಪಾವತಿಸುವಂತೆ ದೂರುದಾರರು ಏರ್‌ ಇಂಡಿಯಾಗೆ ಹಲವು ಬಾರಿ ಕೋರಿದ್ದರು. ಇದಕ್ಕೆ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಪರೇಖ್‌ ಗ್ರಾಹಕರ ರಕ್ಷಣಾ ಕಾಯಿದೆ ಸೆಕ್ಷನ್‌ 12ರ ಅಡಿ ವಿಮಾನ ಬುಕ್ಕಿಂಗ್‌ಗೆ ಪಡೆದಿದ್ದ ವೆಚ್ಚದಲ್ಲಿನ ಬಾಕಿ ₹44,029 ಹಾಗೂ ಘಟನೆಯ ವೆಚ್ಚ ₹5 ಸಾವಿರ ಸೇರಿದಂತೆ ₹49,029ಯನ್ನು ಪಾವತಿಸಲು ಏರ್‌ ಇಂಡಿಯಾಗೆ ನಿರ್ದೇಶಿಸಬೇಕು ಎಂದು ಕೋರಿದ್ದರು. ಇದನ್ನು ವ್ಯಾಜ್ಯ ಪರಿಹಾರ ಆಯೋಗ ಪುರಸ್ಕರಿಸಿದೆ.