ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ:ಕಾಂಗ್ರೆಸ್‌ ಸೇರುತ್ತಾರಾ ಜಿ.ಎನ್‌.ನಂಜುಂಡಸ್ವಾಮಿ?

ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ:ಕಾಂಗ್ರೆಸ್‌ ಸೇರುತ್ತಾರಾ ಜಿ.ಎನ್‌.ನಂಜುಂಡಸ್ವಾಮಿ?

ಕೊಳ್ಳೇಗಾಲ: ಕೊಳ್ಳೇಗಾಲದ ಮಾಜಿ ಶಾಸಕ, ಬಿಜೆಪಿ ಎಸ್.ಸಿ.ಮೋರ್ಚಾದ ರಾಜ್ಯ ಉಪಾಧ್ಯಕ್ಷ ಜಿ.ಎನ್. ನಂಜುಂಡಸ್ವಾಮಿ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆ ಯಾಗುತ್ತಿದ್ದಾರೆಯೇ?

ನಾಲ್ಕೈದು ದಿನಗಳಿಂದ ಕ್ಷೇತ್ರ ಹಾಗೂ ಜಿಲ್ಲೆಯ ರಾಜಕೀಯ ವಲಯದಲ್ಲಿ ಇಂತಹದ್ದೊಂದು ಚರ್ಚೆ ನಡೆಯುತ್ತಿದೆ.

ಬಿಜೆಪಿ, ಕಾಂಗ್ರೆಸ್‌ ಮುಖಂಡರು ಕೂಡ ಖಾಸಗಿಯಾಗಿ ಈ ಬಗ್ಗೆ ಮಾತನಾಡುತ್ತಿದ್ದಾರೆ. ರಾಜ ಕೀಯದ ‌ಕುತೂಹಲ ಹೊಂದಿರುವ ಜನರು ಕೂಡ ಬಿಸಿ ಬಿಸಿ ಚರ್ಚೆಯಲ್ಲಿ ತೊಡಗಿದ್ದಾರೆ.

'ಬಿಜೆಪಿಯ ಟಿಕೆಟ್‌ ಆಕಾಂಕ್ಷಿ ಯಾಗಿದ್ದ ನಂಜುಂಡಸ್ವಾಮಿ ಅವರಿಗೆ ಟಿಕೆಟ್‌ ಸಿಗುವುದು ಅನುಮಾನ. ಶಾಸಕ ಎನ್‌.ಮಹೇಶ್‌ಗೆ ಪಕ್ಷದ ವರಿ ಷ್ಠರು ಮಣೆ ಹಾಕಲಿದ್ದಾರೆ. ಹಾಗಾಗಿ, ನಂಜುಂಡಸ್ವಾಮಿ ಪಕ್ಷಾಂತರಕ್ಕೆ ಒಲವು ತೋರಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ 20 ದಿನದ ಹಿಂದೆ ಚರ್ಚೆ ಮಾಡಿದ್ದಾರೆ. ಕಾಂಗ್ರೆಸ್‌ನ ಟಿಕೆಟ್‌ ಆಕಾಂಕ್ಷಿಗಳಾದ ಎ.ಆರ್.ಕೃಷ್ಣಮೂರ್ತಿ, ಎಸ್‌.ಜಯಣ್ಣ ಹಾಗೂ ಎಸ್‌.ಬಾಲರಾಜ್‌ ಅವರೊಂದಿಗೂ ಮೂರು ದಿನದ ಹಿಂದೆ ಮಾತುಕತೆ ನಡೆಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ವಿಧಾನಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಮ್ಮುಖದಲ್ಲಿ ಕಾಂಗ್ರೆಸ್‌ ಸೇರಲಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಅವರಿಗೆ ಟಿಕೆಟ್‌ ಸಿಗದಿದ್ದರೂ, 2024ರ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಲಿದ್ದಾರೆ' ಎಂಬುದು ರಾಜಕೀಯ, ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಮಾತು.

ಸ್ವತಃ ಜಿ.ಎನ್‌.ನಂಜುಂಡಸ್ವಾಮಿ ಹಾಗೂ ಎ.ಆರ್‌.ಕೃಷ್ಣಸ್ವಾಮಿ ಅವರು ಇದೆಲ್ಲಾ ವದಂತಿಗಳಷ್ಟೇ ಎಂದು ಹೇಳಿದ್ದಾರೆ.

ಮೂಲತಃ ಬಿಜೆಪಿಯವರಾದ ನಂಜುಂಡಸ್ವಾಮಿ ಈ ಹಿಂದೆಯೂ ಕಾಂಗ್ರೆಸ್‌ ಸೇರ್ಪಡೆಯಾಗಿದ್ದರು. ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಒಂದು ಬಾರಿ ಹಾಗೂ ಬಿಜೆಪಿ ಅಭ್ಯರ್ಥಿಯಾಗಿ ಒಂದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.

'ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ವರಿಷ್ಠರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ನಂಜುಂಡಸ್ವಾಮಿ, ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಇತರ ಮುಖಂಡರೊಂದಿಗೂ ಉತ್ತಮ ಸಂಬಂಧ ಹೊಂದಿದ್ದಾರೆ' ಎಂದು ಅವರನ್ನು ಹತ್ತಿರದಿಂದ ಬಲ್ಲವರು ಹೇಳುತ್ತಾರೆ.

ಶಾಸಕ ಎನ್‌.ಮಹೇಶ್‌ ಬಿಜೆಪಿಗೆ ಸೇರ್ಪಡೆಗೊಂಡ ಬಳಿಕ, ನಂಜುಂಡಸ್ವಾಮಿ ಹಾಗೂ ಮಹೇಶ್‌ ನಡುವೆ ಕ್ಷೇತ್ರದಲ್ಲಿ ಮುಸುಕಿನ ಗುದ್ದಾಟ ನಡೆಯುತ್ತಿದೆ. ನಂಜುಂಡಸ್ವಾಮಿ ಬಹಿರಂಗವಾಗಿ ಶಾಸಕರ ವಿರುದ್ಧ ಅಸಮಾಧಾನ ಹೊರಹಾಕಿದ್ದೂ ಇದೆ.

ಪಕ್ಷದ ವರಿಷ್ಠರು ಈ ಬಾರಿಯೂ ತಮಗೆ ಟಿಕೆಟ್‌ ನೀಡಲಿದ್ದಾರೆ ಎಂಬ ನಿರೀಕ್ಷೆಯಲ್ಲಿರುವ ನಂಜುಂಡಸ್ವಾಮಿ, ಕ್ಷೇತ್ರದ ಜನರಿಗೆ ತಾನೇ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಕ್ಷೇತ್ರದಲ್ಲಿ ಅವರಿಗೆ ತಮ್ಮದೇ ಆದ ಬೆಂಬಲಿಗರ ಪಡೆ ಇದೆ.

'ಕೊಳ್ಳೇಗಾಲ ಅಭಿವೃದ್ಧಿಗೆ ಮತ್ತೊಮ್ಮೆ ಜಿಎನ್‌ಎನ್‌' ಎಂದು ಬರೆ ದಿರುವ ಫ್ಲೆಕ್ಸ್‌, ಭಿತ್ತಿಪತ್ರ, ಬ್ಯಾನರ್‌ಗಳು, ಗೋಡೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಆಟೊ, ವಾಹನಗಳಲ್ಲಿ ರಾರಾಜಿಸುತ್ತಿವೆ.

ಜಿಲ್ಲಾ ಬಿಜೆಪಿಯ ಕೋರ್‌ ಕಮಿಟಿಯಿಂದ ನಂಜುಂಡಸ್ವಾಮಿ ಅವರನ್ನು ತೆಗೆದು ಹಾಕಲಾಗಿದೆ ಎಂಬ ಮಾತು ಕೂಡ ಕೇಳಿಬರುತ್ತಿದ್ದು, ಇಂತಹ ಸನ್ನಿವೇಶದಲ್ಲಿ ಪಕ್ಷಾಂತರದ ವದಂತಿ ಹಬ್ಬಿರುವುದು ರಾಜಕೀಯವಾಗಿ ಕುತೂಹಲ ಮೂಡಿಸಿದೆ.

ರಾಜಕೀಯ ಹಾದಿ: ಮೊದಲ ಬಾರಿಗೆ 1994ರಲ್ಲಿ ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನಂಜುಂಡಸ್ವಾಮಿ ಸೋಲು ಅನುಭವಿಸಿದರು.

ನಂತರ ಕಾಂಗ್ರೆಸ್‌ ಸೇರಿದ್ದ ಅವರು, 1999ರಲ್ಲಿ 'ಕೈ' ಶಾಸಕರಾಗಿ ಆಯ್ಕೆಯಾಗಿದ್ದರು. ನಂತರ 2004ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸೋತರು. 2008ರಲ್ಲಿ ಪಕ್ಷವು ಧ್ರುವನಾರಾಯಣ ಅವರಿಗೆ ಟಿಕೆಟ್‌ ನೀಡಿತ್ತು. ಗೆದ್ದಿದ್ದ ಅವರು 2009ರ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರದ ಸಂಸದರಾಗಿ ಆಯ್ಕೆಯಾದರು.

ಈ ಕಾರಣಕ್ಕೆ ಕೊಳ್ಳೇಗಾಲ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯಲ್ಲಿ ನಂಜುಂಡಸ್ವಾಮಿ ಬಿಜೆಪಿ ಅಭ್ಯರ್ಥಿಯಾಗಿದ್ದರು. ಆಗ ಅವರು ಗೆದ್ದು ಶಾಸಕರಾದರು.

ಆ ಬಳಿಕ ನಡೆದ ಎರಡು ಚುನಾವಣೆಗಳಲ್ಲಿ (2013, 2018) ಬಿಜೆಪಿಯಿಂದ ಸ್ಪರ್ಧಿಸಿ ಸೋಲನುಭವಿಸಿದರು. ಕಳೆದ ಬಾರಿ ಟಿಕೆಟ್‌ ತಪ್ಪಲಿದೆ ಎಂದು ಹೇಳಲಾಗಿತ್ತಾದರೂ, ಕೊನೆ ಗಳಿಗೆಯಲ್ಲಿ ಟಿಕೆಟ್‌ ಪಡೆಯಲು ನಂಜುಂಡಸ್ವಾಮಿ ಯಶಸ್ವಿಯಾಗಿದ್ದರು. ಆದರೆ ಗೆಲುವು ಒಲಿದಿರಲಿಲ್ಲ.

'ಆಲೋಚನೆ ಮಾಡಿಲ್ಲ'

ಈ ಬಗ್ಗೆ 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿರುವ ಜಿ.ಎನ್‌.ನಂಜುಂಡಸ್ವಾಮಿ, 'ಬಿಜೆಪಿ ತೊರೆಯುವ ಬಗ್ಗೆಯಾಗಲಿ, ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವುದರ ಬಗ್ಗೆ ಆಲೋಚನೆ ಮಾಡಿಲ್ಲ. ಕ್ಷೇತ್ರದಲ್ಲಿ ಕೇಳಿ ಬರುತ್ತಿರುವ ಮಾತು ನಿಜವಲ್ಲ. ಊಹಾಪೋಹಗಳಷ್ಟೇ. ಜಿಲ್ಲಾ ಬಿಜೆಪಿ ಕೋರ್ ಕಮಿಟಿಯಿಂದ ನನ್ನನ್ನು ತೆಗೆದು ಹಾಕಿದ್ದಾರೆಯೇ ಇಲ್ಲವೇ ಎಂಬುದು ನನಗೆ ಗೊತ್ತಿಲ್ಲ. ನನಗೆ ಅಧಿಕೃತ ಮಾಹಿತಿ ಬಂದಿಲ್ಲ' ಎಂದರು.

'ಚರ್ಚೆ ನಡೆದಿಲ್ಲ'

ಕಾಂಗ್ರೆಸ್‌ ಮುಖಂಡ, ಟಿಕೆಟ್‌ ಆಕಾಂಕ್ಷಿ ಎ.ಆರ್‌.ಕೃಷ್ಣಮೂರ್ತಿ ಮಾತನಾಡಿ, 'ನಂಜುಂಡಸ್ವಾಮಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವ ಬಗ್ಗೆ ಗೊತ್ತಿಲ್ಲ. ಕ್ಷೇತ್ರದಲ್ಲಿ ಈ ವಿಚಾರವಾಗಿ ಯಾವುದೇ ಸಮಾಲೋಚನೆ, ಚರ್ಚೆ ನಡೆದಿಲ್ಲ. ಪಕ್ಷದ ಮೂವರು ಮಾಜಿ ಶಾಸಕರು ಒಟ್ಟಿಗೆ ಇದ್ದು, ಕ್ಷೇತ್ರದಲ್ಲಿ ಪಕ್ಷ ಸಂಘಟಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ' ಎಂದರು.