ಕೊಪ್ಪಳ: ಬಾಣಂತಿ ನಿಗೂಢ ಸಾವು ಪ್ರಕರಣ, ತಾಯಿ, ತಮ್ಮನಿಂದಲೇ ಕೃತ್ಯ

ಕೊಪ್ಪಳ: ಬಾಣಂತಿ ನಿಗೂಢ ಸಾವು ಪ್ರಕರಣ, ತಾಯಿ, ತಮ್ಮನಿಂದಲೇ ಕೃತ್ಯ

ಕೊಪ್ಪಳ: ತಾಲ್ಲೂಕಿನ ಗಬ್ಬೂರು ಗ್ರಾಮದಲ್ಲಿ ಮಾ. 21ರಂದು ಒಂದೂವರೆ ತಿಂಗಳ ಬಾಣಂತಿ ನೇತ್ರಾವತಿ (28) ಎಂಬುವರು ಮಧ್ಯರಾತ್ರಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಭಾನುವಾರ ಬಂಧಿಸಿದ್ದಾರೆ.

ನೇತ್ರಾವತಿ ತಾಯಿ ಕನಕಮ್ಮ ಕಂಬಳಿ ಹಾಗೂ ತಮ್ಮ ಮಾರುತಿ ಕಂಬಳಿ ಈ ಕೃತ್ಯ ಎಸಗಿದ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ನಾಲ್ಕನೇ ಮಗುವಿಗೆ ಜನ್ಮ ನೀಡಿದ್ದ ನೇತ್ರಾವತಿ ಬಾಣಂತನಕ್ಕೆ ತವರು ಮನೆಗೆ ಬಂದಿದ್ದಳು. ರಾತ್ರಿ ಶೌಚಾಲಯಕ್ಕೆ ಹೊರಟಾಗ, ಹೊರಗಡೆ ಬದಲು ಮನೆಯಲ್ಲೇ ಹೋಗು ಎಂದು ಹೇಳಿ ಮನೆಯವರು ಮಲಗಿಸಿದ್ದರು. ಅಲ್ಲೇ ಮಲಗಿದ್ದಾಳೆ ಎಂದು ಎಲ್ಲರೂ ಭಾವಿಸಿದ್ದರು. ಬಳಿಕ ಮನೆ ಬಳಿಯಿರುವ ಖಾಲಿ ಜಾಗದಲ್ಲಿ ಸುಟ್ಟಸ್ಥಿತಿಯಲ್ಲಿ ಶವ ಕಂಡುಬಂದಿದೆ. ಏನಾಗಿದೆ ಎಂಬುದು ಗೊತ್ತಿಲ್ಲ ಎಂದು ಮೃತಳ ಸಂಬಂಧಿಕರು ಹೇಳಿದ್ದರು.

ಯುಗಾದಿ ಅಮವಾಸ್ಯೆ ಇದ್ದ ಕಾರಣ ಇದು ನಿಧಿಗಾಗಿ ಮಾಡಿದ ಕೃತ್ಯವಾಗಿರಬಹುದು ಎಂದು ಅನೇಕರು ಶಂಕೆ ವ್ಯಕ್ತಪಡಿಸಿದ್ದರು. ಈ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಿದ ಪೊಲೀಸರು ಫೋನ್‌ ಕರೆ ದಾಖಲೆ, ಕುಟುಂಬದವರ ನಡುವಿನ ಜಗಳ ಈ ಎಲ್ಲಾ ಅಂಶಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದರು. ಬಳಿಕ ಕನಕಮ್ಮ ಹಾಗೂ ಮಾರುತಿ ಅವರನ್ನು ತೀವ್ರವಾಗಿ ವಿಚಾರಣೆಗೆ ಒಳಪಡಿಸಿದಾಗ ಕುಟುಂಬದವರಿಂದಲೇ ಈ ಕೃತ್ಯ ನಡೆದಿದೆ ಎನ್ನುವ ವಿಷಯ ಬಹಿರಂಗವಾಗಿದೆ.

ನೇತ್ರಾವತಿ ಹಾಗೂ ಅದೇ ಊರಿನ ಮಂಜುನಾಥ ಕುರಿ 2016ರಲ್ಲಿ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಪುತ್ರಿಯರು ಮತ್ತು ಇಬ್ಬರು ಪುತ್ರರು ಇದ್ದಾರೆ.

'ನೇತ್ರಾವತಿಯ ಹೆರಿಗೆ ಖರ್ಚು ಹಾಗೂ ಬಂಗಾರ ಕೊಡಿಸುವ ವಿಷಯಕ್ಕೆ ಸಂಬಂಧಿಸಿದಂತೆ ಘಟನೆ ನಡೆದ ರಾತ್ರಿ ಜಗಳವಾಗಿದ್ದು, ಇದೇ ಕಾರಣಕ್ಕೆ ಮಗಳನ್ನು ತಾಯಿ ಹಾಗೂ ಸಹೋದರ ಸೇರಿಕೊಂಡು ಕೊಲೆ ಮಾಡಿದ್ದಾರೆ. ಇಬ್ಬರೂ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ' ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಮಾಧ್ಯಮಗಳಿಗೆ ತಿಳಿಸಿದರು. ಈ ಕುರಿತು ಮುನಿರಾಬಾದ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಜಿಲ್ಲೆಯಲ್ಲಿ ಆತಂಕಕ್ಕೆ ಕಾರಣವಾಗಿದ್ದ ಈ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಲು ಡಿವೈಎಸ್‌ಪಿ ಶರಣಬಸಪ್ಪ ಸುಬೇದಾರ್‌ ಹಾಗೂ ಗ್ರಾಮೀಣ ಸಿಪಿಐ ಮಹಾಂತೇಶ ಸಜ್ಜನ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು