ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ, ಭಕ್ತರ ಕಾತುರ

ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ, ಭಕ್ತರ ಕಾತುರ

ಮಡಿಕೇರಿ, ಅ.17- ಜೀವನದಿ ಕಾವೇರಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಂದು ರಾತ್ರಿ 7.21 ನಿಮಿಷಕ್ಕೆ ಸಲ್ಲುವ ಮೇಷ ಲಗ್ನದಲ್ಲಿ ಕಾವೇರಿ ತೀರ್ಥರೂಪಿಣಿಯಾಗಿ ಉದ್ಭವವಾಗಲಿದ್ದಾಳೆ.

ಕೊರೊನಾದಿಂದ ಕಳೆದ ಎರಡು ವರ್ಷಗಳಿಂದ ತಲ ಕಾವೇರಿಯಲ್ಲಿ ತೀರ್ಥೋದ್ಭವ ಸಂದರ್ಭದಲ್ಲಿ ಭಕ್ತರಿಗೆ ಅವಕಾಶ ಕಲ್ಪಿಸಿರಲಿಲ್ಲ. ಕಾವೇರಿ ಮಾತೆಗೆ ಸರಳವಾಗಿ ಪೂಜೆ ಸಲ್ಲಿಸಲಾಗಿತ್ತು. ಈ ಬಾರಿ ಭಕ್ತರಿಗೆ ಮುಕ್ತ ಅವಕಾಶ ಕಲ್ಪಿಸಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇದ್ದು, ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ತೀರ್ಥೋದ್ಭವದ ಹಿನ್ನೆಲೆಯಲ್ಲಿ ಬಾಗಮಂಡಲದ ಭಗಂಡೇಶ್ವರ ದೇವಾಲಯ ಹಾಗೂ ತಲಕಾವೇರಿ ಕ್ಷೇತ್ರದಲ್ಲಿ ವಿಶೇಷ ಪೂಜಾ ಕೈಕಂರ್ಯಗಳು ನೆರವೇರಲಿವೆ. ಭಾಗಮಂಡಲದ ತ್ರಿವೇಣಿ ಸಂಗಮದಲ್ಲೂ ಸಹ ಪುಣ್ಯ ಸ್ನಾನ ಸೇರಿದಂತೆ ಪೂಜಾ ಸೇವೆಗಳು ನೆರವೇರಲಿವೆ. ತಲಕಾವೇರಿಯ ಪವಿತ್ರ ಕುಂಡಿಕೆ ಬಳಿಯ ಕಲ್ಯಾಣಿ ಬಳಿ ಭಕ್ತರಿಂದ ನೂಕು ನುಗ್ಗಲು ಉಂಟಾಗುವ ಸಂಭವವಿದ್ದು, ಬ್ಯಾರಿಕೇಡ್‍ಗಳನ್ನು ಹಾಕಿ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ.

ಕಾವೇರಿ ಮಾತೆಯ ಉಗಮದ ಪವಿತ್ರ ಕ್ಷಣವನ್ನು ಕಣ್ತುಂಬಿಕೊಳ್ಳಲು ರಾಜ್ಯ ಸೇರಿದಂತೆ ದೇಶದ ವಿವಿಧ ಮೂಲೆಗಳಿಂದ ಭಕ್ತರು ಆಗಮಿಸುತ್ತಿದ್ದಾರೆ. ಪ್ರಧಾನ ಅರ್ಚಕರಾದ ಗುರುರಾಜ್ ಆಚಾರ್ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ನೆರವೇರಲಿವೆ.

ಇಂದು ಮುಂಜಾನೆಯಿಂದಲೇ ವಿವಿಧ ಪೂಜಾ ಕೈಕಂರ್ಯಗಳು ನೇರವೇರಿದ್ದು, ಕಾವೇರಿ ತೀರ್ಥೋದ್ಭವದ ನಂತರ ಕಲ್ಯಾಣಿಯ ಮೇಲ್ಭಾಗದಲ್ಲಿ ಭಕ್ತರಿಗೆ ಪವಿತ್ರ ತೀರ್ಥವನ್ನು ವಿತರಿಸಲು ನಿರ್ಧರಿಸಲಾಗಿದೆ.