ಕಾರ್ಪೋರೇಟರ್ ಗಳಿಂದ ಒಂದು ಕೋಟಿ ಲಂಚ ಕೇಳಿತ್ತೇ ಚಿಲುಮೆ ಸಂಸ್ಥೆ ?
ಬೆಂಗಳೂರು: ರಾಜಧಾನಿಯಲ್ಲಿ ಅಕ್ರಮವಾಗಿ ಮತದಾರರ ಮಾಹಿತಿಯನ್ನು ಸಂಗ್ರಹಿಸಿದ ಆರೋಪಕ್ಕೆ ಗುರಿಯಾಗಿರುವ ಸ್ವಯಂಸೇವಾ ಸಂಸ್ಥೆ ಚಿಲುಮೆ, ಇದೀಗ ಚುನಾವಣೆಯಲ್ಲಿ ಗೆಲ್ಲಿಸುವ ನೆಪವೊಡ್ಡಿ ಕಾರ್ಪೊರೇಟರ್ ಗಳಿಂದ ತಲಾ ಒಂದು ಕೋಟಿ ರೂ. ಸಂಗ್ರಹಿಸಿದ ಆಪಾದನೆಗೂ ಗುರಿಯಾಗಿದೆ.
ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಈ ಆರೋಪ ಮಾಡಿದ್ದಾರೆ. "" ಜನ ಪ್ರತಿನಿಧಿಗಳ ಬಳಿ ಹೋಗಿ ನಾವು ನಿಮ್ಮನ್ನು ಗೆಲ್ಲಿಸುತ್ತೇವೆ ಎಂದು ಪ್ರತಿ ವಾರ್ಡ್ ನಲ್ಲಿ ಕಾರ್ಪೊರೇಟರ್ ಬಳಿ 1 ಕೋಟಿ ಹಣ ಕೇಳಿದ ಬಗ್ಗೆ ಹಲವರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಅಲ್ಲಿ ಕೆಲಸ ಮಾಡುತ್ತಿದ್ದವರಿಂದಲೇ ಮಾಹಿತಿ ಕಲೆ ಹಾಕಿದ್ದೇನೆ. ಈ ಸಂಸ್ಥೆಯ ಕಾರ್ಯವ್ಯಾಪ್ತಿ ಬಗ್ಗೆ ನನ್ನ ಬಳಿ ಮಾಹಿತಿ ಇದೆ. ಈ ವಿಚಾರದಲ್ಲಿ ನಾವು ಕೂಡ ತನಿಖೆ ಮಾಡಿದ್ದೇವೆʼʼ ಎಂದು ಅವರು ತಿಳಿಸಿದ್ದಾರೆ.
ಮತದಾರರ ಜಾಗೃತಿ ಹೆಸರಿನಲ್ಲಿ ಚಿಲುಮೆ ಫೌಂಡೇಷನ್ ಎಂಬ ಸಂಸ್ಥೆಯನ್ನು ಬಳಸಿಕೊಂಡು ರಾಜ್ಯ ಸರ್ಕಾರವೇ ಮತದಾರರ ಮಾಹಿತಿ ಕಳವು ಮಾಡಿರುವ ಕುರಿತು ಉನ್ನತಮಟ್ಟದ ತನಿಖೆಗೆ ಆದೇಶಿಸದಿದ್ದರೆ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು.
ಪ್ರಕರಣದ ಕುರಿತು ತನಿಖೆ ನಡೆಸುವಂತೆ ವಿಭಾಗೀಯ ಅಧಿಕಾರಿಗಳಿಗೆ ರಾಜ್ಯದ ಮುಖ್ಯ ಚುನಾವಣಾಧಿಕಾರಿಯವರ ಕಚೇರಿಯಿಂದ ನಿರ್ದೇಶನ ನೀಡಲಾಗಿದೆ ಎಂಬ ಮಾಹಿತಿ ಲಭಿಸಿದೆ. ಆದರೆ, ಇದು ವಿಭಾಗೀಯ ಅಧಿಕಾರಿಗಳ ಹಂತದಲ್ಲಿ ತನಿಖೆ ನಡೆಸುವಂತಹ ಪ್ರಕರಣವಲ್ಲ. ಚುನಾವಣಾ ಆಯೋಗದ ಅಧಿಕಾರಿಗಳನ್ನು ಶನಿವಾರ ಭೇಟಿಮಾಡಿ ಉನ್ನತಮಟ್ಟದ ತನಿಖೆಗೆ ಆಗ್ರಹಿಸಲಾಗುವುದು'ಎಂದರು.
ಮತದಾರರ ಜಾಗೃತಿ ಹೆಸರಿನಲ್ಲಿ ಮಾಹಿತಿ ಕಳವು ಮಾಡಿರುವುದರ ಜತೆಗೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸಾವಿರಾರು ಮಂದಿಯ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿರುವ ದೂರುಗಳು ಕೇಳಿಬರುತ್ತಿವೆ. ಈ ತಂಡದಲ್ಲಿದ್ದ ಕೆಲವರು ರಾಜಕಾರಣಿಗಳನ್ನು ಸಂಪರ್ಕಿಸಿ ಚುನಾವಣೆಯಲ್ಲಿ ಗೆಲ್ಲಿಸುವ ಆಮಿಷವೊಡ್ಡಿ, ಕೋಟ್ಯಂತರ ರೂಪಾಯಿಗೆ ಬೇಡಿಕೆ ಇಟ್ಟಿರುವ ಮಾಹಿತಿ ಇದೆ. ಈ ಎಲ್ಲ ಆರೋಪಗಳ ಬಗ್ಗೆಯೂ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಚಿಲುಮೆ ಫೌಂಡೇಷನ್ ಮೂಲಕ ನಡೆದಿರುವ ಮತದಾರರ ಮಾಹಿತಿ ಕಳವಿನ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಲಘುವಾಗಿ ಮಾತನಾಡುತ್ತಿದ್ದಾರೆ. ಅವರು ಬೆಂಗಳೂರು ನಗರದ ಉಸ್ತುವಾರಿ ಸಚಿವರು. ನೇರವಾಗಿ ಅವರ ಅಧೀನದಲ್ಲೇ ಈ ಅಕ್ರಮ ನಡೆದಿದೆ. ಪಾಲಿಕೆ ಆಯುಕ್ತರು ಅಕ್ರಮ ನಡೆದಿರುವುದನ್ನು ಒಪ್ಪಿಕೊಂಡು ಚಿಲುಮೆ ಫೌಂಡೇಷನ್ ಗೆ ನೀಡಿದ್ದ ಅನುಮತಿಯನ್ನು ರದ್ದು ಮಾಡಿದ್ದಾರೆ. ಆದರೆ, ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮ ಎಸಗಿದವರ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಸಂಸ್ಥೆಯ ಅಧ್ಯಕ್ಷ ರವಿಕುಮಾರ್ ಅವರಿಗೆ ಮುಖ್ಯಮಂತ್ರಿ ಹಾಗೂ ಸಚಿವರು ರಕ್ಷಣೆ ನೀಡುತ್ತಿದ್ದಾರೆ. ಬಿಬಿಎಂಪಿ ಹೆಸರಿನಲ್ಲಿ ನಕಲಿ ಗುರುತಿನ ಚೀಟಿ ಸೃಷ್ಟಿಸಿದವರು, ಅದನ್ನು ಬಳಸಿಕೊಂಡು ಅಕ್ರಮ ಎಸಗಿದವರು ಸೇರಿದಂತೆ ಎಲ್ಲರ ವಿರುದ್ಧವೂ ಕಠಿಣ ಕ್ರಮ ಆಗಬೇಕು' ಎಂದರು.
'ಕಾಂಗ್ರೆಸ್ ಆಡಳಿತದ ಕಾಲದಲ್ಲೂ ಇಂತಹ ಘಟನೆ ನಡೆದಿತ್ತು ಎಂದು ಮುಖ್ಯಮಂತ್ರಿ ಹೇಳುತ್ತಿದ್ದಾರೆ. ಅಂತಹ ಯಾವುದೇ ಪ್ರಕರಣ ನಡೆದಿದ್ದರೆ, ಯಾರೇ ಭಾಗಿಯಾಗಿದ್ದರೂ ಕ್ರಮ ಜರುಗಿಸಲಿ ಎಂದು ಆಗ್ರಹಿಸಿದರು.