ಕಾಂಗ್ರೆಸ್‌ನಿಂದ ಕಣಕ್ಕಿಳಿಯಲಿದ್ದಾರಾ ಕಮಲ್ ಹಾಸನ್? ಅವರ ಮಾತು ಇಲ್ಲಿದೆ

ಕಾಂಗ್ರೆಸ್‌ನಿಂದ ಕಣಕ್ಕಿಳಿಯಲಿದ್ದಾರಾ ಕಮಲ್ ಹಾಸನ್? ಅವರ ಮಾತು ಇಲ್ಲಿದೆ

ಚೆನ್ನೈ, ಜನವರಿ. 26: ರಾಜಕೀಯವೇ ಹಾಗೆ ಇಂದು ಶತ್ರುಗಳಂತೆ ಕಿತ್ತಾಡುವವರು ಮಾರನೇ ದಿನವೇ ಸ್ನೇಹಿತರಂತೆ ತಬ್ಬಿ ನಡೆಯುತ್ತಾರೆ. ಹಾಗೆಯೇ ರಾಜಕೀಯ ನಾಯಕರು ಕೂಡ. ಯಾವ ಪಕ್ಷವನ್ನು ಬೈಯುತ್ತಾರೋ ಅದೇ ಪಕ್ಷಕ್ಕೆ ಸೇರಿಕೊಳ್ಳುತ್ತಾರೆ. ಈಗ ನಟ ಕಮಲ್ ಹಾಸನ್ ಕೂಡ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿಯುವ ಸೂಚನೆ ನೀಡಿದ್ದಾರೆ.

ನಟ, ರಾಜಕಾರಣಿ ಕಮಲ್ ಹಾಸನ್ ತಮಿಳುನಾಡಿನ ಈರೋಡ್‌ ಈಸ್ಟ್‌ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಡಿಎಂಕೆ ಮೈತ್ರಿಕೂಟದ ಅಭ್ಯರ್ಥಿ ಇವಿಕೆಎಸ್‌ ಇಳಂಗೋವನ್‌ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ವೇಳೆ ಕಾಂಗ್ರೆಸ್‌ನಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಬಗ್ಗೆಯೂ ಕುತೂಹಲಕಾರಿ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ.

ಈರೋಡ್ (ಪೂರ್ವ) ವಿಧಾನಸಭಾ ಉಪಚುನಾವಣೆಯಲ್ಲಿ ತಮ್ಮ ಪಕ್ಷ ಮಕ್ಕಳ್ ನೀಧಿ ಮೈಯಂ (ಎಂಎನ್‌ಎಂ) ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡಲಿದೆ ಎಂದು ಕಮಲ್ ಹಾಸನ್ ಬುಧವಾರ ಹೇಳಿದ್ದಾರೆ.


ನಾನೇಕೆ ಕಾಂಗ್ರೆಸ್ ಅಭ್ಯರ್ಥಿಯಾಗಬಾರದು ಎಂದ ಕಮಲ್ ಹಾಸನ್

ಸುದ್ದಿಗಾರರೊಂದಿಗೆ ಮಾತನಾಡಿರುವ ನಟ ಕಮಲ್ ಹಾಸನ್, ಭವಿಷ್ಯದಲ್ಲಿ ಕಾಂಗ್ರೆಸ್‌ನಿಂದ ಎಂಪಿ ಸ್ಥಾನವನ್ನು ಪಡೆಯುವ ನಿರೀಕ್ಷೆಯಲ್ಲಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ.

"ನಾನೇಕೆ ಕಾಂಗ್ರೆಸ್ ಅಭ್ಯರ್ಥಿ ಆಗಬಾರದು? ರಾಷ್ಟ್ರೀಯ ಹಿತಾಸಕ್ತಿಗಾಗಿ, ನಾವು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ" ಎಂದು ಎಂಎನ್‌ಎಂ ಮುಖ್ಯಸ್ಥ ಕಮಲ್ ಹಾಸನ್ ಮಾಹಿತಿ ನೀಡಿದ್ದಾರೆ.

ರಾಹುಲ್ ಗಾಂಧಿ ಜೊತೆಗೆ ಭಾರತ್ ಜೋಡೋದಲ್ಲಿ ಕಮಲ್ ಸಾಥ್

ಕಳೆದ ತಿಂಗಳು ನವದೆಹಲಿಯಲ್ಲಿ ನಡೆದ ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯಲ್ಲಿ ಕಮಲ್ ಹಾಸನ್ ಅವರು ರಾಹುಲ್ ಗಾಂಧಿ ಅವರೊಂದಿಗೆ ಪಾದಯಾತ್ರೆ ಮಾಡಿದ್ದರು.

ದೆಹಲಿಯ ಕೆಂಪುಕೋಟೆ ಬಳಿ ಭಾರತ್ ಜೋಡೋ ಯಾತ್ರೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿ ಹಲವು ನಾಯಕರ ಜೊತೆಗೆ ಕಮಲ್ ಹಾಸನ್ ಸಮಯ ಕಳೆದಿದ್ದರು. ಪಾದಯಾತ್ರೆಯಲ್ಲಿ ಭಾಗವಹಿಸಿದ ಬಳಿಕ ಮಾತನಾಡಿದ್ದ ಅವರು, 'ನಾನೇಕೆ ಇಲ್ಲಿದ್ದೇನೆ ಎಂದು ಅನೇಕರು ನನ್ನನ್ನು ಕೇಳುತ್ತಾರೆ. ನಾನು ಒಬ್ಬ ಭಾರತೀಯನಾಗಿ ಇಲ್ಲಿದ್ದೇನೆ. ನನ್ನ ತಂದೆ ಕಾಂಗ್ರೆಸ್ಸಿಗರಾಗಿದ್ದರು. ನಾನು ಬೇರೆ ಸಿದ್ಧಾಂತಗಳನ್ನು ಹೊಂದಿದ್ದೇನೆ. ನನ್ನದೇ ಆದ ರಾಜಕೀಯ ಪಕ್ಷವನ್ನು ಪ್ರಾರಂಭಿಸಿದ್ದೇನೆ. ಆದರೆ ದೇಶದ ವಿಷಯಕ್ಕೆ ಬಂದಾಗ, ಎಲ್ಲಾ ರಾಜಕೀಯ ಪಕ್ಷದ ನಡುವಿನ ಗೆರೆಗಳು ಅಳಿಸಿಹೋಗಬೇಕು. ಅದಕ್ಕಾಗಿ ಇಲ್ಲಿಗೆ ಬಂದಿದ್ದೇನೆ' ಎಂದಿದ್ದರು.

ಕಮಲ್ ಹಾಸನ್ ಬೆಂಬಲ ಕೋರಿದ್ದ ಕಾಂಗ್ರೆಸ್ ಅಭ್ಯರ್ಥಿ ಇಳಂಗೋವನ್

ಕಾಂಗ್ರೆಸ್ ಅಭ್ಯರ್ಥಿ ಇಳಂಗೋವನ್ ಅವರು ಜನವರಿ 23 ರಂದು ಅಲ್ವಾರ್‌ಪೇಟ್ ಕಚೇರಿಯಲ್ಲಿ ಕಮಲ್ ಹಾಸನ್ ಅವರನ್ನು ಭೇಟಿಯಾಗಿ ಉಪಚುನಾವಣೆಗೆ ಬೆಂಬಲ ಕೋರಿದ ನಂತರ ಈ ಬೆಳವಣಿಗೆಯಾಗಿದೆ. ಎಂಎನ್‌ಎಂ ಕಾರ್ಯಕಾರಿ ಸದಸ್ಯರೊಂದಿಗೆ ಚರ್ಚೆ ನಡೆಸಿದ ನಂತರ ಕಮಲ್ ಹಾಸನ್ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಕಮಲ್ ಹಾಸನ್, "ಈರೋಡ್ ಪೂರ್ವ ಉಪಚುನಾವಣೆಯಲ್ಲಿ ಕಾಂಗ್ರೆಸ್-ಡಿಎಂಕೆ ಮೈತ್ರಿಕೂಟದ ಅಭ್ಯರ್ಥಿಯನ್ನು ಬೆಂಬಲಿಸಲು ಪಕ್ಷದ ಕಾರ್ಯಕಾರಿ ಸದಸ್ಯರು ಸರ್ವಾನುಮತದಿಂದ ನಿರ್ಧರಿಸಿದ್ದಾರೆ" ಎಂದು ತಿಳಿಸಿದ್ದಾರೆ.

ರಾಷ್ಟ್ರೀಯ ಪ್ರಾಮುಖ್ಯತೆ ವಿಷಯದಲ್ಲಿ ಪಕ್ಷದ ಸಿದ್ಧಾಂತವನ್ನು ಬಿಡಬೇಕು

2024 ರ ಸಾರ್ವತ್ರಿಕ ಚುನಾವಣೆಯಲ್ಲಿಯೂ ಕಾಂಗ್ರೆಸ್‌ಗೆ ಬೆಂಬಲ ಮುಂದುವರಿಯುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಕಮಲ್ ಹಾಸನ್, "ಇದು ಒಂದೇ ನಿರ್ಧಾರ. ಇದು ಈರೋಡ್ ಪೂರ್ವ ಉಪಚುನಾವಣೆಗೆ ಮಾತ್ರ. 2024 ರ ಸಾರ್ವತ್ರಿಕ ಚುನಾವಣೆಗೆ ಇನ್ನೂ ಒಂದು ವರ್ಷ ಇರುವ ಕಾರಣ, ಈಗಲೇ ಹೇಳುವುದು ಅವಸರ" ಎಂದಿದ್ದಾರೆ.

"ನಾನು ಇದನ್ನು ರಾಷ್ಟ್ರೀಯ ಪ್ರಾಮುಖ್ಯತೆಯ ಕ್ಷಣ ಎಂದು ಕರೆದಿದ್ದೇನೆ. ರಾಷ್ಟ್ರೀಯ ಪ್ರಾಮುಖ್ಯತೆಯ ವಿಷಯಕ್ಕೆ ಬಂದಾಗ ನೀವು ಪಕ್ಷದ ಸಿದ್ಧಾಂತವನ್ನು ಸಹ ಅಳಿಸಿಹಾಕಬೇಕು. ಜನರು ಅದರಲ್ಲಿ ಪ್ರಮುಖರಾಗುತ್ತಾರೆ. ಆದರೆ, ಈ ನಿರ್ಧಾರವು ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ರಾಜಿ ಮಾಡಿಕೊಂಡಿದೆ ಎಂದರ್ಥವಲ್ಲ" ಎಂದು ಒತ್ತಿ ಹೇಳಿದ್ದಾರೆ.

"ಇದು ದೊಡ್ಡ ಕಾರಣದ ವಿರುದ್ಧದ ಹೋರಾಟಕ್ಕಾಗಿ ನಾನು ಸಣ್ಣ ಭಿನ್ನಾಭಿಪ್ರಾಯಗಳನ್ನು ತ್ಯಾಗ ಮಾಡಲು ಸಿದ್ಧನಿದ್ದೇನೆ. ನಾವು ಮತ್ತೆ ಯುದ್ಧಕ್ಕೆ ಹಿಂತಿರುಗುತ್ತೇವೆ. ಇದರರ್ಥ ನಾನು ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವುದಿಲ್ಲ ಎಂದಲ್ಲ. ಏನಾದರೂ ಸಂಭವಿಸಿದರೆ ನಾನು ಮೌನವಾಗಿರುತ್ತೇನೆ ಎಂದಲ್ಲ" ಎಂದು ತಿಳಿಸಿದ್ದಾರೆ.

ಈರೋಡ್ (ಪೂರ್ವ) ವಿಧಾನಸಭಾ ಕ್ಷೇತ್ರಕ್ಕೆ ಫೆಬ್ರವರಿ 27 ರಂದು ನಡೆಯಲಿರುವ ಉಪಚುನಾವಣೆಗೆ ತಮಿಳುನಾಡು ಕಾಂಗ್ರೆಸ್ ಸಮಿತಿ (ಟಿಎನ್‌ಸಿಸಿ) ಮಾಜಿ ಮುಖ್ಯಸ್ಥ ಇವಿಕೆಎಸ್ ಇಳಂಗೋವನ್ ಅವರನ್ನು ಪಕ್ಷದ ಅಭ್ಯರ್ಥಿ ಎಂದು ಘೋಷಿಸಿದೆ. ಇಳಂಗೋವನ್ ಅವರು 2004 ರಲ್ಲಿ ಲೋಕಸಭೆಗೆ ಆಯ್ಕೆಯಾಗಿದ್ದರು. ಜವಳಿ ಖಾತೆಯ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಅವರು 2014 ರಿಂದ 2017 ರವರೆಗೆ ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. 2019 ರ ಲೋಕಸಭೆ ಚುನಾವಣೆಯಲ್ಲಿ ತೇಣಿ ಕ್ಷೇತ್ರದಿಂದ ಸ್ಪರ್ಧಿಸಿ ಎಐಎಡಿಎಂಕೆಯ ಪಿ ರವೀಂದ್ರನಾಥ್ ಕುಮಾರ್ ವಿರುದ್ಧ ಸೋಲು ಕಂಡಿದ್ದರು.

ಫೆಬ್ರವರಿ 27 ರಂದು ಉಪಚುನಾವಣೆ ನಡೆಯಲಿದ್ದು, ನಾಮಪತ್ರಗಳ ಸಲ್ಲಿಕೆ ಜನವರಿ 31 ರಂದು ಪ್ರಾರಂಭವಾಗಿ ಫೆಬ್ರವರಿ 7 ರಂದು ಕೊನೆಗೊಳ್ಳುತ್ತದೆ. ಮಾರ್ಚ್ 2 ರಂದು ಮತಗಳ ಎಣಿಕೆ ನಡೆಯಲಿದೆ.