ಕಾಂಗ್ರೆಸ್, ಭಾರತ್ ಜೋಡೋ ಯಾತ್ರಾ ಟ್ವಿಟ್ಟರ್ ಖಾತೆಗೆ ನಿರ್ಬಂಧ

ಬೆಂಗಳೂರು, ; ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯಲ್ಲಿ ಕೆಜಿಎಫ್-2 ಚಿತ್ರದ ಹಾಡನ್ನು ಬಳಸಿದ ಹಿನ್ನೆಲೆ ಕಾಂಗ್ರೆಸ್ನ ಟ್ವಿಟ್ಟರ್ ಹ್ಯಾಂಡಲ್ ಅನ್ನು ನಿರ್ಬಂಧಿಸಲು ಬೆಂಗಳೂರಿನ ನ್ಯಾಯಾಲಯವು ಆದೇಶಿಸಿದೆ.
ಕೆಜಿಎಫ್-2 ಚಿತ್ರದ ಹಾಡನ್ನು ಪ್ಲೇ ಮಾಡಿದ್ದಕ್ಕಾಗಿ ಸಂಗೀತ ಸಂಸ್ಥೆಯೊಂದು ಕಾಂಗ್ರೆಸ್ ಪಕ್ಷದ ವಿರುದ್ಧ ಹಕ್ಕುಸ್ವಾಮ್ಯದ ಪ್ರಕರಣವನ್ನು ದಾಖಲಿಸಿದ ನಂತರ ಬೆಂಗಳೂರಿನ ವಾಣಿಜ್ಯ ಕೋರ್ಟ್ ಈ ಆದೇಶವನ್ನು ಹೊರಡಿಸಿದೆ.
ಕರ್ನಾಟಕದಾದ್ಯಂತ ಸಂಚರಿಸಿದ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಹಕ್ಕುಸ್ವಾಮ್ಯ ಕಾನೂನುಗಳನ್ನು ಉಲ್ಲಂಘಿಸಿ ಕನ್ನಡ ಚಲನಚಿತ್ರ ಕೆಜಿಎಫ್ -2ರ ಸಂಗೀತವನ್ನು ಬಳಸಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಸಂಬಂಧ ರಾಹುಲ್ ಗಾಂಧಿ ಸೇರಿದಂತೆ ಮೂವರ ವಿರುದ್ಧ ಎಂಆರ್ಟಿ ಸಂಗೀತವನ್ನು ನಿರ್ವಹಿಸುವ ಎಂ ನವೀನ್ ಕುಮಾರ್ ದೂರು ದಾಖಲಿಸಿದ್ದರು.
ಭಾರತ್ ಜೋಡೋ ಯಾತ್ರಾ ಅಭಿಯಾನದ ಟ್ವಿಟ್ಟರ್ ನಿರ್ಬಂಧ:
ಕೆಜಿಎಫ್-2 ಚಿತ್ರದ ಹಾಡನ್ನು ಬಳಕೆ ಮಾಡಿರುವುದರ ಹಿನ್ನೆಲೆ ಭಾರತ್ ಜೋಡೋ ಯಾತ್ರಾ ಅಭಿಯಾನದ ಟ್ವಿಟರ್ ಹ್ಯಾಂಡಲ್ ಅನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲು ಬೆಂಗಳೂರಿನ ವಾಣಿಜ್ಯ ಕೋರ್ಟ್ ಆದೇಶಿಸಿದೆ. ಭಾರತ್ ಜೋಡೋ ಯಾತ್ರಾ ಪ್ರಚಾರದ ವಿಡಿಯೊಗಳಲ್ಲಿ ಕೆಜಿಎಫ್-2 ಹಾಡುಗಳನ್ನು ಬಳಸಿರುವ ಬಗ್ಗೆ ಮ್ಯೂಸಿಕ್ ಕಂಪನಿಯು ಆರೋಪಿಸಿದೆ.
ಭಾರತ್ ಜೋಡೋ ಯಾತ್ರೆಯ ವಿಡಿಯೋಗಳಲ್ಲಿ ರಾಹುಲ್ ಗಾಂಧಿ ಅನ್ನು ಕೆಜಿಎಫ್ 2 ಚಿತ್ರದ ಸಂಗೀತವನ್ನು ಬಳಸಿ ತೋರಿಸಲಾಗಿತ್ತು. ಇದಕ್ಕಾಗಿ ರಾಹುಲ್ ಗಾಂಧಿ, ಜೈರಾಮ್ ರಮೇಶ್ ಮತ್ತು ಸುಪ್ರಿಯಾ ಶ್ರಿನೇಟ್ ವಿರುದ್ಧ ಕೃತಿಸ್ವಾಮ್ಯ ಕಾಯ್ದೆ, ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಕಳೆದ ಶುಕ್ರವಾರ, ನವೆಂಬರ್ 4 ರಂದು ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಥಮ ಮಾಹಿತಿ ವರದಿ (ಎಫ್ಐಆರ್) ದಾಖಲಿಸಲಾಗಿದೆ. ಎಂಆರ್ಟಿ ಮ್ಯೂಸಿಕ್ನ ಎಂ. ನವೀನ್ ಕುಮಾರ್ ಅವರು ನೀಡಿದ ದೂರಿನ ಮೇರೆಗೆ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯ ನಾಯಕರ ಮೇಲೆ ದೂರು ದಾಖಲಾಗಿದೆ.