ಕಪ್ಪು ಸೀರೆಯಲ್ಲಿ ಸದನಕ್ಕೆ ಆಗಮಿಸಿ ಅಚ್ಚರಿ ಮೂಡಿಸಿದ ಬಿಜೆಪಿ ಶಾಸಕಿ

ಕಪ್ಪು ಸೀರೆಯಲ್ಲಿ ಸದನಕ್ಕೆ ಆಗಮಿಸಿ ಅಚ್ಚರಿ ಮೂಡಿಸಿದ ಬಿಜೆಪಿ ಶಾಸಕಿ

ಸೂರತ್ ನ್ಯಾಯಾಲಯದಿಂದ ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ. ಅಲ್ಲದೆ 30 ದಿನಗಳ ಒಳಗಾಗಿ ಸರ್ಕಾರಿ ಬಂಗಲೆಯನ್ನು ತೆರವುಗೊಳಿಸುವಂತೆ ರಾಹುಲ್ ಗಾಂಧಿಯವರಿಗೆ ನೋಟಿಸ್ ನೀಡಲಾಗಿದೆ.

ಅದಾನಿ ಸಮೂಹದ ವಿರುದ್ಧ ರಾಹುಲ್ ಗಾಂಧಿ ಪ್ರಶ್ನೆಗಳನ್ನು ಕೇಳುತ್ತಿರುವ ಕಾರಣ ಅದನ್ನು ಎದುರಿಸಲಾಗದೆ ಕೇಂದ್ರ ಸರ್ಕಾರ, ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸುವ ನಿರ್ಧಾರ ಕೈಗೊಂಡಿದೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕರುಗಳು ಸೋಮವಾರದಂದು ಕಪ್ಪು ಬಟ್ಟೆ ಧರಿಸಿ ದೇಶದಾದ್ಯಂತ ಪ್ರತಿಭಟನೆ ನಡೆಸಿದ್ದಾರೆ.

ತಮಿಳುನಾಡಿನಲ್ಲಿಯೂ ಸಹ ಕಾಂಗ್ರೆಸ್ ಶಾಸಕರು ಕಪ್ಪು ದಿರಿಸು ಧರಿಸಿ ಸೋಮವಾರದಂದು ಸದನಕ್ಕೆ ಹಾಜರಾಗಿದ್ದು, ಇದೇ ಸಂದರ್ಭದಲ್ಲಿ ಬಿಜೆಪಿ ಶಾಸಕಿ ವಾಸಂತಿ ಶ್ರೀನಿವಾಸ್ ಕೂಡ ಕಪ್ಪು ಸೀರೆ ಧರಿಸಿ ಸದನಕ್ಕೆ ಬಂದು ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.

ಈ ಸಂದರ್ಭದಲ್ಲಿ ಸ್ಪೀಕರ್, ನೀವು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಿದ್ದೀರಾ ಎಂದು ವಾಸಂತಿ ಶ್ರೀನಿವಾಸ್ ಅವರನ್ನು ಪ್ರಶ್ನಿಸಿದ್ದು, ಆಗ ಅವರು ಕಾಂಗ್ರೆಸ್ ಸದಸ್ಯರು ಕಪ್ಪು ದಿರಿಸಿನಲ್ಲಿ ಸದನಕ್ಕೆ ಬರುತ್ತಾರೆ ಎಂಬ ವಿಚಾರ ನನಗೆ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ