ಐದನೇ 'ಖೇಲೋ ಇಂಡಿಯಾ ಯೂತ್ ಗೇಮ್ಸ್' ಮಧ್ಯಪ್ರದೇಶದಲ್ಲಿ ಆಯೋಜನೆ : ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಮಾಹಿತಿ

ನವದೆಹಲಿ: 2023 ರ ಜನವರಿ 31 ರಿಂದ ಫೆಬ್ರವರಿ 11 ರವರೆಗೆ 5 ನೇ ಆವೃತ್ತಿಯ ಖೇಲೋ ಇಂಡಿಯಾ ಯೂತ್ ಗೇಮ್ಸ್ ಮಧ್ಯಪ್ರದೇಶದಲ್ಲಿ ನಡೆಯಲಿದೆ ಎಂದು ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಠಾಕೂರ್, ದೇಶೀಯ ಆಟಗಳು ಮತ್ತೊಮ್ಮೆ ಮುಂಬರುವ KIYG ಯ ಭಾಗವಾಗಲಿದೆ. ಒಲಂಪಿಕ್ ಕ್ರೀಡೆಗಳು ಮತ್ತು ಸ್ಥಳೀಯ ಕ್ರೀಡೆಗಳನ್ನು ಅದೇ ರೀತಿಯಲ್ಲಿ ಬೆಂಬಲಿಸುವುದು ಪ್ರಧಾನಿಯವರ ದೃಷ್ಟಿಯಾಗಿತ್ತು. ಮಲ್ಲಕಂಬ ಕ್ರೀಡೆಯನ್ನು ತಮ್ಮ ರಾಜ್ಯ ಕ್ರೀಡೆಯನ್ನಾಗಿ ಮಾಡಿದ ಮಧ್ಯಪ್ರದೇಶಕ್ಕೆ ನಾನು ಧನ್ಯವಾದ ಹೇಳುತ್ತೇನೆ ಎಂದೇಳಿದ್ದಾರೆ.
ಕ್ರೀಡೆ ರಾಜ್ಯದ ವಿಷಯವಾಗಿದೆ ಎಂದು ತಿಳಿಸಿದರು. 'ನಮ್ಮ ಕ್ರೀಡಾ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಉತ್ತರಪ್ರದೇಶದಂತಹ ರಾಜ್ಯಗಳು ಮುಂದೆ ಬರುತ್ತಿರುವುದು ನನಗೆ ಸಂತೋಷ ತಂದಿದೆ. ಇತರ ರಾಜ್ಯಗಳು ಇದರಿಂದ ಕಲಿಯಬೇಕು. ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟದವರೆಗೆ ಕ್ರೀಡೆಗಳನ್ನು ಅಭಿವೃದ್ಧಿಪಡಿಸಲು ನಾವು ಒಟ್ಟಾರೆಯಾಗಿ ಕೊಡುಗೆ ನೀಡಬೇಕು ಎಂದು ಹೇಳಿದ್ದಾರೆ.
ಖೇಲ್ ಮಹಾಕುಂಭ್ ಮತ್ತು ಮುಖ್ಯಮಂತ್ರಿಗಳ ಕಪ್ (ಮಧ್ಯಪ್ರದೇಶ) ನಂತಹ ಕ್ರೀಡಾಕೂಟಗಳು ತಳಮಟ್ಟದಲ್ಲಿ ಕ್ರೀಡೆಗಳನ್ನು ಉತ್ತೇಜಿಸುತ್ತವೆ. ಖೇಲೋ ಇಂಡಿಯಾ ಯೂತ್ ಗೇಮ್ಸ್ ದೇಶದಲ್ಲಿ ಕ್ರೀಡೆ ಮತ್ತು ಕ್ರೀಡಾಪಟುಗಳನ್ನು ಉತ್ತೇಜಿಸಿದೆ. ಈ ಕಾರಣಕ್ಕಾಗಿಯೇ ಹರಿಯಾಣದಲ್ಲಿ ನಡೆದ ಕಳೆದ ಖೇಲೋ ಇಂಡಿಯಾ ಯೂತ್ ಗೇಮ್ಸ್‌ನಲ್ಲಿ 12 ರಾಷ್ಟ್ರೀಯ ದಾಖಲೆಗಳನ್ನು ಮುರಿಯಲಾಯಿತು.
ಬಳಿಕ ಮಧ್ಯಪ್ರದೇಶದ ಮುಖ್ಯಮಂತ್ರಿ ಚೌಹಾಣ್ ಮಾತನಾಡಿ, ನಾವು ಅತ್ಯಂತ ವಿಶೇಷವಾದ ಖೇಲೋ ಇಂಡಿಯಾ ಗೇಮ್ಸ್ ಮಾಡಲು ಭರವಸೆ ನೀಡುತ್ತೇವೆ. ಅತಿಥಿ ದೇವೋ ಭವ ಎಂಬ ತತ್ವವನ್ನು ಇಟ್ಟುಕೊಂಡು ನಾವು ಇದನ್ನು ಆಯೋಜಿಸುತ್ತೇವೆ ಎಂದರು.
ಮಧ್ಯಪ್ರದೇಶವು ಶೂಟಿಂಗ್ ಮತ್ತು ವಾಟರ್ ಸ್ಪೋರ್ಟ್ಸ್ ಅಕಾಡೆಮಿಗಳಂತಹ ವಿಶ್ವ ದರ್ಜೆಯ ಕ್ರೀಡಾ ಕ್ರೀಡಾಂಗಣಗಳನ್ನು ಹೊಂದಿದೆ. ಇತರ ಅನೇಕ ಸೌಲಭ್ಯಗಳು ಸಹ ಬರಲಿವೆ. ಮೂಲಸೌಕರ್ಯದಲ್ಲಿ ಬೆಳೆಯುತ್ತಿರುವ ಅಭಿವೃದ್ಧಿಯೊಂದಿಗೆ ಮತ್ತು ಖೇಲೋ ಇಂಡಿಯಾ ಯೂತ್ ಗೇಮ್ಸ್ ಅನ್ನು ಆಯೋಜಿಸುವ ಸವಲತ್ತುಗಳೊಂದಿಗೆ, ಮಧ್ಯಪ್ರದೇಶದಲ್ಲಿ ಕ್ರೀಡಾ ಕ್ರಾಂತಿ ನಡೆಯಲಿದೆ ಎದರು.
ಖೇಲೋ ಇಂಡಿಯಾ ಯೂತ್ ಗೇಮ್ಸ್‌ನ ಮುಂಬರುವ ಆವೃತ್ತಿಯು ಒಟ್ಟು 27 ವಿಭಾಗಗಳನ್ನು ಒಳಗೊಂಡಿರುತ್ತದೆ. ಕ್ರೀಡಾಕೂಟಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಜಲ ಕ್ರೀಡೆಗಳನ್ನು ಸೇರಿಸಲಾಗಿದೆ. ಕ್ಯಾನೋ ಸ್ಲಾಲೋಮ್, ಕಯಾಕಿಂಗ್, ಕ್ಯಾನೋಯಿಂಗ್ ಮತ್ತು ರೋಯಿಂಗ್‌ನಂತಹ ಹೊಸ ವಿಭಾಗಗಳು ಸಾಮಾನ್ಯ ಕ್ರೀಡೆಗಳು ಮತ್ತು ಸ್ಥಳೀಯ ಆಟಗಳ ಜೊತೆಗೆ ಒಳಗೊಂಡಿರುತ್ತವೆ. ಭೋಪಾಲ್, ಇಂದೋರ್, ಉಜ್ಜಯಿನಿ, ಗ್ವಾಲಿಯರ್, ಜಬಲ್‌ಪುರ್, ಮಂಡ್ಲಾ, ಖಾರ್ಗೋನ್ (ಮಹೇಶ್ವರ್) ಮತ್ತು ಬಾಲಾಘಾಟ್ - ಮಧ್ಯಪ್ರದೇಶದ ಎಂಟು ನಗರಗಳಲ್ಲಿ ಕ್ರೀಡಾಕೂಟಗಳು ನಡೆಯಲಿವೆ ಎಂದು ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ತಿಳಿಸಿದೆ.