ಈ ಬಾರಿಯ ಐಪಿಎಲ್ ನಿಯಮದಲ್ಲಿ ಪ್ರಮುಖ ಬದಲಾವಣೆ ಮಾಡಿದ ಬಿಸಿಸಿಐ
2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 16ನೇ ಋತುವಿಗೆ ದಿನಗಣನೆ ಆರಂಭವಾಗಿದ್ದು, ಸುಮಾರು ಎರಡು ತಿಂಗಳುಗಳ ಕಾಲ ನಡೆಯುವ ಐಪಿಎಲ್ ಹಬ್ಬಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಇದೇ ಮಾರ್ಚ್ 31ರಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಪರಸ್ಪರ ಮುಖಾಮುಖಿಯಾಗುವುದರೊಂದಿಗೆ ಚಾಲನೆ ಸಿಗಲಿದೆ.
2023ರ ಐಪಿಎಲ್ಗೂ ಮುನ್ನ ಬಿಸಿಸಿಐ ಕೆಲವು ನಿಯಮಗಳನ್ನು ಪ್ರಕಟಿಸಿದ್ದು, ಈ ವರ್ಷ ಪಂದ್ಯಾವಳಿಯು ಸ್ವಲ್ಪ ವಿಭಿನ್ನವಾಗಿರಲಿದೆ. ಐಪಿಎಲ್ ತಂಡಗಳ ಪ್ರತಿ ನಾಯಕರು ಟಾಸ್ ನಂತರ ತಮ್ಮ ತಂಡವನ್ನು ತಿಳಿಸಬಹುದಾಗಿದೆ.
ಐಪಿಎಲ್ ತಂಡಗಳ ನಾಯಕರು ಟಾಸ್ಗೂ ಮುನ್ನ ತಮ್ಮ ಆಡುವ ಹನ್ನೊಂದರ ಬಳಗವನ್ನು ತಿಳಿಸುವ ಬದಲು ಟಾಸ್ ನಂತರ ತಮ್ಮ ಆಡುವ ತಂಡದ ಸಂಯೋಜನೆಯನ್ನು ತಿಳಿಸಬಹುದು ಎಂದು ಬಿಸಿಸಿಐ ಹೊರಡಿಸಿದ ಐಪಿಎಲ್ ಹೊಸ ಆಟದ ನಿಯಮಗಳಲ್ಲಿ ಸೇರಿಸಿದೆ.
ಐಪಿಎಲ್ ನಿಯಮ 1.2.1ರ ಪ್ರಕಾರ, "ಪ್ರತಿ ತಂಡದ ನಾಯಕ ಆಡುವ 11 ಆಟಗಾರರನ್ನು ಮತ್ತು ಗರಿಷ್ಠ 5 ಬದಲಿ ಫೀಲ್ಡರ್ಗಳನ್ನು ಟಾಸ್ ನಂತರ ಐಪಿಎಲ್ ಮ್ಯಾಚ್ ರೆಫರಿಗೆ ಲಿಖಿತವಾಗಿ ಬರೆದುಕೊಡಬೇಕು".
ಐಪಿಎಲ್ ನಿಯಮ 1.2.9ರ ಪ್ರಕಾರ, "ನಿಗದಿಪಡಿಸಿದ ಹೊರತಾಗಿ ಯಾವುದೇ ಆಟಗಾರರನ್ನು (ಆಡುವ 11ರ ಸದಸ್ಯ) ಹೆಸರಿಸಿದ ನಂತರ ಮತ್ತು ಪಂದ್ಯದ ಆರಂಭದ ಮೊದಲು ಎದುರಾಳಿ ನಾಯಕನ ಒಪ್ಪಿಗೆಯಿಲ್ಲದೆ ಬದಲಾಯಿಸಲಾಗುವುದಿಲ್ಲ".
"ಪ್ರಸ್ತುತ ಪ್ರತಿ ತಂಡಗಳ ನಾಯಕರು ಟಾಸ್ಗೆ ಮೊದಲು ತಂಡಗಳನ್ನು ವಿನಿಮಯ ಮಾಡಿಕೊಳ್ಳಬೇಕು. ಇದೀಗ ಟಾಸ್ ಮಾಡಿದ ನಂತರ ತಂಡಗಳ ಸಂಯೋಜನೆಯನ್ನು ಬದಲಾಯಿಸಬಹುದಾಗಿದೆ. ತಂಡಗಳು ಮೊದಲು ಬ್ಯಾಟಿಂಗ್ ಅಥವಾ ಬೌಲಿಂಗ್ ಮಾಡುವುದನ್ನು ಅವಲಂಬಿಸಿ ಉತ್ತಮ ಆಡುವ 11ರ ಬಳಗವನ್ನು ಆಯ್ಕೆ ಮಾಡಲು ಅವಕಾಶ ಮಾಡಿಕೊಡಲಿದ್ದು, ಇದು ತಂಡಗಳಿಗೆ ಸಹಾಯವಾಗಲಿದೆ," ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಐಪಿಎಲ್ನ ಈ ಹೊಸ ನಿಯಮ ಬದಲಾವಣೆಯೊಂದಿಗೆ, ದಕ್ಷಿಣ ಆಫ್ರಿಕಾದ SA20 ನಂತರ ಟಾಸ್ ಬಳಿಕ ತಮ್ಮ ಆಡುವ 11ರ ಬಳಗವನ್ನು ಪ್ರಕಟಿಸಲು ಅವಕಾಶ ನೀಡಿದ ಎರಡನೇ ಟಿ20 ಫ್ರಾಂಚೈಸ್ ಲೀಗ್ ಆಯಿತು.
ಉದ್ಘಾಟನಾ ದಕ್ಷಿಣ ಆಫ್ರಿಕಾದ SA20 ಪಂದ್ಯಾವಳಿಯಲ್ಲಿ ತಂಡಗಳು ಟಾಸ್ ನಂತರ ತಮ್ಮ ಅಂತಿಮ ಆಡುವ ಬಳಗ ಸೇರಿ 13 ಆಟಗಾರರ ತಂಡವನ್ನು ಹಾಳೆಯಲ್ಲಿ ಬರೆದು ವಿನಿಮಯ ಮಾಡಿಕೊಂಡಿದ್ದವು.
ಮುಂಬರುವ ಐಪಿಎಲ್ ಋತುವಿಗೆ ಮುಂಚಿತವಾಗಿ ಇತರ ನಿಯಮ ಬದಲಾವಣೆಗಳ ಕುರಿತು ಮಾತನಾಡುವುದಾರೆ, ನಿರ್ದಿಷ್ಟ ಸಮಯದಲ್ಲಿ ಪ್ರತಿ ಓವರ್ ಮುಗಿಸದಿದ್ದರೆ, ಓವರ್-ರೇಟ್ ಪೆನಾಲ್ಟಿ ಇರುತ್ತದೆ. ಇನ್ನು 30-ಯಾರ್ಡ್ ವೃತ್ತದ ಹೊರಗೆ ಕೇವಲ ನಾಲ್ಕು ಫೀಲ್ಡರ್ಗಳಿಗೆ ಮಾತ್ರ ಅವಕಾಶವಿರುತ್ತದೆ.
ಪಂದ್ಯದ ವೇಳೆ ಬ್ಯಾಟರ್ ಬಾಲ್ ಅನ್ನು ಎದುರಿಸು ಮೊದಲು ವಿಕೆಟ್ ಕೀಪರ್ ಅಥವಾ ಫೀಲ್ಡರ್ ತಮ್ಮ ಸ್ಥಾನವನ್ನು ಬದಲಾಯಿಸಿದರೆ ಅನ್ಯಾಯದ ಚಲನೆಗೆ ಎಂದು ಪರಿಗಣಿಸಿ ಎದುರಾಳಿ ತಂಡಕ್ಕೆ 5 ಪೆನಾಲ್ಟಿ ರನ್ ನೀಡುವುದು ಇತರ ಗಮನಾರ್ಹ ಬದಲಾವಣೆಯಾಗಿದೆ. ಇದನ್ನು ಪಂದ್ಯದ ಅಂಪೈರ್ಗಳು ಗಮನಿಸಿ ನಿರ್ಧಾರ ಕೈಗೊಳ್ಳುತ್ತಾರೆ.