ಇಂದು ಮೋದಿ ಹವಾ
ಬೆಂಗಳೂರು: ರಾಜ್ಯದಲ್ಲಿ ಚುನಾವಣ ಕಾವು ನಿಧಾನ ಗತಿಯಲ್ಲಿ ಏರುತ್ತಿರುವಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಬೆಂಗಳೂರಿಗೆ ಆಗಮಿಸುತ್ತಿದ್ದು, ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಲೋಕಾರ್ಪಣೆಗೆ ಕ್ಷಣಗಣನೆ ಆರಂಭವಾಗಿದೆ.
ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣ ಬೆಂಗಳೂರಿನ ಹೆಗ್ಗುರುತಾಗುವುದರ ಜತೆಗೆ, ರಾಜ್ಯ ರಾಜಕೀಯಕ್ಕೂ ಹೊಸ ದಿಕ್ಕು ನೀಡುವ ಸಾಧ್ಯತೆ ಇದೆ. ಹಾಗೆಯೇ, ಕನಕಜಯಂತಿಯದೇ ರಾಜ್ಯಕ್ಕೆ ಆಗಮಿಸಲಿರುವ ಪ್ರಧಾನಿ, ಶಾಸಕರ ಭವನದ ಆವರಣದಲ್ಲಿನ ಕನಕದಾಸರ ಪ್ರತಿಮೆಗೆ ಪುಷ್ಪ ನಮನ ಹಾಗೂ ವಾಲ್ಮೀಕಿ ಪ್ರತಿಮೆಗೂ ಮಾಲಾರ್ಪಣೆ ಮಾಡುವರು. ಈ ಮೂಲಕ ಸಂಬಂಧಿಸಿದ ಸಮುದಾಯಗಳ ವಿಶ್ವಾಸಗಳಿಸಿ ಹೊಸ ರಾಜಕೀಯ ಸಂದೇಶವನ್ನೂ ನೀಡುವ ಸಾಧ್ಯತೆಯೂ ಇದೆ.
'ಕನಕ ಜಯಂತಿಯ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಆಗಮಿಸಿರುವುದು ಯೋಗಾಯೋಗ. ಹಿಂದುಳಿದ ವರ್ಗಕ್ಕೆ ಸೇರಿದ ಪ್ರಧಾನ ಮಂತ್ರಿಗಳು ಸಮಸ್ತ ಮಾನವ ಕುಲಕ್ಕೆ ದಾರಿ ದೀಪವಾದ ಕನಕದಾಸರ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವುದು ನಮಗೆ ಸಂತೋಷ ತಂದಿದೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಈ ನಡುವೆ, ಪ್ರಧಾನಿ ಭೇಟಿಗೆ ಮುನ್ನಾದಿನವೇ ಕಾಂಗ್ರೆಸ್, ಪ್ರಧಾನಿಯ ಎದುರು ಹತ್ತು ಪ್ರಶ್ನೆಗಳನ್ನಿಟ್ಟು ನಾಲ್ಕು ವರ್ಷಗಳ ಹಿಂದೆ ರಾಜ್ಯದ ಜನತೆಗೆ ನೀಡಿದ್ದ ಭರವಸೆಗಳಿಗೆ ಉತ್ತರಿಸುವಂತೆ ಸವಾಲು ಹಾಕಿದೆ. ಹಾಗಾಗಿ ಮೋದಿ ಅವರು ಸಾರ್ವಜನಿಕ ಸಭೆಯಲ್ಲಿ ಕಾಂಗ್ರೆಸ್‌ನ ರಾಜಕೀಯ ಅಸ್ತ್ರಕ್ಕೆ ಪ್ರತಿ ಅಸ್ತ್ರ ಬಿಡುವ ಸಾಧ್ಯತೆಯೂ ಇದೆ.
ಪ್ರಧಾನಿ ಭೇಟಿ ಸಂಬಂಧ ಪ್ರತಿಮೆ ಲೋಕಾರ್ಪಣೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಸಾರ್ವಜನಿಕ ಸಭಾ ವೇದಿಕೆ ಕಾರ್ಯ ಕ್ರಮದ ಸಿದ್ಧತೆ ಹಾಗೂ ವ್ಯವಸ್ಥೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ಪರಿಶೀಲಿಸಿದರು. ನಮ್ಮ ಹೆಮ್ಮೆಯ ನಾಡಪ್ರಭುಗಳ ಹೆಸರಿನಲ್ಲಿರುವ ವಿಮಾನ ನಿಲ್ದಾಣ ದಲ್ಲಿ 108 ಅಡಿ ಎತ್ತರದ ಪ್ರಗತಿ ಪ್ರತಿಮೆ ಅಭಿವೃದ್ಧಿಗೆ ಪ್ರೇರಣೆಯಾಗುವ ದೃಷ್ಟಿಯಿಂದ ನಿರ್ಮಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
ವಂದೇ ಭಾರತ್ ರೈಲು:
ರೈಲು ನಿಲ್ದಾಣದಲ್ಲಿ ವಂದೇ ಭಾರತ್ - ಹೈಸ್ಪೀಡ್ ರೈಲಿನ ಉದ್ಘಾಟನೆಯೂ ನೆರವೇರಲಿದೆ. ಈ ರೈಲಿ ನಲ್ಲಿ ಬೆಂಗಳೂರು- ಮೈಸೂರು, ಚೆನ್ನೈ ಕಡೆ ಪ್ರಯಾಣಿಸಬಹುದು. ಅತೀ ಕಡಿಮೆ ಅವಧಿ ಯಲ್ಲಿ ಬೆಂಗಳೂರಿನಿಂದ ಮೈಸೂರನ್ನು ತಲುಪ ಬಹು ದು. ದೇಶದಲ್ಲಿ ಐದನೇ ರೈಲು ಹಾಗೂ ದಕ್ಷಿಣ ಭಾರತದಲ್ಲಿ ಮೊದಲ ಹೈಸ್ಪೀಡ್ ರೈಲು ಇದು. ಇದರಿಂದ ಆರ್ಥಿಕ ಬೆಳವಣಿಗೆಗೂ ಅನುಕೂಲವಾಗಲಿದೆ ಎಂದರು.
ಟರ್ಮಿನಲ್ -2 ಉದ್ಘಾಟನೆ :
ವಿಮಾನ ನಿಲ್ದಾಣಕ್ಕೆ ಆಗಮಿಸಿ ಪ್ರಧಾನಿ ಯವರು 2ನೇ ಟರ್ಮಿನಲ್ ಉದ್ಘಾಟಿಸುವರು. ಟರ್ಮಿನಲ್ -2 ಅಂತರರಾಷ್ಟ್ರೀಯ ಮತ್ತು ದೇಶೀಯ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸ ಲಿದೆ. ಸುಮಾರು 25 ಲಕ್ಷ ಪ್ರಯಾಣಿಕರ ಸಾಮರ್ಥ್ಯವನ್ನು ಟರ್ಮಿನಲ್ ಹೊಂದಿದೆ. ಈಗಿನದ್ದು 35 ಲಕ್ಷ ಸಾಮರ್ಥ್ಯ ವುಳ್ಳದ್ದಾಗಿದೆ. ಇವೆರಡೂ ಸೇರಿದರೆ ದಿಲ್ಲಿಯ ಅನಂತರದ 2ನೇ ಅತಿ ದೊಡ್ಡ ವಿಮಾನ ನಿಲ್ದಾಣ ವಾಗಲಿದೆ. ಅದರ ಉದ್ಘಾಟನೆಯ ನಂತರ ಪ್ರತಿಮೆ ಅನಾವರಣ ಮಾಡಿ ಸಾರ್ವಜನಿಕ ಸಭೆಗೆ ಪ್ರಧಾನಿ ತೆರಳುವರು ಎಂದು ವಿವರಿಸಿದರು.
ಬೆಳಗ್ಗೆ 10.00 : ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮನ
10.30: ಕನಕದಾಸ ಪ್ರತಿಮೆ ಮತ್ತು ಮಹರ್ಷಿ ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ
10.42: 1- ಮೆಜೆಸ್ಟಿಕ್‌ನಲ್ಲಿ 'ವಂದೇ ಭಾರತ್' ರೈಲಿಗೆ ಹಸುರು ನಿಶಾನೆ
2 - ಭಾರತ್ ಗೌರವ್ 'ಕಾಶಿ ದರ್ಶನ್' ರೈಲಿಗೆ ಹಸುರು ನಿಶಾನೆ
11.50: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ 2ನೇ ಟರ್ಮಿನಲ್ ಲೋಕಾರ್ಪಣೆ
12.10: ನಾಡಪ್ರಭು ಕೆಂಪೇಗೌಡರ ಪ್ರತಿಮೆ ಲೋಕಾರ್ಪಣೆ. ಅಮೃ ತ್ 2.0 ಯೋಜನೆಗೆ ಚಾಲನೆ
12.50: ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳುವಿಕೆ
ನ.11ರ ಬೆಂಗಳೂರು ಪ್ರವಾಸಕ್ಕಾಗಿ ಎದುರು ನೋಡುತ್ತಿದ್ದೇನೆ. ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣದ ಅವಕಾಶ ಸಿಕ್ಕಿರುವುದು ನನ್ನ ಪುಣ್ಯ. ವಿಮಾನ ನಿಲ್ದಾಣದ 2ನೇ ಟರ್ಮಿನಲ್, ವಂದೇ ಭಾರತ್ ಎಕ್ಸ್ ಪ್ರಸ್, ಭಾರತ್ ಗೌರವ್ ಕಾಶಿ ಯಾತ್ರೆ ರೈಲಿಗೆ ಹಸುರು ನಿಶಾನೆ ತೋರುತ್ತಿದ್ದೇನೆ. - ನರೇಂದ್ರ ಮೋದಿ, ಪ್ರಧಾನಿ