ಇಂಥವರೂ ಇರ್ತಾರಾ? ಮಗುವಿನ ಚಿಕಿತ್ಸೆಗೆ 11 ಕೋಟಿ ರೂ. ನೆರವು ನೀಡಿದ ಅಪರಿಚಿತ, ಮಗುವಿನ ತಂದೆ ಭಾವುಕ

ಇಂಥವರೂ ಇರ್ತಾರಾ? ಮಗುವಿನ ಚಿಕಿತ್ಸೆಗೆ 11 ಕೋಟಿ ರೂ. ನೆರವು ನೀಡಿದ ಅಪರಿಚಿತ, ಮಗುವಿನ ತಂದೆ ಭಾವುಕ

ಕೊಚ್ಚಿ: ಸಂಬಂಧಿಕರು ಅಥವಾ ಸ್ನೇಹಿತರ ಬಳಿ ಒಂದು ರೂಪಾಯಿ ಸಾಲ ಹುಟ್ಟದ ಕಾಲವಿದು. ಅದರಲ್ಲೂ ಒಬ್ಬರಿಗೆ ಒಂದು ರೂಪಾಯಿ ಖರ್ಚು ಮಾಡಲು ಕೂಡ ಜನರು ಇಂದು ತುಂಬಾ ಯೋಚಿಸುತ್ತಾರೆ. ಕಷ್ಟ ಅಂತಾ ಬಂದಾಗ ನಂಬಿದವರು ಕೈ ಕೊಡುವ ಈ ಕಾಲದಲ್ಲಿ ಅಪರಿಚಿತರೊಬ್ಬರು ಕೋಟ್ಯಂತರ ರೂ.

ನೆರವು ನೀಡುತ್ತಾರೆ ಅಂದರೆ ನಂಬಲು ಅಸಾಧ್ಯ. ಆದರೆ, ಕೇರಳದ ಈ ವ್ಯಕ್ತಿಯ ಬಾಳಲ್ಲಿ ಒಂದು ಪವಾಡವೇ ನಡೆದಿದ್ದು, ಆತ ಅದನ್ನು ದೇವರ ಪವಾಡ ಎಂದು ಭಾವಿಸಿದ್ದಾರೆ.

ವಿವರಣೆಗೆ ಬರುವುದಾದರೆ, ವಿರಾಳಾತಿವಿರಳ ಅನುವಂಶಿಯ ರೋಗದಿಂದ ಬಳಲುತ್ತಿರುವ ನಿರ್ವಾಣ್​ ಹೆಸರಿನ ಒಂದೂವರೆ ವರ್ಷದ ಮಗುವಿನ ಚಿಕಿತ್ಸೆಗಾಗಿ ಅಪರಿಚಿತನೊಬ್ಬ ಬರೋಬ್ಬರಿ 11 ಕೋಟಿ ರೂಪಾಯಿ ನೆರವು ನೀಡಿದ್ದಾರೆ. ಇದನ್ನು ತಿಳಿದು ಮಗುವಿನ ತಂದೆ ಸಾರಂಗ್ ಭಾವುಕರಾಗಿದ್ದು, ದೇವರ ಸಂದೇಶವಾಹಕನೇ ನಮ್ಮ ಕಷ್ಟಕ್ಕೆ ಸ್ಪಂದಿಸಿದ್ದಾರೆ ಎಂದು ಸಾರಂಗ್​ ಭಾವಿಸಿದ್ದಾರೆ.

ಅಂಗಮಾಲಿ ಅಟ್ಟಣಿ ಮೂಲದ ಅದಿತಿ ನಾಯರ್​ ಮತ್ತು ಪಲಕ್ಕಾಡ್​ನ ಕೂಟನಾಡ್ ಮೂಲದ ಸಾರಂಗ್​ ದಂಪತಿಗೆ ನಿರ್ವಾಣ್​ ಒಬ್ಬನೇ ಪುತ್ರ.​ ಎಲ್ಲರು ಕೂಡ ಅಂಗಮಾಲಿ ಅಟ್ಟಣಿಯಲ್ಲಿ ವಾಸವಿದ್ದಾರೆ. ಜೋಲ್ಗೆನ್​ಸ್ಮಾ ಎಂಬ ಅಮೆರಿಕನ್ ಔಷಧಿ ಬಂದಾಗಲೆಲ್ಲ ಅವರು ಮುಂಬೈನ ಆಸ್ಪತ್ರೆಗೆ ಹೋಗುತ್ತಾರೆ. ಔಷಧಿಯನ್ನು ನೀಡುವ ಮೊದಲು ಹಲವಾರು ಪರೀಕ್ಷೆಗಳನ್ನು ಮಾಡಬೇಕಾಗುತ್ತದೆ. ಔಷಧಿ ಬಂದ ನಂತರ ಒಂದು ಬಾರಿ ಜೀನ್ ವರ್ಗಾವಣೆ ನಡೆಯುತ್ತದೆ.

ಅಂದಹಾಗೆ ಸಾರಂಗ್​ ಓರ್ವ ಮರೀನ್​ (ಸಾಗರ) ಇಂಜಿನಿಯರ್. ಆಸ್ಟ್ರೇಲಿಯಾದ ಅಡಿಲೇಡ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ. ತನ್ನ ಪತ್ನಿ ಅದಿತಿ ಜೊತೆ ಸಂತೋಷಕರ ಜೀವನ ನಡೆಸುತ್ತಿದ್ದರು. ಅದಿತಿ ಕೂಡ ಫ್ರೆಂಚ್​ ಐಟಿ ಕಂಪನಿಯ ಉದ್ಯೋಗಿ. ಮಗನಿಗೆ ಕಾಯಿಲೆ ಇರುವುದು ಗೊತ್ತಾದ ಬಳಿಕ ದಂಪತಿ ಜ.19ರಂದು ಭಾರತಕ್ಕೆ ಮರಳಿದರು. ಮುಂಬೈನ ಹಿಂದುಜಾ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಚಿಕಿತ್ಸೆಗೆ 17.5 ಕೋಟಿ ರೂ. ವೆಚ್ಚವಾಗುತ್ತದೆ. ಹೇಳಬೇಕೆಂದರೆ, ನಿಜಕ್ಕೂ ಇದನ್ನು ನಂಬಲು ಅಸಾಧ್ಯ. ಆದರೆ, ವಾಸ್ತವ ನಂಬಲೇ ಬೇಕು. ಒಂದು ವರ್ಷದ ಮಗು ಕುಳಿತುಕೊಳ್ಳಲು ಮತ್ತು ನಿಲ್ಲಲು ಹಿಂದೇಟು ಹಾಕಿದಾಗ ಪರೀಕ್ಷೆ ಮಾಡಲಾಯಿತು. ಈ ವೇಳೆ ಮಗುವಿಗೆ ಎಸ್‌ಎಂಎ ಟೈಪ್ 2 ಇದೆ ಎಂದು ಹಿಂದೂಜಾ ಆಸ್ಪತ್ರೆ ದೃಢಪಡಿಸಿದೆ.

ವೈದ್ಯಕೀಯ ನೆರವು ಸಂಗ್ರಹಿಸಲು ಆರಂಭಿಸಲಾದ ಕ್ರೌಡ್ ಫಂಡಿಂಗ್ ಆಯಪ್ ಮೂಲಕ ಸೋಮವಾರ 1. 4 ಮಿಲಿಯನ್ ಡಾಲರ್ (ಸುಮಾರು 11. 6 ಕೋಟಿ ಭಾರತೀಯ ರೂಪಾಯಿ) ಖಾತೆಗೆ ಜಮಾ ಮಾಡಲಾಗಿದೆ. ಅಪರಿಚಿತ ವ್ಯಕ್ತಿಯೊಬ್ಬರು ಇದೇ ತಿಂಗಳ 13 ರಿಂದ ನಿರ್ವಾಣ್​ ಅವರ ವೈದ್ಯಕೀಯ ಮಾಹಿತಿ ಮತ್ತು ದಾಖಲೆಗಳನ್ನು ಹುಡುಕುತ್ತಿದ್ದರು. ಕ್ರೌಡ್‌ಫಂಡಿಂಗ್ ಪ್ಲಾಟ್‌ಫಾರ್ಮ್ ಮಿಲಾಪ್, ನಿರ್ವಾಣ್​ನನ್ನು ಹೇಗಾದರೂ ಬದುಕಬೇಕೆಂದು ಸೂಚಿಸಿತ್ತು ಎಂದು ವರದಿಯಾಗಿದೆ. ಇದೀಗ ವೈದ್ಯಕೀಯ ನೆರವು ನಿಧಿಯಲ್ಲಿ 16 ಕೋಟಿ ರೂ.ಗೂ ಹೆಚ್ಚು ಹಣವಿದೆ. ಕ್ರೌಡ್ ಫಂಡಿಂಗ್ ಏಜೆನ್ಸಿ ಮಿಲಾಪ್ ಮೂಲಕ 15 ಕೋಟಿ ಮತ್ತು ಗುರು ಏಜೆನ್ಸಿ ಮೂಲಕ 1.4 ಕೋಟಿ ರೂ. ಸಂಗ್ರಹವಾಗಿದೆ. ಒಂದು ರೂಪಾಯಿ ಕೊಡಲು ಯೋಚಿಸುವ ಈ ಕಾಲದಲ್ಲಿ ಇಷ್ಟೊಂದು ಹಣದ ನೆರವು ನೀಡಿರುವ ಆ ಪುಣ್ಯಾತ್ಮ ನಿಜಕ್ಕೂ ದೇವರ ಪ್ರತಿರೂಪ ಎಂದರೆ ತಪ್ಪಾಗಲಾರದು.

ಈ ಬಗ್ಗೆ ಭಾವುಕರಾಗಿ ಮಾತನಾಡಿರುವ ಸಾರಂಗ್​, ನನಗೆ ಏನು ಹೇಳಬೇಕೆಂದು ತಿಳಿಯುತ್ತಿಲ್ಲ, ಅಪರಿಚಿತನ ರೂಪದಲ್ಲಿ ದೇವರೇ ಇಳಿದು ಬಂದಿದ್ದಾನೆ ಎಂದು ಕಣ್ಣೀರಾಕಿದ ಸರಂಗ್​, ನಾನು ಆ ವ್ಯಕ್ತಿಯ ಬಗ್ಗೆ ತಿಳಿದುಕೊಳ್ಳಲೇಬೇಕು. ಆದರೆ, ಅವರು ಹೆಸರನ್ನು ಬಹಿರಂಗಪಡಿಸುವುದಿಲ್ಲ ಎಂದು ಹೇಳಿದ್ದಾರೆ. ನನಗೆ ಬೇರೆ ದಾರಿ ಕಾಣುತ್ತಿಲ್ಲ ಎಂದು ಸಾರಂಗ್​ ಭಾವುಕರಾದರು. (ಏಜೆನ್ಸೀಸ್​)