2021ರ ಲಖಿಂಪುರ ಖೇರಿ ಪ್ರಕರಣ: ಆರೋಪಿ ಆಶಿಶ್ ಮಿಶ್ರಾಗೆ ಸುಪ್ರೀಂನಿಂದ ಜಾಮೀನು ಮಂಜೂರು

ನವದೆಹಲಿ: 2021ರಲ್ಲಿ ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಕಾರು ಹರಿಸಿ ಹತ್ಯೆಗೈದ ಆರೋಪಿ ಕೇಂದ್ರ ಸಚಿವ ಅಜಯ್ ಮಿಶ್ರಾ ಟೆನಿ ಅವರ ಪುತ್ರ ಆಶಿಶ್ ಮಿಶ್ರಾಗೆ ಸುಪ್ರೀಂ ಕೋರ್ಟ್ ಇಂದು ಕೆಲವು ಷರತ್ತುಗಳೊಂದಿಗೆ ಎಂಟು ವಾರಗಳ ಜಾಮೀನು ಮಂಜೂರು ಮಾಡಿದೆ.
ಆಶಿಶ್ ಮಿಶ್ರಾ ಜಾಮೀನಿನ ಮೇಲೆ ಹೊರಗಿರುವಾಗ ಉತ್ತರ ಪ್ರದೇಶ ಅಥವಾ ದೆಹಲಿ ಮತ್ತು ಅದರ ಹತ್ತಿರದ ಪ್ರದೇಶಗಳಲ್ಲಿ ವಾಸಿಸುವಂತಿಲ್ಲ. ಒಂದು ವಾರದೊಳಗೆ ಉತ್ತರ ಪ್ರದೇಶವನ್ನು ತೊರೆಯುವಂತೆ ಆದೇಶಿಸಲಾಗಿದೆ. ಆಶಿಶ್ ಮಿಶ್ರಾ ವಿಚಾರಣೆಯನ್ನು ವಿಳಂಬಗೊಳಿಸಲು ಪ್ರಯತ್ನಿಸುತ್ತಿರುವುದು ಕಂಡುಬಂದರೆ ಅದು ಜಾಮೀನು ರದ್ದತಿಗೆ ಕಾರಣವಾಗಬಹುದು ಎಂದಿದೆ. ಮಾರ್ಚ್ 14 ರಂದು ಮತ್ತೆ ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ಹೇಳಿದೆ.
ಅಕ್ಟೋಬರ್ 3, 2021 ರಂದು ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನಾ ಮೆರವಣಿಗೆಯ ಸಂದರ್ಭದಲ್ಲಿ ಲಖಿಂಪುರ ಖೇರಿಯಲ್ಲಿ ಆಶಿಶ್ ಮಿಶ್ರಾ ಅವರ SUV ಕಾರು ಹರಿದು 8 ಮಂದಿ ರೈತರು ಸಾವನ್ನಪ್ಪಿದ್ದರು. ಘಟನೆಯಿಂದ ಉಂಟಾದ ಹಿಂಸಾಚಾರದಲ್ಲಿ ಎಸ್‌ಯುವಿ ಚಾಲಕ ಮತ್ತು ಇಬ್ಬರು ಬಿಜೆಪಿ ಕಾರ್ಯಕರ್ತರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.