ಬಂದ್ ಆದ ಸಹಕಾರಿ ಸಕ್ಕರೆ ಕಾರ್ಖಾನೆ; ಕೆಲಸ ಕಳೆದುಕೊಂಡು ಆತ್ಮಹತ್ಯೆಗೆ ಶರಣಾದ ಕಾರ್ಮಿಕ

ಬಂದ್ ಆದ ಸಹಕಾರಿ ಸಕ್ಕರೆ ಕಾರ್ಖಾನೆ; ಕೆಲಸ ಕಳೆದುಕೊಂಡು ಆತ್ಮಹತ್ಯೆಗೆ ಶರಣಾದ ಕಾರ್ಮಿಕ

ಬಾಗಲಕೋಟೆ: ರನ್ನ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಬಂದ್ ಆಗಿ ಕೆಲಸ ಕಳೆದುಕೊಂಡಿದ್ದ ಕಾರ್ಮಿಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಗುಲಗಾಲಜಂಬಗಿ ಗ್ರಾಮದಲ್ಲಿ ನಡೆದಿದೆ.

30 ವರ್ಷದ ಹನುಮಂತ ಚಿಚಖಂಡಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ.

ಕಳೆದ ಹತ್ತು ವರ್ಷಗಳಿಂದ ಕಾರ್ಖಾನೆಯಲ್ಲಿ ದಿನಗೂಲಿ ನೌಕರನಾಗಿ ಹನುಮಂತ ಕೆಲಸ ಮಾಡುತ್ತಿದ್ದ. ಆದರೆ ಎರಡು ವರ್ಷಗಳಿಂದ ಕಾರ್ಖಾನೆ ಮುಚ್ಚಲ್ಪಟ್ಟು ಕೆಲಸ ಕಳೆದುಕೊಂಡಿದ್ದ.

ಕಾರ್ಖಾನೆ ಪುನರಾರಂಭಿಸುವಂತೆ ಕಾರ್ಮಿಕರು 114 ದಿನಗಳ ಕಾಲ ಧರಣಿ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕಾರ್ಖಾನೆ ಆಡಳಿತಮಂಡಳಿ ರೈತರು ಹಾಗೂ ಕಾರ್ಮಿಕರ ಹೆಸರಲ್ಲಿ ಬ್ಯಾಂಕ್ ನಿಂದ 60 ಕೋಟಿ ಸಾಲ ಪಡೆದುಕೊಂಡಿದ್ದು, ಈಗ ಆತ್ಮಹತ್ಯೆಗೆ ಶರಣಾಗಿರುವ ಕಾರ್ಮಿಕನ ಹೆಸರಲ್ಲೂ 8 ಲಕ್ಷ ಸಾಲ ತೆಗೆದಿದೆ. ಇದೀಗ ಕಾರ್ಖಾನೆಯೇ ನಷ್ಟದಿಂದ ಮುಚ್ಚಿದ್ದು, ಉದ್ಯೋಗವೂ ಇಲ್ಲದೇ, ಕೆಲಸವೂ ಇಲ್ಲದೇ ಕಾರ್ಮಿಕರು ಕಣ್ಣೀರಿಡುತ್ತಿದ್ದಾರೆ.