ಅಪ್ರಾಪ್ತರ ದೈಹಿಕ ಸಂಪರ್ಕಕ್ಕೆ ಅನುಮತಿ ಇಲ್ಲ : ಕರ್ನಾಟಕ ಹೈಕೋರ್ಟ್ ಮಹತ್ವದ ಅಭಿಪ್ರಾಯ
ಬೆಂಗಳೂರು: 18 ವರ್ಷದೊಳಗಿನ ಅಪ್ರಾಪ್ತರಿಗೆ ಪ್ರೀತಿ ಮಾಡಲು ಅನುಮತಿ ಇರಬಹುದೇನೋ ಆದರೆ ದೈಹಿಕ ಸಂಪರ್ಕ ಬೆಳೆಸಲು ಅಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು, ಲೈಂಗಿಕ ಅಪರಾಧದಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಆರೋಪಿಗೆ ಜಾಮೀನು ನೀಡಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ.
ಪೋಕ್ಸೊ ಕಾಯ್ದೆಯ ಸೆಕ್ಷನ್ 4 ರ ಅಡಿಯಲ್ಲಿ ಶಿಕ್ಷಾರ್ಹವಾದ ಪೋಕ್ಸೊ ಕಾಯ್ದೆಯ ಸೆಕ್ಷನ್ 3 ರ ವ್ಯಾಪ್ತಿಯನ್ನು ಪರಿಗಣಿಸುವಾಗ ಅರ್ಜಿದಾರರು ಮತ್ತು ಸಂತ್ರಸ್ತ ಹುಡುಗಿಯ ನಡುವೆ ನಡೆದಿದೆ ಎಂದು ಹೇಳಲಾದ ಲೈಂಗಿಕ ದೌರ್ಜನ್ಯಕ್ಕೆ ಸಂತ್ರಸ್ತ ಬಾಲಕಿಯ ಒಪ್ಪಿಗೆ ಮುಖ್ಯವಲ್ಲ ಎಂದು ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರ ನ್ಯಾಯಪೀಠ ಹೇಳಿದೆ.
ಪ್ರಕರಣ ಸಂಬಂಧ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಬುಜ್ಜಿ ಅಲಿಯಾಸ್ ಬಾಬು (23) ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿರುವ ಹೈಕೋರ್ಟ್, ಸಂತ್ರಸ್ತೆಯ ಸ್ವಯಂಕೃತ ಹೇಳಿಕೆಯನ್ನೇ ಮುಂದಿಟ್ಟುಕೊಂಡು ಜಾಮೀನು ಕೋರಿದ ಆರೋಪಿಯ ಮನವಿಯನ್ನು ನ್ಯಾಯಪೀಠ ತಿರಸ್ಕರಿಸಿದೆ.
ಪೋಕ್ಸೋ ಕಾಯ್ದೆ ಪ್ರಕಾರ 18 ವರ್ಷ ಒಳಗಿನವರು ಅಪ್ರಾಪ್ತರೆಂದು ಪರಿಗಣಿಸಲ್ಪಡುತ್ತಾರೆ. ಈ ಪ್ರಕರಣದ ಸಂತ್ರಸ್ತೆ 18 ವರ್ಷ ಒಳಗಿನವರಾಗಿದ್ದಾರೆ. ಅವರು ಲೈಂಗಿಕ ಕ್ರಿಯೆಗೆ ಸಮ್ಮತಿ ನೀಡಿದ್ರೂ ಅದು ಸಮ್ಮತಿಯಾಗಿ ಪರಿಗಣಿಸುವುದಿಲ್ಲ ಎಂಬುದಾಗಿ ಪೋಕ್ಸೋ ಕಾಯ್ದೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ