ಅಕ್ರಮ ತಡೆಗೆ ಆಯೋಗ ಚುರುಕು: ಹೆಚ್ಚಿದ ಕಾರ್ಯಾಚರಣೆ, ಚೆಕ್‌ಪೋಸ್ಟ್‌ ತಪಾಸಣೆ

ಅಕ್ರಮ ತಡೆಗೆ ಆಯೋಗ ಚುರುಕು: ಹೆಚ್ಚಿದ ಕಾರ್ಯಾಚರಣೆ, ಚೆಕ್‌ಪೋಸ್ಟ್‌ ತಪಾಸಣೆ

ಬೆಂಗಳೂರು: ಚುನಾವಣ ಅಕ್ರಮಗಳ ವಿರುದ್ಧ ಕ್ರಮ ಕೈಗೊಳ್ಳಲು “ಮುಹೂರ್ತ’ಕ್ಕಾಗಿ ಕಾಯಬೇಡಿ ಎಂದು ಕೇಂದ್ರ ಚುನಾವಣ ಆಯೋಗ ಹೇಳಿದ ಬೆನ್ನಲ್ಲೇ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಅಕ್ರಮಗಳಿಗೆ ಕಡಿವಾಣ ಹಾಕಲು ಮುಂದಾಗಿದ್ದಾರೆ.

ಯುಗಾದಿ ಹಿನ್ನೆಲೆಯಲ್ಲಿ ಆಮಿಷ, ಉಚಿತ ಉಡುಗೊರೆಗಳ ಭರಾಟೆ ಹೆಚ್ಚಾಗಲಿದ್ದು, ಅಧಿಕಾರಿಗಳು ಮೈಯೆಲ್ಲ ಕಣ್ಣಾಗಿಸಿದ್ದಾರೆ. 2 ದಿನಗಳಲ್ಲಿ 9.19 ಕೋಟಿಯಷ್ಟು ಅಕ್ರಮ ಹಣವನ್ನು ಜಪ್ತಿ ಮಾಡಲಾಗಿದೆ.

ಹೆಚ್ಚುತ್ತಿದೆ ಅಕ್ರಮ
ಚುನಾವಣ ನೀತಿ ಸಂಹಿತೆ ಜಾರಿ ಯಾಗದ್ದನ್ನೇ ಅಸ್ತ್ರ ಮಾಡಿಕೊಂಡಿರುವ ರಾಜಕಾರಣಿಗಳು ಮತದಾರರ ಓಲೈಕೆಗೆ ವಿವಿಧ ಆಮಿಷಗಳನ್ನು ಒಡ್ಡುತ್ತಿದ್ದಾರೆ. ವಿವಿಧ ರೀತಿಯ ಉಡುಗೊರೆಗಳನ್ನು ಹಂಚುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ.

ಚುನಾವಣೆ ಮೇಲೆ ಪ್ರಭಾವ ಬೀರ ಬಹುದಾದ ಆಮಿಷ, ಉಡುಗೊರೆ, ಹಣ ಹಂಚಿಕೆಗೆ ಕಡಿವಾಣ ಹಾಕಲು ರಾಜ್ಯ ಪೊಲೀಸರು, ಕಂದಾಯ ಗುಪ್ತಚರ ನಿರ್ದೇಶನಾಲಯ, ರಾಜ್ಯ ಜಿಎಸ್‌ಟಿ ವಿಭಾಗ, ಕೇಂದ್ರ ಜಿಎಸ್‌ಟಿ ವಿಭಾಗ, ಕರಾವಳಿ ಕಾವಲು ಪಡೆ, ಇ.ಡಿ., ಏರ್‌ಪೋರ್ಟ್‌, ಪರೋಕ್ಷ ತೆರಿಗೆ ಮತ್ತು ಸುಂಕ ಕೇಂದ್ರ ಮಂಡಳಿ (ಸಿಬಿಐಸಿ) ಸಹಿತ ಚುನಾವಣ ನೀತಿ ಸಂಹಿತೆ ಜಾರಿ ಸಂಸ್ಥೆಗಳು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿವೆ. ಬೆಂಗಳೂರು ಸಹಿತ ಪ್ರಮುಖ ನಗರಗಳಲ್ಲಿ ರಾತ್ರಿ ಗಸ್ತು ಮತ್ತು ತಪಾಸಣೆ ಬಿಗಿಗೊಳಿಸಲಾಗಿದೆ.

ಬ್ಯಾಂಕ್‌, ಎಟಿಎಂ ಮೇಲೂ ಕಣ್ಣು
ಸಂಜೆ 5ರಿಂದ ಬೆಳಗ್ಗೆ 10ರ ವರೆಗೆ ಎಟಿಎಂಗಳಿಗೆ ನಗದು ತುಂಬುವುದನ್ನು ನಿರ್ಬಂಧಿಸಲಾಗುತ್ತಿದೆ. ದೊಡ್ಡ ಮೊತ್ತದ ಹಾಗೂ ಸಂದೇಹಾಸ್ಪದ ವಹಿವಾಟುಗಳ ಬಗ್ಗೆ ನಿಗಾ ಇಡಲು ಬ್ಯಾಂಕುಗಳಿಗೆ ತಾಕೀತು ಮಾಡಲಾಗಿದೆ. ರಾಜ್ಯಕ್ಕೆ ಮತ್ತೊಂದು ರಾಜ್ಯದಿಂದ ಸಾಮಾನ್ಯವಾಗಿ ಬರುವ ಎಲೆ ಕ್ಟ್ರಾನಿಕ್‌ ಉಪಕರಣಗಳು ಸಹಿತ ಸಾಮಾನ್ಯ ಬಳಕೆಯ ವಸ್ತುಗಳ ಪ್ರಮಾಣ ಹೆಚ್ಚಾದರೆ ಅವುಗಳನ್ನು ಪರಿಶೀಲಿಸಲಾಗುತ್ತಿದೆ. ಆಧುನಿಕ ಎಲೆಕ್ಟ್ರಾನಿಕ್‌ ವಿಧಾನದ ಹಣಕಾಸಿನ ವಹಿವಾಟುಗಳ ಮೇಲೂ ಕಣ್ಣಿಡಲಾಗುತ್ತಿದೆ.

ಧಾರ್ಮಿಕ ಕೇಂದ್ರಗಳ ಮೇಲೂ ನಿಗಾ
ಧಾರ್ಮಿಕ ಕೇಂದ್ರಗಳಿಗೆ ನೇತಾರರ “ಪ್ರದಕ್ಷಿಣೆ’ ಜೋರಾ ಗುತ್ತಿದ್ದು, ಆಯೋಗವು ಧಾರ್ಮಿಕ ಸ್ಥಳಗಳ ಮೇಲೆ ನಿಗಾ ವಹಿಸಿದೆ. ರಾಜಕೀಯ ಪಕ್ಷಗಳು, ರಾಜಕಾರಣಿಗಳ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು. ಕಾನೂನು ಮತ್ತು ನೀತಿ ಸಂಹಿತೆಯ ನಿಯಮಗಳಿಗೆ ವಿರುದ್ಧವಾಗಿ ಏನಾದರೂ ನಡೆದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಕೇಂದ್ರ ಚುನಾವಣ ಆಯೋಗ ರಾಜ್ಯದ ಮುಖ್ಯ ಚುನಾವಣಾಧಿಕಾರಿ ಕಚೇರಿಗೆ ಸೂಚನೆ ನೀಡಿದೆ.