ಪುನೀತ್ ಪಾರ್ಥಿವ ಶರೀರಕ್ಕೆ ಮುತ್ತಿಟ್ಟು ಅಪಹಾಸ್ಯಕ್ಕೀಡಾದ ಸಿಎಂ ಬೊಮ್ಮಾಯಿ?

ಬೆಂಗಳೂರು, ನ 17: ನಮ್ಮನ್ನಗಲಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಸ್ಮರಣಾರ್ಥ, ಚಲನಚಿತ್ರ ಮಂಡಳಿ ಆಯೋಜಿಸಿದ್ದ 'ಪುನೀತ ನಮನ' ಕಾರ್ಯಕ್ರಮದಲ್ಲಿ ರಾಜಕೀಯ ಮತ್ತು ಸಿನಿಮಾ ರಂಗದ ಪ್ರಮುಖರ ದಂಡೇ ಹರಿದು ಬಂದಿತ್ತು.
ನಗರದ ಅರಮನೆ ಮೈದಾನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ, ಸಚಿವ ಸಂಪುಟದ ಸದಸ್ಯರೂ ಭಾಗವಹಿಸಿದ್ದರು.
ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸು ಮಾಡಬೇಕು ಎನ್ನುವ ಕೂಗಿಗೂ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಕೂಡಾ, ಪದ್ಮ ಪ್ರಶಸ್ತಿಗೆ ಶಿಫಾರಸು ಅಷ್ಟೇ ಅಲ್ಲದೇ ಒತ್ತಡವನ್ನೂ ಹಾಕಬೇಕು ಎಂದು ಬೊಮ್ಮಾಯಿಯವರನ್ನು ಒತ್ತಾಯಿಸಿದರು.
ಸಂಘಟಕರ ಅಪೇಕ್ಷೆಯಂತೆ ಎಲ್ಲರಿಗಿಂತ ಮೊದಲು ಮಾತನಾಡಿದ ಸಿಎಂ ಬೊಮ್ಮಾಯಿ, ಡಾ.ರಾಜ್ ಕುಟುಂಬದ ಜೊತೆಗಿನ ಒಡನಾಟ, ಪುನೀತ್ ಜೊತೆಗಿನ ಆತ್ಮೀಯತೆಯನ್ನು ಮೆಲುಕು ಹಾಕಿಕೊಂಡರು. ಪುನೀತ್ ಅವರ ಅಂತ್ಯ ಸಂಸ್ಕಾರದ ದಿನ ನಡೆದ ಘಟನೆಯನ್ನು ಸಭೆಯಲ್ಲಿ ಹೇಳುವ ಮೂಲಕ ಹೊಸ ಚರ್ಚೆಗೆ ಬೊಮ್ಮಾಯಿ ನಾಂದಿ ಹಾಡಿದ್ದಾರೆ.
ಅಕ್ಟೋಬರ್ 29ರಂದು ವಿಕ್ರಂ ಆಸ್ಪತ್ರೆಯಿಂದ ಹಿಡಿದು ಅಕ್ಟೋಬರ್ 31ರವರೆಗೆ ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ರಾಜಕುಮಾರ್ ಅವರ ಅಂತ್ಯ ಸಂಸ್ಕಾರದ ಜವಾಬ್ದಾರಿಯನ್ನು ನೇರವಾಗಿ ಮುಖ್ಯಮಂತ್ರಿಗಳೇ ವಹಿಸಿಕೊಂಡಿದ್ದರು. ಭಾರತದ ಇತಿಹಾಸದಲ್ಲೇ ಕಂಡು ಕೇಳರಿಯದ ಜನಸಾಗರ ಪುನೀತ್ ಅವರ ಅಂತಿಮ ದರ್ಶನಕ್ಕೆ ಆಗಮಿಸಿತ್ತು. ಅಂತ್ಯ ಸಂಸ್ಕಾರದ ವೇಳೆ, ಸಿಎಂ ಬೊಮ್ಮಾಯಿಯವರು ಪುನೀತ್ ಅವರ ಪಾರ್ಥಿವ ಶರೀರಕ್ಕೆ ಮುತ್ತಿಟ್ಟಿದ್ದು ಭಾರೀ ವೈರಲ್ ಆಗಿತ್ತು. ಪಿಚ್ಚರ್ ಆಫ್ ದಿ ಡೇ ಎಂದು ಸಾಮಾಜಿಕ ತಾಣದಲ್ಲಿ ಎರ್ರಾಬಿರ್ರಿ ಶೇರ್ ಆಗಿದ್ದವು. ಈ ವಿಚಾರವನ್ನು ಸಿಎಂ ಬೊಮ್ಮಾಯಿ, ಪುನೀತ ನಮನ ಕಾರ್ಯಕ್ರಮದಲ್ಲಿ ಸ್ಮರಿಸಿ, ಬೇಸರ ವ್ಯಕ್ತ ಪಡಿಸಿದ್ದಾರೆ.
ಪುನೀತ್ ಅವರು ಮಣ್ಣಾದ ಜಾಗಕ್ಕೂ ಅದೇ ಗೌರವ ನೀಡುವ ಕೆಲಸ
ಕಾರ್ಯಕ್ರಮದಲ್ಲಿ ಮಾತಾನಾಡುತ್ತಾ ಸಿಎಂ ಬೊಮ್ಮಾಯಿ, "ಅಪ್ಪು ಅವರ ಹೆಸರು ಚಿರಸ್ಥಾಯಿ ಆಗಬೇಕೆಂದು ಹಲವು ಸಲಹೆ/ಸೂಚನೆಗಳು ಬಂದಿವೆ. ಅಭಿಮಾನಿಗಳ ಆಸೆ ಏನು ಇದೆಯೋ, ಅದೇ ಸರಕಾರದ ಅಭಿಲಾಷೆ ಕೂಡಾ. ಡಾ.ರಾಜ್ ಮತ್ತು ಅವರ ಧರ್ಮಪತ್ನಿ ಪಾರ್ವತಮ್ಮನವರ ಸಮಾಧಿಗೆ ಯಾವ ರೀತಿ ಸರಕಾರ ಸ್ಪಂದಿಸಿತ್ತೋ, ಅದೇ ರೀತಿ ಪುನೀತ್ ಅವರು ಮಣ್ಣಾದ ಜಾಗಕ್ಕೂ ಅದೇ ಗೌರವ ನೀಡುವ ಕೆಲಸವನ್ನು ಮಾಡಲಾಗುವುದು"ಎಂದು ಬೊಮ್ಮಾಯಿ ಹೇಳಿದ್ದಾರೆ.
ಪುನೀತ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿಯನ್ನು ಘೋಷಣೆ
"ಹಲವು ಜನರ/ಸಲಹೆಗಾರರ ಜೊತೆಗೆ ಮಾತಾನಾಡಿ, ಪುನೀತ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿಯನ್ನು ಘೋಷಣೆ ಮಾಡುತ್ತಿದ್ದೇನೆ. ರಾಷ್ಟ್ರಮಟ್ಟದ ಪ್ರಶಸ್ತಿಗಳ ವಿಚಾರದಲ್ಲೂ, ಮುಂದಿನ ಸಂಪುಟ ಸಭೆಯಲ್ಲಿ ನಿರ್ಣಯವನ್ನು ತೆಗೆದುಕೊಳ್ಳಲಾಗುವುದು. ಮುತ್ತುರಾಜ್ ಅವರ ಮುತ್ತು ದೈಹಿಕವಾಗಿ ನಮ್ಮ ಜೊತೆಗಿಲ್ಲ, ಆದರೆ ಸಣ್ಣ ವಯಸ್ಸಿನಲ್ಲಿ ಅವನು ತೋರಿರುವಂತಹ ಚಾರಿತ್ರ್ಯ ಚರಿತ್ರೆಗೆ ಸೇರುತ್ತದೆ"ಎಂದು ಬೊಮ್ಮಾಯಿಯವರು ಪುನೀತ್ ಅವರನ್ನು ಸ್ಮರಿಸಿಕೊಂಡಿದ್ದಾರೆ.
ಕೆಲವರು ಅಪಹಾಸ್ಯ ಮಾಡಿದರು, ನಾನು ಅದಕ್ಕೆಲ್ಲಾ ತಲೆಕೆಡಿಸಿಕೊಳ್ಳುವವನಲ್ಲ
"ನನಗೆ ಅಪ್ಪು ಬಹಳ ಆತ್ಮೀಯ, ದೊಡ್ಡ ಕನಸನ್ನು ಹೊಂದಿದ್ದವನು, ಅಂತಿಮ ಸಂಸ್ಕಾರದ ದಿನ ನಾನು ಆತನ ಹಣೆಗೆ ಮುತ್ತಿಟ್ಟು ಅವನನ್ನು ಕಳುಹಿಸಿಕೊಟ್ಟೆ. ರಾಜ್ಯದ ಮುಖ್ಯಮಂತ್ರಿಯಾಗಿ, ಆರೂವರೆ ಕೋಟಿ ಕನ್ನಡಿಗರ ಪ್ರತಿನಿಧಿಯಾಗಿ ನಾನು ಆ ಕೆಲಸ ಮಾಡಿದೆ. ಇದನ್ನು ಕೆಲವರು ಅಪಹಾಸ್ಯ ಮಾಡಿದರು, ನಾನು ಅದಕ್ಕೆಲ್ಲಾ ತಲೆಕೆಡಿಸಿಕೊಳ್ಳುವವನಲ್ಲ"ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಆ ಮೂಲಕ, ಅಪಹಾಸ್ಯ ಮಾಡಿದವರು ಯಾರು ಎನ್ನುವ ವಿಚಾರವನ್ನು ಹೇಳದೇ ಇನ್ನೊಂದು ಚರ್ಚೆಗೆ ಸಿಎಂ ನಾಂದಿ ಹಾಡಿದ್ದಾರೆ.