ಸಮುದ್ರಯಾನ: 500 ಮೀಟರ್‌ ಆಳಕ್ಕೆ ಮೂವರು ಅನ್ವೇಷಕರ ಕಳುಹಿಸಲು ಸಿದ್ಧತೆ

ಸಮುದ್ರಯಾನ: 500 ಮೀಟರ್‌ ಆಳಕ್ಕೆ ಮೂವರು ಅನ್ವೇಷಕರ ಕಳುಹಿಸಲು ಸಿದ್ಧತೆ

ನಾಗಪುರ: ‌ಈ ವರ್ಷ ಭಾರತ ಸಮುದ್ರ ತಳದಲ್ಲಿ ಶೋಧನೆ ನಡೆಸಲು ಮೂವರನ್ನು ಸಮುದ್ರದ ಅಡಿ ‌500 ಮೀಟರ್ ಆಳಕ್ಕೆ ದೇಶೀಯವಾಗಿ ನಿರ್ಮಿಸಿದ 'ಸಮುದ್ರಯಾನ' ಹಡಗಿನಲ್ಲಿ ಕಳುಹಿಸಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಚೆನ್ನೈನ ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಆಫ್‌ ಓಶಿಯನ್‌ ಟೆಕ್ನಾಲಜಿಯ ಎಂಜಿನಿಯರ್‌ಗಳು ಈಗಾಗಲೇ ಉಕ್ಕಿನ ಗೋಳವನ್ನು ವಿನ್ಯಾಸಗೊಳಿಸಿದ್ದು, ಅದರಲ್ಲಿ ಅನ್ವೇಷಕರು ಪ್ರಯಾಣಿಸುತ್ತಾರೆ ಎಂದರು.

6,000 ಮೀಟರ್‌ ಆಳಕ್ಕೆ ಸಮುದ್ರಯಾನ ಕಳುಹಿಸುವ ಯೋಜನೆಯು ಆ ಆಳದಲ್ಲಿನ ಒತ್ತಡ ತಡೆದುಕೊಳ್ಳುವ ಸಾಮರ್ಥ್ಯವಿರುವ ಟೈಟಾನಿಯಂ ಗೋಳ ಸಂಗ್ರಹಿಸುವಲ್ಲಿನ ತೊಂದರೆಯಿಂದಾಗಿ ವಿಳಂಬವಾಗಬಹುದು ಎಂದು ಅಧಿಕಾರಿ ಸುದ್ದಿಸಂಸ್ಥೆಗೆ ತಿಳಿಸಿದರು.

ಉಕ್ಕಿನ ಗೋಳವು 500 ಮೀಟರ್ ಆಳದವರೆಗೆ ಒತ್ತಡ ತಡೆದುಕೊಳ್ಳಬಲ್ಲದು. ಆದರೆ, ಅದು ಆಳಕ್ಕೆ ಚಲಿಸಿದಂತೆ ಕುಸಿಯುತ್ತದೆ. ಟೈಟಾನಿಯಂ ಅನ್ನು ಆಯ್ಕೆಯ ಲೋಹವನ್ನಾಗಿ ಮಾಡಬೇಕಾಗುತ್ತದೆ ಎಂದು ಅವರು ಹೇಳಿದರು.

'ಇವು ವಿಶೇಷ ತಂತ್ರಜ್ಞಾನಗಳಾಗಿವೆ ಮತ್ತು ಯಾವುದೇ ದೇಶವು ಅದನ್ನು ಬಿಟ್ಟುಕೊಡಲು ಸಿದ್ಧವಿಲ್ಲ. ಉಕ್ರೇನ್ ಸಂಘರ್ಷ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಳಿಸಿದೆ' ಎಂದು ಅಧಿಕಾರಿ ವಿವರಿಸಿದರು.

ಮುಂದಿನ ವರ್ಷದ ಅಂತ್ಯದ ವೇಳೆಗೆ ಮಾನವ ಸಹಿತ ಬಾಹ್ಯಾಕಾಶ ಯಾನ ಸಾಧಿಸುವತ್ತ ಭಾರತ ತನ್ನ ದೃಷ್ಟಿ ನೆಟ್ಟಿದೆ ಎಂದರು.

ಉಕ್ರೇನ್ ಸಂಘರ್ಷ ಈಗಾಗಲೇ 2024 ರ ಅಂತ್ಯದವರೆಗೆ ಮಾನವ ಬಾಹ್ಯಾಕಾಶ ಯಾನದ ಸಮಯ ಮುಂದೂಡಿದೆ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಈ ವರ್ಷ ಗಗನಯಾನ ಮಿಷನ್‌ಗಾಗಿ ತಂತ್ರಜ್ಞಾನಗಳನ್ನು ಪರೀಕ್ಷಿಸಲು ಮತ್ತು ಮೌಲ್ಯೀಕರಿಸಲು ಸಿಬ್ಬಂದಿರಹಿತ ಯೋಜನೆ ಕೈಗೊಳ್ಳಲು ಯೋಜಿಸಿದೆ.

'ಇದು ಉಪಗ್ರಹವನ್ನು ಕಕ್ಷೆಗೆ ಕಳುಹಿಸಿದಂತೆ ಅಲ್ಲ. ಮಾನವರ ವಿಷಯಕ್ಕೆ ಬಂದಾಗ ಅವಕಾಶ ತೆಗೆದುಕೊಳ್ಳಲು ಸಾಧ್ಯವಿಲ್ಲ. ನಾವು ಜಾಗರೂಕರಾಗಿದ್ದೇವೆ ಮತ್ತು ಎಚ್ಚರಿಕೆಯಿಂದ ಇದ್ದೇವೆ. ಜಾಗತಿಕವಾಗಿ, ದೇಶಗಳು ಮಾನವ ಬಾಹ್ಯಾಕಾಶ ಹಾರಾಟ ಸಾಮರ್ಥ್ಯ ಅಭಿವೃದ್ಧಿಪಡಿಸಲು ಸುಮಾರು 10 ವರ್ಷ ತೆಗೆದುಕೊಂಡಿವೆ. ಇದನ್ನು ನಾವು ನಾಲ್ಕು ವರ್ಷಗಳಲ್ಲಿ ಮಾಡುತ್ತಿದ್ದೇವೆ' ಎಂದು ಇಸ್ರೊ ಅಧ್ಯಕ್ಷ ಎಸ್. ಸೋಮನಾಥ್ ಹೇಳಿದರು.