ಸಗಣಿ ಎಂದು ಮೂಗು ಮುರಿಯದಿರಿ: ಸಾವಯವ ಗೊಬ್ಬರದತ್ತ ರೈತರ ಒಲವು, ಸಗಣಿಗೂ ಬಂತು ಬಂಗಾರದ ಬೆಲೆ!

ಈ ಸಂದರ್ಭದಲ್ಲಿ ಮಣ್ಣಿನ ಫಲವತ್ತತೆ ಹೆಚ್ಚಿಸಿಕೊಳ್ಳಲು ಗೋಮಾಳದ ಗೊಬ್ಬರದ ಮೊರೆ ಹೋಗುತ್ತಿದ್ದಾರೆ. ಹಸುವಿನ ಸಗಣಿ ಬೇಡಿಕೆ ಹೆಚ್ಚಾಗಿದ್ದು, ಒಂದು ಟ್ರ್ಯಾಕ್ಟರ್ ಹಸುವಿನ ಸಗಣಿಗೆ ಈ ಹಿಂದೆ 3,000 ರೂ ಇತ್ತು. ಆದರೀಗ 6,000 ರಿಂದ 8,000 ರೂಗೆ ಹೆಚ್ಚಾಗಿದೆ. ಹೆಚ್ಚಿನ ಇಳುವರಿಗೆ ಮಣ್ಣಿನ ಫಲವತ್ತತೆ ಬಹಳ ಮುಖ್ಯ ಎಂಬುದನ್ನು ಅರಿತಿರುವ ರೈತರು ಸಾವಯವ ಗೊಬ್ಬರಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ.
ಹೀಗಾಗಿ ಈ ಋತುವಿನಲ್ಲಿ ಉತ್ತಮ ಫಸಲು ಪಡೆಯುವ ನಿರೀಕ್ಷೆಯಲ್ಲಿರುವ ರೈತರು ಮಣ್ಣಿನ ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ. ನಿರಂತರ ಮಳೆಯಿಂದಾಗಿ ಮಣ್ಣಿನ ಸವೆತ ಹೆಚ್ಚಾಗುತ್ತಿದೆ. ಇದು ಮಣ್ಣಿನ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಮಣ್ಣಿನ ಗುಣಮಟ್ಟ ಕಾಯ್ದುಕೊಳ್ಳಲು ಸಾವಯವ ಗೊಬ್ಬರ ಬಳಸುವಂತೆ ಕೃಷಿ ತಜ್ಞರು ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ನಡುವೆ ಮುದ್ದೆ ಚರ್ಮ ರೋಗ ರೈತರ ತಲೆತೋರಿದೆ. ಸಾಕಷ್ಟು ರೈತರು ಜಾನುವಾರುಗಳ ಬಳಕೆಯನ್ನೇ ನಿಲ್ಲಿಸಿದ್ದು, ಚಿಕಿತ್ಸೆಗಳು ದೊರೆಯದ ಕಾರಣ ರೋಗಗ್ರಸ್ಥ ಜಾನುವಾರುಗಳನ್ನು ಗೋಶಾಲೆಗಳಿಗೆ ಕಳುಹಿಸಿದ್ದಾರೆಂದು ತಿಳಿದುಬಂದಿದೆ. ಸಾವಯವ ಗೊಬ್ಬರದ ಬಗ್ಗೆ ಜಾಗೃತಿ ಮೂಡಿಸುತ್ತಿರುವ ರೈತ ವೀರೇಶ ನೇಗಲಿ ಮಾತನಾಡಿ, ನೀರಾವರಿ ಸೌಲಭ್ಯವಿರುವ ರೈತರು ಹಸುವಿನ ಸಗಣಿ ಸರಿಯಾಗಿ ಮಿಶ್ರಣವಾಗುವಂತೆ ಮಣ್ಣಿನಲ್ಲಿ ನೀರು ಚಿಮುಕಿಸಬೇಕು. ಇಲ್ಲವಾದರೆ ಸಗಣಿ ಕೆಸರಿನಲ್ಲಿ ಬೆರೆತು ವ್ಯರ್ಥವಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಈ ನಿಟ್ಟಿನಲ್ಲಿ ಸಮಾನ ಮನಸ್ಕ ರೈತರ ಗುಂಪೊಂದು ನರೇಗಲ್, ತೋಟಗಂಟಿ, ಕೋಚಲಾಪುರ, ಡಿ.ಎಸ್.ಹಡಗಲಿ, ಬೂದಿಹಾಳ್, ಜಕ್ಕಲಿ ಮತ್ತಿತರ ಗ್ರಾಮಗಳಿಗೆ ಭೇಟಿ ನೀಡುತ್ತಿದ್ದು, ರೈತರಿಗೆ ಮಾಹಿತಿ ನೀಡುವ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ. ಗದಗದ ಕೃಷಿ ಇಲಾಖೆಯ ಅಧಿಕಾರಿಯೊಬ್ಬರು ಮಾತನಾಡಿ, ಅನೇಕ ರೈತರು ಸಾವಯವ ಗೊಬ್ಬರದತ್ತ ಮುಖ ಮಾಡುತ್ತಿದ್ದಾರೆ. ಒಮ್ಮೆ ಮಳೆಯಾದರೂ ಮಣ್ಣಿನ ಜೊತೆಗೆ ಹಸುವಿನ ಸಗಣಿಯನ್ನು ಸರಿಯಾದ ರೀತಿಯಲ್ಲಿ ಮಿಶ್ರಣ ಮಾಡುವಂತೆ ತಿಳಿಸುತ್ತಿದ್ದೇವೆ. ಯಾವುದೇ ಸಹಾಯಕ್ಕಾಗಿ ರೈತರು ತಮ್ಮ ಹತ್ತಿರದ ಕೃಷಿ ಇಲಾಖೆ ಕಚೇರಿಯನ್ನು ಸಂಪರ್ಕಿಸುವಂತೆಯೂ ತಿಳಿಸಲಾಗಿದೆ ಎಂದು ಹೇಳಿದ್ದಾರೆ.