ವೈದ್ಯಕೀಯ ಕಾಲೇಜಿಗೆ 92 ಎಕರೆ ಜಾಗ ಹಸ್ತಾಂತರ

ಚಿತ್ರದುರ್ಗ: ಜಿಲ್ಲಾ ಕೇಂದ್ರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಸಾಕಷ್ಟು ವಿಳಂಬವಾಗಿದೆ. ಕೂಡಲೇ ತಾಲ್ಲೂಕಿನ ಇಂಗಳದಾಳ್ ಬಳಿಯ 92 ಎಕರೆ ಜಾಗವನ್ನು ಕಾಲೇಜಿಗೆ ಹಸ್ತಾಂತರಿಸುವಂತೆ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ.
ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ (ದಿಶಾ) ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
'ಸರ್ಕಾರಿ ವೈದ್ಯಕೀಯ ಕಾಲೇಜು ಪ್ರಾರಂಭಿಸಬೇಕು ಎಂಬುದು ಜಿಲ್ಲೆಯ ಬಹಳ ವರ್ಷಗಳ ಬೇಡಿಕೆಯಾಗಿದೆ. ಕಾಲೇಜು ನಿರ್ಮಾಣದ ವಿಚಾರದಲ್ಲಿ ಏಕೆ ವಿಳಂಬವಾಗುತ್ತಿದೆ' ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಚ್. ಬಸವರಾಜ್ ಅವರನ್ನು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಬಸವರಾಜ್, 'ವೈದ್ಯಕೀಯ ಕಾಲೇಜು ಪ್ರಾರಂಭಕ್ಕೆ ಸಂಬಂಧಿಸಿ ಈಗಾಗಲೇ ವಿಶೇಷಾಧಿಕಾರಿಯನ್ನು ನೇಮಿಸಲಾಗಿದೆ. ಕಾಲೇಜು ಮತ್ತು ಆಸ್ಪತ್ರೆ ನಿರ್ಮಾಣಕ್ಕೆ ಸ್ಥಳ ಗುರುತಿಸಲು ಕಂದಾಯ ಇಲಾಖೆಗೆ ಪತ್ರ ಬರೆಯಲಾಗಿದೆ' ಎಂದು ಹೇಳಿದರು.
'ಇಂಗಳದಾಳ್ ಬಳಿಯ ಡಿಮ್ಡ್ ಅರಣ್ಯದಲ್ಲಿ 92 ಎಕರೆ ಡಿನೋಟಿಫೈ ಆಗಿರುವ ಜಮೀನು ಇದೆ. ಈ ಜಾಗವನ್ನು ಕಾಲೇಜಿಗೆ ಹಸ್ತಾಂತರಿಸಲು ಅಗತ್ಯ ಕ್ರಮವಹಿಸಬೇಕು. ಜತೆಗೆ ತಾತ್ಕಾಲಿಕವಾಗಿ ಕಾಲೇಜು ಪ್ರಾರಂಭಿಸಲು ಸೂಕ್ತ ಸ್ಥಳ ನಿಗದಿ ಮಾಡಬೇಕು' ಎಂದು ಜಿಲ್ಲಾ ಆರೋಗ್ಯಾಧಿಕಾರಿಗೆ ತಾಕೀತು ಮಾಡಿದರು.
ಜಿಲ್ಲೆಯಲ್ಲಿ ಹಾದುಹೋಗಿರುವ ಎರಡು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪದೇ ಪದೇ ಅಪಘಾತವಾಗುವ ಸ್ಥಳಗಳನ್ನು ಕಪ್ಪುಚುಕ್ಕೆ ವಲಯಗಳನ್ನಾಗಿ ಪೊಲೀಸ್ ಇಲಾಖೆ ಗುರುತಿಸಿದೆ. ಅದೇ ರೀತಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರೂ ಇಂತಹ ವಲಯಗಳನ್ನು ಗುರುತಿಸಿದ್ದಾರೆ. ಆದರೆ ಈ ಸಂಖ್ಯೆಯಲ್ಲಿ ವ್ಯತ್ಯಾಸವಿದೆ' ಎಂದರು.
'ಪೊಲೀಸ್ ಇಲಾಖೆಯು ಅಪಘಾತಗಳ ಸಂಖ್ಯೆಗಳ ಆಧಾರದಲ್ಲಿ ಗುರುತಿಸಿರುವ ಕಪ್ಪುಚುಕ್ಕೆ ವಲಯಗಳಲ್ಲಿ ಅಪಘಾತ ತಡೆಗೆ ಕೆಲವು ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಈ ಹಿಂದೆಯೂ ಕೂಡ ಸೂಚಿಸಲಾಗಿತ್ತು. ಅಪಘಾತವಾಗಿ ಜನರ ಪ್ರಾಣ ಹೋದರೆ ತಂದುಕೊಡಲು ಸಾಧ್ಯವೇ' ಎಂದು ಸಚಿವರು ಪ್ರಶ್ನಿಸಿದರು.
'ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಇದುವರೆಗೂ ಪರಿಹಾರ ಕಾರ್ಯ ಕೈಗೊಳ್ಳುವಲ್ಲಿ ವಿಫಲವಾಗಿದ್ದಾರೆ. ಕೆಲವೆಡೆ ಗ್ರಾಮಸ್ಥರು ತಮ್ಮ ಗ್ರಾಮಗಳಿಗೆ ಕಿಲೋಮೀಟರ್‌ಗಟ್ಟಲೆ ಸುತ್ತಿಬಳಸಿ ಹೋಗುವ ಪರಿಸ್ಥಿತಿ ಇದೆ. ಹೀಗಾಗಿ ಅಗತ್ಯ ಅಂಡರ್‌ಪಾಸ್‌ಗಳು, ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಸೂಚನೆ ನೀಡಲಾಗಿತ್ತು. ಜತೆಗೆ ಬೆಂಗಳೂರು ಮತ್ತು ದಾವಣಗೆರೆಯಿಂದ ಚಿತ್ರದುರ್ಗ ನಗರಕ್ಕೆ ಪ್ರವೇಶ ಮಾಡಬೇಕಾದ ಕಡೆ ಹೆದ್ದಾರಿಯಲ್ಲಿ ಸೂಕ್ತ ಮಾರ್ಗಸೂಚಿ ಫಲಕವನ್ನು ಅಳವಡಿಸದೇ ಇರುವುದು ಸಮಸ್ಯೆ ಸೃಷ್ಟಿಸಿದೆ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಕಾರ್ಯವೈಖರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಅಪಘಾತಗಳನ್ನು ತಡೆಗಟ್ಟಲು ಕಪ್ಪುಚುಕ್ಕೆ ವಲಯದಲ್ಲಿ ಶಾಶ್ವತ ಪರಿಹಾರ ಕಾಮಗಾರಿ ಕೈಗೊಳ್ಳಬೇಕು. ರಾಷ್ಟ್ರೀಯ ಹೆದ್ದಾರಿಗಳ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು.