ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಶೀಘ್ರವೇ ಈ ವಿವಿಯಲ್ಲಿ ಮಧ್ಯಾಹ್ನದ ಬಿಸಿಯೂಟ

ತುಮಕೂರು : ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಿಹಿಸುದ್ದಿಯೊಂದು ಸಿಕ್ಕಿದ್ದು, ವಿವಿ ವಿದ್ಯಾರ್ಥಿಗಳಿಗೂ ಇನ್ಮುಂದೆ ಮಧ್ಯಾಹ್ನದ ಬಿಸಿಯೂಟ ನೀಡಲು ನಿರ್ಧರಿಸಲಾಗಿದ್ದು, ಪ್ರಥಮ ಬಾರಿಗೆ ತುಮಕೂರು ವಿವಿಯಲ್ಲಿ ಕಾರ್ಯರೂಪಕ್ಕೆ ಬಂದಿದೆ.
ವಿವಿ ಆಡಳಿತ ಮಂಡಳಿಯು ಪಾವಗಡ ರಾಮಕೃಷ್ಣ ಸೇವಾಶ್ರಮ, ಬೆಂಗಳೂರಿನ ಆದಮ್ಯ ಚೇತನ, ರೆಡ್ ಕ್ರಾಸ್, ತುಮಕೂರು ಸಾಯಿಬಾಬಾ ಮಂದಿರ ಸೇರಿ ಸಾಮಾಜಿ ಸಂಸ್ಥೆಗಳ ಸಹಯೋಗದಲ್ಲಿ ವಿವಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ನೀಡಲು ನಿರ್ಧರಿಸಿದೆ. ವಿವಿ ಆವರಣದಲ್ಲಿ ವ್ಯಾಸಂಗ ಮಾಡುತ್ತಿರುವ 1,200 ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಬಿಸಿಯೂಟ ನೀಡಲಿದೆ.
ಹಾಸ್ಟೆಲ್ ಸೌಲಭ್ಯವಿಲ್ಲದೆ ಹೆಚ್ಚಿನ ವಿದ್ಯಾರ್ಥಿಗಳು ಊಟ ಮಾಡದೇ ಕಲಿಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಲವು ಪ್ರಾಧ್ಯಾಪಕರು ಯೋಜನೆ ರೂಪಿಸುವಲ್ಲಿ ಕಾಳಜಿ ವಹಿಸಿದ್ದಾರೆ. ಗ್ರಾಮೀಣ ಮತ್ತು ಬಡವರ್ಗದ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲು ವಿವಿ ಹಂತದಲ್ಲಿ 1,200 ವಿದ್ಯಾರ್ಥಿಗಳಿಗೆ 5 ರೂ.ಗೆ ಊಟ ನೀಡಲು ತೀರ್ಮಾನಿಸಲಾಗಿದೆ.