ವಿರಾಟ್ ಕೊಹ್ಲಿ ಟೀಕಾಕಾರರಿಗೆ ಬಿಸಿ ಮುಟ್ಟಿಸಿದ ಪಾಕ್ ಮಾಜಿ ಕ್ರಿಕೆಟಿಗ

ಇದೀಗ ಗುರುವಾರ, ಜನವರಿ 12ರಂದು ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಶ್ರೀಲಂಕಾವನ್ನು ಎದುರಿಸಲಿದೆ. ರೋಹಿತ್ ಶರ್ಮಾ ಪಡೆ ಈ ಪಂದ್ಯವನ್ನು ಗೆದ್ದು ಇನ್ನೂ ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು ವಶಪಡಿಸಿಕೊಳ್ಳಲು ಎದುರು ನೋಡುತ್ತಿದೆ.ಮೊದಲ ಪಂದ್ಯದಲ್ಲಿ ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಭರ್ಜರಿ ಫಾರ್ಮ್ ಮುಂದುವರೆಸಿದರು ಮತ್ತು ಏಕದಿನ ಕ್ರಿಕೆಟ್‌ನಲ್ಲಿ 45ನೇ ಶತಕ ಬಾರಿಸಿ ಮತ್ತೊಮ್ಮೆ ಪಾರುಪತ್ಯ ಸಾಧಿಸಿದರು.
ಇನ್ನು ಕಳೆದ ವರ್ಷ ಏಷ್ಯಾಕಪ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧದ ಚೊಚ್ಚಲ ಟಿ20 ಶತಕವನ್ನು ಪ್ರಶ್ನಿಸಿದ ವಿರಾಟ್ ಕೊಹ್ಲಿಯ ಟೀಕಾಕಾರರ ವಿರುದ್ಧ ಪಾಕಿಸ್ತಾನ ತಂಡದ ಮಾಜಿ ನಾಯಕ ಸಲ್ಮಾನ್ ಬಟ್ ವಾಗ್ದಾಳಿ ನಡೆಸಿದ್ದಾರೆ.
ವೃತ್ತಿಜೀವನದ ಅತ್ಯಂತ ಕಳಪೆ ಫಾರ್ಮ್‌ನಲ್ಲಿದ್ದರು
ಏಷ್ಯಾ ಕಪ್ ಪಂದ್ಯಾವಳಿಗೂ ಮುನ್ನ ವಿರಾಟ್ ಕೊಹ್ಲಿ ತಮ್ಮ ವೃತ್ತಿಜೀವನದ ಅತ್ಯಂತ ಕಳಪೆ ಫಾರ್ಮ್‌ನಲ್ಲಿದ್ದರು. ಅವರು ಆ ಸಮಯದಲ್ಲಿ ಮೂರು ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಬರ ಅನುಭವಿಸುತ್ತಿದ್ದರು.
ಏಷ್ಯಾಕಪ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧ 61 ಎಸೆತಗಳಲ್ಲಿ ಅಜೇಯ 122 ರನ್ ಬಾರಿಸಿ ಚುಟುಕು ಕ್ರಿಕೆಟ್‌ನಲ್ಲಿ ತನ್ನ ಮೊದಲ ಶತಕ ದಾಖಲಿಸಿದರು. ಆ ವೇಳೆ ಏಷ್ಯಾ ಕಪ್‌ನಿಂದ ಹೊರಬಿದ್ದಿದ್ದ ಅಫ್ಘಾನಿಸ್ತಾನ ತಂಡದ ವಿರುದ್ಧ ವಿರಾಟ್ ಕೊಹ್ಲಿ ಶತಕ ಗಳಿಸಿದ್ದಕ್ಕೆ ಹಲವರು ದುರ್ಬಲ ತಂಡದ ವಿರುದ್ಧ ಶತಕ ಬಾರಿಸಿದ್ದಾರೆ ಎಂದು ವ್ಯಂಗ್ಯವಾಡಿದ್ದರು.