ರಮೇಶ್ ಜಾರಕಿಹೊಳಿ ಆದಷ್ಟು ಬೇಗ ಮಂತ್ರಿ ಆಗುತ್ತಾರೆ: ಯತ್ನಾಳ್ ಭರವಸೆ
ಧಾರವಾಡ, ನವೆಂಬರ್ 24 : ಸಿದ್ದರಾಮಯ್ಯ ಸ್ಥಿತಿ ಅಂಡುಸುಟ್ಟ ಬೆಕ್ಕಿನಂತಾಗಿದ್ದಾರೆ. ಒಮ್ಮೆ ಕೋಲಾರಕ್ಕೆ ಹೋಗುತ್ತಾರೆ. ಒಮ್ಮೆ ಚಾಮರಾಜನಗರಕ್ಕೆ ಹೋಗುತ್ತಾರೆ. ಇನ್ನೊಮ್ಮೆ ಚಾಮುಂಡೇಶ್ವರಿ, ಬೀಳಗಿ, ಬಾದಾಮಿಗೆ ಬರುತ್ತಾರೆ. ರಾಜ್ಯದಲ್ಲಿ 160 ಜನರಲ್ ಕ್ಷೇತ್ರಗಳಿವೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 160 ಜನರಲ್ ಕ್ಷೇತ್ರಗಳಿವೆ. ಆದರೂ ಸಿದ್ದರಾಮಯ್ಯಗೆ ಒಂದು ಕ್ಷೇತ್ರ ಸಿಗದಂತಾಗಿದೆ. ಯಾಕೆ ಹೀಗೆ ಓಡಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಕಾಂಗ್ರೆಸ್‌ನ ಮುಂದಿನ ಸ್ವಯಂಘೋಷಿತ ಮುಖ್ಯಮಂತ್ರಿ. ಅಂತಹ ವ್ಯಕ್ತಿಗೆ ಒಂದು ಕ್ಷೇತ್ರ ಇಲ್ಲದಾಗಿದೆ. ಇದು ಕಾಂಗ್ರೆಸ್‌ನ ಪರಿಸ್ಥಿತಿ ಎಂದು ಕಾಂಗ್ರೆಸ್ ವಿರುದ್ಧ ಬಸನಗೌಡ ಪಾಟೀಲ ಯತ್ನಾಳ್ ಲೇವಡಿ ಮಾಡಿದ್ದಾರೆ.
ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಸ್ಪರ್ಧೆ ಬೇಡ ಅಂತಾ ಸಂತೋಷ್ ಲಾಡ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಅದು ಅವರ ಪಕ್ಷದ ವಿಚಾರ. ಆದರೆ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಸೋಲುತ್ತಾರೆ ಎಂದು ಸಂತೋಷ ಲಾಡ್‌ಗೆ ಅನಿಸರಬೇಕು. ಅದಕ್ಕೆ ಹಾಗೆ ಹೇಳಿರಬೇಕು ಎಂದು ಯತ್ನಾಳ ಹೇಳಿದ್ದಾರೆ.
ಧಾರವಾಡಕ್ಕೆ ಬಂದರೆ ನೋಡಿಕೊಳ್ಳುತ್ತೇವೆಂದು ಸವಾಲುಗಳು ಬರುತ್ತಿರೋ ವಿಚಾರವಾಗಿ ತಿರುಗೇಟು ನೀಡಿದ ಅವರು, ಎಲ್ಲಾ ಸವಾಲುಗಳಿಗೂ ಉತ್ತರ ಕೊಡುತ್ತಿದ್ದೇನೆ. ಧಾರವಾಡದಲ್ಲಿಯೂ ಒಬ್ಬ ಹೇಳಿದ್ದ, ಆ ಸವಾಲು ತೆಗದುಕೊಂಡೇ ಇಂದು ಧಾರವಾಡಕ್ಕೆ ಬಂದಿದ್ದೇನೆ. ಮುಂದಿನ ಸಲ ಧಾರವಾಡ ನಗರಕ್ಕೆ ಬರುವೆ. ಇದೇನು ಪಾಕಿಸ್ತಾನ ಅಲ್ಲ. ಇದು ಹಿಂದೂಸ್ತಾನ. ಧಾರವಾಡದಲ್ಲಿ ಯಾವ ಚೌಕ್ ಹೇಳ್ತಿಯೋ ಅಲ್ಲಿ ಪೆಂಡಾಲ್ ಹಾಕಿ ಮಾತನಾಡುವೆ ಎಂದು ಸವಾಲು ಹಾಕಿದವರಿಗೆ ಯತ್ನಾಳ್ ತಿರುಗೇಟು ನೀಡಿದ್ದಾರೆ.
ಮಂಗಳೂರು ಕುಕ್ಕರ್ ಸ್ಪೋಟದ ವಿಚಾರದಲ್ಲಿ ತನಿಖೆಯಲ್ಲಿ ಯಾವುದೇ ವೈಫಲ್ಯ ಆಗಿಲ್ಲ. ಹಿಂದೂ ಹೆಸರು ಹೇಳಿಕೊಂಡು ಮೋಸ ಮಾಡಿದ್ದಾರೆ. ಈಗಾಗಲೇ ತನಿಖೆ ಆಗುತ್ತಿದೆ, ಅಂಥವರ ಮೇಲೆ ಕ್ರಮ ಆಗಿಯೇ ಆಗುತ್ತದೆ ಎಂದರು.
ಪರೇಶ ಮೇಸ್ತಾ ಕೇಸ್ ಬಿ ರಿಪೋರ್ಟ್ ವಿಚಾರವಾಗಿ ಮಾತನಾಡಿದ ಯತ್ನಾಳ, ಇನ್ನೊಮ್ಮೆ ತನಿಖೆ ಮಾಡಿಸುವ ಚಿಂತನೆ ನಡೆದಿದೆ. ಇನ್ನೊಮ್ಮೆ ಪುನರ್ ತನಿಖೆ ಆಗಬೇಕಿದೆ. ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಂಡಿದೆ. ಪರಿಶೀಲನೆ ಮಾಡುವಂತೆ ಸರ್ಕಾರ ಈಗಾಗಲೇ ಸಿಬಿಐಗೆ ಕೇಳಿಕೊಂಡಿದ್ದೇನೆ ಎಂದರು.
ಬಿಜೆಪಿ ನಾಯಕರು ಬೇರೆ ಪಕ್ಷಕ್ಕೆ ಹೋಗುವ ವಿಚಾರವಾಗಿ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಹೋಗುವುದಿಲ್ಲ, ಆ ವಿಶ್ವಾಸ ನನಗಿದೆ. ಆದಷ್ಟು ಬೇಗ ಅವರು ಮಂತ್ರಿ ಆಗುತ್ತಾರೆ. ಅವರ ಭವಿಷ್ಯ ಇಲ್ಲಿ ಇದೆ. ಮುಂದೆ ಮಂತ್ರಿ ಮಂಡಲ ವಿಸ್ತರಣೆ ಆಗುತ್ತದೆ. ಅದರಲ್ಲಿ ರಮೇಶ್ ಜಾರಕಿಹೊಳಿ ಅವರೇ ಸಚಿವ ಆಗುತ್ತಾರೆ. ನಾನು ಅದರಲ್ಲಿ ಆಕಾಂಕ್ಷಿ ಅಲ್ಲ. ಮಂತ್ರಿ ಮಂಡಲದಲ್ಲಿ ಅವರ ಹೆಸರೇ ಮೊದಲು ಇದೆ ಎಂದು ಯತ್ನಾಳ್ ಹೇಳಿದ್ದಾರೆ.