ಯುಪಿಯಲ್ಲಿ ಮುಂದುವರಿದ ಬುಲ್ಡೋಜರ್ ದಾಳಿ; ಅನ್ಸಾರಿ ಪುತ್ರನ ಐಶಾರಾಮಿ ಮನೆ ನೆಲಸಮ

ಲಕ್ನೋ : ಜೈಲಿನಲ್ಲಿರುವ ದರೋಡೆಕೋರ-ರಾಜಕಾರಣಿ ಮುಖ್ತಾರ್ ಅನ್ಸಾರಿಯ ಪುತ್ರ, ಜೈಲಿನಲ್ಲಿರುವ ಶಾಸಕ ಅಬ್ಬಾಸ್ ಅನ್ಸಾರಿ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಶುಕ್ರವಾರ ಬುಲ್ಡೋಜರ್ ಕ್ರಮವನ್ನು ಪ್ರಾರಂಭಿಸಿದ್ದಾರೆ. ಮೌ ಜಿಲ್ಲೆಯ ಜಹಾಂಗೀರಾಬಾದ್‌ನಲ್ಲಿ ಅಧಿಕಾರಿಗಳು ಎರಡು ಅಂತಸ್ತಿನ ಮನೆಯನ್ನು ಕೆಡವಿದ್ದಾರೆ.
ಅಬ್ಬಾಸ್ ಮತ್ತು ಉಮರ್ ಅನ್ಸಾರಿ ಅವರು ಎರಡು ಅಂತಸ್ತಿನ ಮನೆಯನ್ನು ನಿರ್ಮಿಸಲು ಅಗತ್ಯ ಅನುಮೋದನೆಯನ್ನು ಪಡೆದಿಲ್ಲ ಮತ್ತು ಅದರ ನಕ್ಷೆಯನ್ನು ಅಂಗೀಕರಿಸಲಿಲ್ಲ ಎಂಬ ಆರೋಪದ ನಂತರ ಈ ಕ್ರಮವನ್ನು ಪ್ರಾರಂಭಿಸಲಾಗಿದೆ.
ಎರಡಂತಸ್ತಿನ ಮನೆಯನ್ನು ಕೆಡವಲು ಸಿಟಿ ಮ್ಯಾಜಿಸ್ಟ್ರೇಟ್ ಆದೇಶ ಹೊರಡಿಸಿದ್ದರು. ಬಳಿಕ ಶುಕ್ರವಾರ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಸಿಬಂದಿ ಹಾಗೂ ಇತರೆ ಅಧಿಕಾರಿಗಳು ಐಶಾರಾಮಿ ಮನೆಯನ್ನು ನೆಲಸಮಗೊಳಿಸಿದ್ದಾರೆ.
ಮೌ ಶಾಸಕ ಅಬ್ಬಾಸ್ ಅನ್ಸಾರಿ ಕಳೆದ ಮೂರು ತಿಂಗಳಿಂದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲಿನಲ್ಲಿದ್ದರು.