ಮೋದಿ ಕುರಿತ ಬಿಬಿಸಿ ಸಾಕ್ಷ್ಯ ಚಿತ್ರ: ಉಲ್ಟಾ ಹೊಡೆದ ಅಮೆರಿಕ

ಮೋದಿ ಕುರಿತ ಬಿಬಿಸಿ ಸಾಕ್ಷ್ಯ ಚಿತ್ರ: ಉಲ್ಟಾ ಹೊಡೆದ ಅಮೆರಿಕ

ರೇಂದ್ರ ಮೋದಿಯವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಗುಜರಾತಿನಲ್ಲಿ ನಡೆದ ಗೋಧ್ರೋತ್ತರ ಘಟನೆಗೆ ಸಂಬಂಧಿಸಿದಂತೆ ಬಿಬಿಸಿ ತಯಾರಿಸಿರುವ ಸಾಕ್ಷ್ಯ ಚಿತ್ರಕ್ಕೆ ಭಾರತದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಘಟನಾವಳಿಗಳನ್ನು ಸಂಪೂರ್ಣವಾಗಿ ತಿರುಚಲಾಗಿದೆ ಎಂದು ಆರೋಪಿಸಿ ಸಾಮಾಜಿಕ ವೇದಿಕೆಗಳಿಂದ ಇದನ್ನು ಹಿಂಪಡೆಯುವಂತೆ ವಿದೇಶಾಂಗ ಸಚಿವಾಲಯ ಯೂಟ್ಯೂಬ್ ಸೇರಿದಂತೆ ಹಲವು ಮಾಧ್ಯಮಗಳಿಗೆ ಸೂಚಿಸಿದೆ.

ಇದರ ಮಧ್ಯೆಯು ಭಾರತದಲ್ಲಿ ಕೆಲವರು ಬಿಬಿಸಿ ತಯಾರಿಸಿರುವ 'ಇಂಡಿಯಾ: ದಿ ಮೋದಿ ಕ್ವೆಶ್ಚನ್' ಸಾಕ್ಷ್ಯ ಚಿತ್ರವನ್ನು ಬಹಿರಂಗವಾಗಿಯೇ ಪ್ರಸಾರ ಮಾಡುತ್ತಿದ್ದು, ಕೇರಳದ ತಿರುವನಂತಪುರದ ಬೀಚಿನಲ್ಲಿ ಯುವ ಕಾಂಗ್ರೆಸ್ ಘಟಕದಿಂದ ಸಾರ್ವಜನಿಕ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೆ ಹೈದರಾಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕೂಡ ಈ ಚಿತ್ರವನ್ನು ಪ್ರಸಾರ ಮಾಡಿದ್ದರು.

ಇದರ ಮಧ್ಯೆ ಮೋದಿ ಕುರಿತ ಬಿಬಿಸಿ ಸಾಕ್ಷ್ಯ ಚಿತ್ರದ ವಿಚಾರಕ್ಕೆ ಸಂಬಂಧಿಸಿದಂತೆ ಇದುವರೆಗೂ ಅಂತರ ಕಾಯ್ದುಕೊಂಡಿದ್ದ ಅಮೆರಿಕ ಗುರುವಾರದಂದು ಉಲ್ಟಾ ಹೊಡೆದಿದೆ. ಸಾಕ್ಷ್ಯ ಚಿತ್ರ ನಿರ್ಬಂಧಕ್ಕೆ ಅಮೆರಿಕ ವಿದೇಶಾಂಗ ಇಲಾಖೆ ವಕ್ತಾರ ನೆಡ್ ಪ್ರೈಸ್ ಅಪಸ್ವರ ಎತ್ತಿದ್ದು, ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಮುಕ್ತ ಮಾಧ್ಯಮಕ್ಕೆ ಅವಕಾಶ ನೀಡಿದಾಗ ಮಾತ್ರ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಸೂಕ್ತ ಬೆಲೆ ಸಿಗುತ್ತದೆ. ಪತ್ರಿಕೋದ್ಯಮ ಮುಕ್ತವಾಗಿರಬೇಕು ಎಂಬುದನ್ನು ಅಮೆರಿಕ ಬಯಸುತ್ತದೆ ಎಂದು ತಿಳಿಸಿದ್ದಾರೆ.