ಮೈಸೂರಲ್ಲಿ ನದಿಗೆ ಹಾರಿ ಪ್ರಾಣಬಿಟ್ಟ ವಿವಾಹಿತ ಯುವಕ-ಯುವತಿ! ಸಾವಿನ ಬಗ್ಗೆ ಅನುಮಾನ, ಮೃತನ ಪತ್ನಿ ದೂರು

ಮೈಸೂರು: ವಿವಾಹಿತ ಯುವಕ ಹಾಗೂ ಯುವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪಟ್ಟಣದ ಕಪಿಲಾ ಸೇತುವೆ ಬಳಿ ನಡೆದಿದೆ.
ಮೂಲತಃ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಲಕ್ಕೂರು ಗ್ರಾಮದ ಮಣಿಕಂಠ(28) ಹಾಗೂ ಅದೇ ತಾಲೂಕಿನ ಆಲಹಳ್ಳಿ ನಿವಾಸಿ ವಸಂತ(29) ಮೃತಪಟ್ಟ ದುರ್ದೈವಿಗಳು.
ಮಣಿಕಂಠ ಅವರು ವಿವಾಹಿತರಾಗಿದ್ದು, ಮೈಸೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ವಸಂತ ಅವರು ಮಣಿಕಂಠನ ಸೋದರ ಸಂಬಂಧಿಯಾಗಿದ್ದು, ಉದ್ಯೋಗ ಹರಸಿ ಸಂದರ್ಶನಕ್ಕೆಂದು ಮೈಸೂರಿಗೆ ಆಗಮಿಸಿದ್ದರು. ಮಣಿಕಂಠ ಅವರ ಮನೆಯಲ್ಲಿ ವಸಂತ ತಂಗಿದ್ದರು. ಶುಕ್ರವಾರ ಬೆಳಗ್ಗೆ ವಸಂತ ಅವರನ್ನು ಉದ್ಯೋಗದ ಸಂದರ್ಶನಕ್ಕೆಂದು ಮಣಿಕಂಠ ಕರೆದು ಹೋಗಿದ್ದರು. ಬಳಿಕ ಅವರು ಬಲಮುರಿಗೆ ತೆರಳಿದ್ದರು ಎನ್ನಲಾಗಿದ್ದು ಮನೆಗೆ ಬಂದಿರಲಿಲ್ಲ. ಆದರೆ ಅವರು ಪಟ್ಟಣದ ಕಬಿನಿ ಸೇತುವೆ ಬಳಿ ಬೈಕ್ ನಿಲ್ಲಿಸಿ, ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಮೃತರ ಶವಗಳು ಶನಿವಾರ ಪತ್ತೆಯಾಗಿದ್ದು ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಇಡಲಾಗಿದೆ.
ಮೃತ ಮಣಿಕಂಠನ ಪತ್ನಿ ಜ್ಯೋತಿ ಅವರು ಆತ್ಮಹತ್ಯೆ ಬಗ್ಗೆ ಸಂಶಯ ವ್ಯಕ್ತಪಡಿಸಿ ದೂರು ನೀಡಿರುವ ಹಿನ್ನೆಲೆಯಲ್ಲಿ ತಿ.ನರಸೀಪುರ ಪಟ್ಟಣದ ಪಿಎಸ್ಐ ತಿರುಮಲೇಶ್ ಅವರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಠಾಣೆಯ ಪ್ರಭಾರ ನಿರೀಕ್ಷಕ ಆನಂದ್ ಕುಮಾರ್ ಅವರು ತನಿಖೆ ಕೈಗೊಂಡಿದ್ದಾರೆ.