ಮೂರು ತಿಂಗಳಿಂದ ಸಂಬಳವಿಲ್ಲ: ಸಚಿವರಿಗೆ ದೂರು

ಮೂರು ತಿಂಗಳಿಂದ ಸಂಬಳವಿಲ್ಲ: ಸಚಿವರಿಗೆ ದೂರು

ಮಂಗಳೂರು: 'ಮೂರು ತಿಂಗಳುಗಳಿಂದ ಸಂಬಳ ಸಿಕ್ಕಿಲ್ಲ. ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ. ಸಂಬಲ ಸಕಾಲಕ್ಕೆ ಪಾವತಿ ಆಗುವಂತೆ ವ್ಯವಸ್ಥೆ ಕಲ್ಪಿಸಬೇಕು' ಎಂದು ದಕ್ಷಿಣ ಕನ್ನಡ ಜಿಲ್ಲೆಯ ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯಗಳ ಸಿಬ್ಬಂದಿಯ ನಿಯೋಗವು ಹಿಂದುಳಿದ ವರ್ಗಗಳ ಅಭಿವೃದ್ಧಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಶನಿವಾರ ಇಲ್ಲಿ ಮನವಿ ಸಲ್ಲಿಸಿತು.

'ಕೆಲವರಿಗೆ ನವೆಂಬರ್‌ ತಿಂಗಳ ಬಳಿಕ ಸಂಬಳ ಪಾವತಿ ಆಗಿಲ್ಲ. ಕೆಲವರಿಗೆ ಡಿಸೆಂಬರ್‌ ತಿಂಗಳವರೆಗಿನ ಸಂಬಳ ಸಿಕ್ಕಿದೆ. ಯಾವಾಗಲೂ ತಿಂಗಳ 20ನೇ ತಾರೀಕಿಗೆ ಮುನ್ನ ಸಂಬಳ ನೀಡುವುದಿಲ್ಲ. ಈ ಆರ್ಥಿ ವರ್ಷದ ಆರಂಭದಲ್ಲೂ ಇದೇ ರೀತಿ ಸಮಸ್ಯೆ ಆಗಿತ್ತು. ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ ಬಳಿಕ ಸಂಬಳ ಪಾವತಿ ಮಾಡಲಾಗಿದೆ' ಎಂದು ಸಿಬ್ಬಂದಿಯ ನಿಯೋಗದಲ್ಲಿದ್ದವರು ಅಹವಾಲು ಹೇಳಿಕೊಂಡರು.

ಇಲಾಖೆಯ ಕಾರ್ಯದರ್ಶಿ ಅವರ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ ಸಚಿವರು,'ಸಂಬಳ ಪಾವತಿ ಆಗದಿದ್ದರೆ, ಸಿಬ್ಬಂದಿಗೆ ಸಮಸ್ಯೆ ಆಗುತ್ತದೆ. ಹಣ ಬಿಡುಗಡೆಗೆ ತಕ್ಷಣ ಕ್ರಮಕೈಗೊಳ್ಳಬೇಕು' ಎಂದು ಸೂಚನೆ ನೀಡಿದರು.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು, 'ಈ ವರ್ಷ ಇಲಾಖೆಯ 100 ವಸತಿ ಶಾಲೆಗಳಲ್ಲಿ ಪಿ.ಯು. ತರಗತಿಗಳನ್ನು ಆರಂಭಿಸಲಿದ್ದೇವೆ. ಬಡ ವಿದ್ಯಾರ್ಥಿಗಳು ಇದರಿಂದ ‌ಗುಣಮಟ್ಟ ಶಿಕ್ಷಣ ಪಡೆಯಲು ಇದರಿಂದ ಅನುಕೂಲವಾಗಲಿದೆ' ಎಂದರು.

'ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ತಲಾ 100 ಮಂದಿಗೆ ದ್ವಿಚಕ್ರವಾಹನ ನೀಡಲಿದ್ದೇವೆ. ಹಿಂದುಳಿದ ವರ್ಗಗಳ 8 ಸಾವಿರ ನಿರುದ್ಯೋಗಿ ಮಹಿಳೆಯರಿಗೆ ಹೊಲಿಗೆಯಂತ್ರ ನೀಡಲಿದ್ದೇವೆ. ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲಿ 35ರಿಂದ 40 ಮಹಿಳೆಯರಿಗೆ ಈ ಸೌಲಭ್ಯ ಸಿಗಲಿದೆ' ಎಂದು ಸಚಿವರು ತಿಳಿಸಿದರು.