ಮಕ್ಕಳು ಪರೀಕ್ಷೆಯಲ್ಲಿ ತಪ್ಪು ಮಾಡಿದ್ರೆ ಮಾರ್ಕ್ಸ್ ಹೋಗುತ್ತೆ; ಶಿಕ್ಷಕರು ಮೌಲ್ಯಮಾಪನದಲ್ಲಿ ತಪ್ಪು ಮಾಡಿದ್ರೆ ಕೆಲಸಾನೇ ಹೋಗುತ್ತೆ!

ಬೆಂಗಳೂರು: ಇನ್ನು ಮುಂದೆ ಶಿಕ್ಷಕರು ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡುವಾಗ ತಪ್ಪು ಮಾಡುವಂತಿಲ್ಲ. ನಿರ್ಲಕ್ಷ್ಯ ವಹಿಸಿದರೆ ಭಾರಿ ಬೆಲೆ ತೆರುವ ಪರಿಸ್ಥಿತಿ ಬರಲಿದೆ.
2022-2023 ಸಾಲಿನಿಂದ ಶಿಕ್ಷಣ ಇಲಾಖೆ ಮೌಲ್ಯಮಾಪನದಲ್ಲಿ ಭಾಗಿಯಾಗುವ ಉಪನ್ಯಾಸಕರು ಎಚ್ಚರ ವಹಿಸಬೇಕಾಗಿದೆ.
2021-22ರಲ್ಲಿ ಎಂಟು ಉಪನ್ಯಾಸಕರು ಮೌಲ್ಯಮಾಪನ ಮಾಡುವಾಗ ನಿರ್ಲಕ್ಷ್ಯ ತೋರಿಸಿದ್ದರು. ಇವರು ಇಂಗ್ಲಿಷ್ ಮತ್ತು ಭೌತಶಾಸ್ತ್ರ ವಿಷಯಗಳ ಉಪನ್ಯಾಸಕರಾಗಿದ್ದರು. ಇವರಲ್ಲಿ ಒಬ್ಬರಂತೂ ಮರು ಮೌಲ್ಯಮಾಪನ ಮಾಡುವಾಗ ಒಂಬತ್ತು ಪುಟಗಳನ್ನು ತಿದ್ದಿರಲಿಲ್ಲ. ಇಂತಹ ಎಂಟು ಉಪನ್ಯಾಸಕರನ್ನು ಅಮಾನತು ಮಾಡುವ ನಿರ್ಧಾರಕ್ಕೆ ಇಲಾಖೆ ಬಂದಿದೆ. ಇದು ಉಳಿದ ಉಪನ್ಯಾಸಕರಿಗೆ ಎಚ್ಚರಿಕೆಯ ಗಂಟೆ ಆಗಿದೆ.
'ಕಳೆದ ಒಂದು ತಿಂಗಳ ಹಿಂದೆ SSLC ಹಾಗೂ PUC ಪರೀಕ್ಷೆಗಳ ಪೂರ್ವ ತಯಾರಿ ಸಭೆ ನಡೆಸಲಾಗಿತ್ತು. ಸಭೆಯಲ್ಲಿ ಮೌಲ್ಯಮಾಪನದಲ್ಲಿ ತಪ್ಪೆಸಗಿದ ಉಪನ್ಯಾಸಕರ ಮೇಲೆ ಕ್ರಮಕ್ಕೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ನಿರ್ಧಾರಗಳು 2022-2023 ಸಾಲಿನ ಪರೀಕ್ಷೆಮೌಲ್ಯಮಾಪನಕ್ಕೂ ಅನ್ವಯವಾಗಲಿದೆ' ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿಸಿ ನಾಗೇಶ್ ಮಾಹಿತಿ ನೀಡಿದ್ದಾರೆ.